ಸಾರಾಂಶ
ಧಾರವಾಡ:
ಕೇಂದ್ರ, ರಾಜ್ಯ ಸರ್ಕಾರಗಳ ರೈತ ವಿರೋಧಿ, ಕಾರ್ಪೋರೇಟ್ ಪರ ಕೃಷಿ ನೀತಿಗಳನ್ನು ಹಿಂಪಡೆಯಲು, ಜಿಲ್ಲೆಯ ಎಲ್ಲ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು, ಬೆಳೆ ನಷ್ಟ ಪರಿಹಾರ, ಹದಗೆಟ್ಟ ರಸ್ತೆ ದುರಸ್ತಿಗೆ ಒತ್ತಾಯಿಸಿ ಮಂಗಳವಾರ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಕಲಾಭವನ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.ಅನ್ನದಾತರ ಯೋಗಕ್ಷೇಮವನ್ನು ಸರಿಯಾಗಿ ನೋಡಿಕೊಳ್ಳುವುದು ಪ್ರತಿಯೊಂದು ನಾಗರಿಕ ಸಮಾಜದ ಆದ್ಯ ಕರ್ತವ್ಯ. ಆದರೆ, ಈ ವರೆಗೆ ಆಳಿರುವ ಎಲ್ಲ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಮೂಲಭೂತ ಜವಾಬ್ದಾರಿ ನಿರಾಕರಿಸಿವೆ. ದೇಶಾದ್ಯಂತ ಇಂದು ರೈತ ಸಮುದಾಯ ಮತ್ತು ಕೃಷಿ ಕಾರ್ಮಿಕರು ಅತ್ಯಂತ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಸಾಲದ ಹೊರೆಯಿಂದ ಸಾವಿರಾರು ರೈತರು ಆತ್ಮಹತ್ಯೆಗೆ ಮೊರೆ ಹೋಗುತ್ತಿದ್ದಾರೆ. ಪ್ರತಿದಿನವೂ ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕಗಳಂತಹ ಕೃಷಿ ಒಳಸುರಿಗಳ ಬೆಲೆ ಗಗನಕ್ಕೇರುತ್ತಿವೆ. ಆದರೆ ಯಾವ ಸರ್ಕಾರಗಳೂ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ದೊರಕುವಂತೆ ಕ್ರಮ ತೆಗೆದುಕೊಳ್ಳದಿರುವುದು ವಿಷಾದದ ಸಂಗತಿ ಎಂದು ಮನವಿಯಲ್ಲಿ ಅಲವತ್ತುಕೊಂಡರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಬೆಳೆ ಪರಿಹಾರ ಇನ್ನು ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಜಮೆ ಆಗಲಿದೆ. ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲಾಮಟ್ಟದಲ್ಲಿ ಬಗೆಹರಿಸುವ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಕಾರ್ಯದರ್ಶಿ ಶರಣು ಗೋನವಾರ, ಉಪಾಧಕ್ಷ ಹನುಮೇಶ ಹುಡೇದ, ಜಿಲ್ಲಾ ಸಮಿತಿ ಸದಸ್ಯರಾದ ಅಲ್ಲಾವುದೀನ್ ಅಡ್ಲಿ, ಕಲ್ಲಪ್ಪ, ಗೌರಮ್ಮ, ಅಣ್ಣಪ್ಪ ಕುಲಕರ್ಣೀ, ಶಿವಲಿಂಗಪ್ಪ ಉಣಕಲ್, ಸಜ್ಜನ್, ಶ್ರೀದೇವಿ ದೊಡ್ಡಮನೆ, ಬಸ್ಸಪ್ಪ ನೇಕಾರ ಇದ್ದರು.