ಸಾರಾಂಶ
ಸಾಗರ: ಜಮ್ಮುಕಾಶ್ಮೀರದ ಪಹಲ್ಗಾಮಂನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಶನಿವಾರ ಪಟ್ಟಣದಲ್ಲಿ ಸಾಂಘಿಕ ವರ್ತಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಪಟ್ಟಣದ ಕಿರಾಣಿ ವರ್ತಕರು, ಜವಳಿ ವರ್ತಕರು, ಚಿನ್ನಬೆಳ್ಳಿ ವರ್ತಕರು, ಔಷಧ ವ್ಯಾಪಾರಿಗಳು, ಅಡಕೆ ವ್ಯಾಪಾರಿಗಳು ಸೇರಿದಂತೆ ಬಹುತೇಕ ವರ್ತಕರು ಪಾಲ್ಗೊಂಡು ಭಯೋತ್ಪಾದಕರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.ಐತಪ್ಪ ವೃತ್ತದಿಂದ ಆರಂಭಗೊಂಡ ಮೌನ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬಳಿಕ ಹಳೆ ಬಸ್ ನಿಲ್ದಾಣದಲ್ಲಿ ಖಂಡನಾ ಸಭೆ ನಡೆಸಲಾಯಿತು. ಅರ್ಧದಿನ ಬಹುತೇಕ ವ್ಯಾಪಾರ ವಹಿವಾಟು ಸ್ಥಗಿತಗೊಂಡ ಪರಿಣಾಮ ಬಂದ್‌ನಂತೆ ಗೋಚರಿಸುತ್ತಿತ್ತು.
ಸಭೆಯಲ್ಲಿ ಅಡಕೆ ವರ್ತಕ ಅಶ್ವಿನಿಕುಮಾರ್ ಮಾತನಾಡಿ, ಪಹಲ್ಗಾಮ್ ನಡೆದ ಹತ್ಯೆ ಖಂಡಿಸಿ ಹಳ್ಳಿಹಳ್ಳಿಯಲ್ಲಿ ಜನರು ಪ್ರತಿಭಟನೆ ನಡೆಸಬೇಕು. ಇದೊಂದು ಪೈಶಾಚಿಕ ಕೃತ್ಯವಾಗಿದೆ. ಪ್ರವಾಸಕ್ಕೆ ಬಂದವರ ಮೇಲೆ ಗುಂಡು ಹಾರಿಸಿದ್ದಾರೆ ಎಂದರೆ ಅವರಲ್ಲಿ ಮಾನವೀಯತೆ ಎನ್ನುವುದು ಕನಿಷ್ಠವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಂತಹ ಘಟನೆ ನಡೆದಾಗ ಪಕ್ಷಾತೀತವಾಗಿ ಎಲ್ಲರೂ ಖಂಡಿಸಬೇಕು. ಇಷ್ಟಾದರೂ ಕೆಲವರು ಪಾಕಿಸ್ತಾನವನ್ನು ವಹಿಸಿಕೊಂಡು ಮಾತನಾಡುತ್ತಿರುವುದು ಖಂಡನೀಯ. ಯಾರಿಗೆ ಪಾಕಿಸ್ತಾನದ ಮೇಲೆ ಅಭಿಮಾನ ಇದೆಯೋ ಅವರು ಅಲ್ಲಿಗೆ ಹೋಗಿ ವಾಸ ಮಾಡಲಿ. ಉಗ್ರವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಕೇಂದ್ರ ಸರ್ಕಾರ ಭಯೋತ್ಪಾದಕರ ವಿರುದ್ಧ ನಿರ್ದಾಕ್ಷಿಣ್ಯಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವರ್ತಕರ ಸಂಘದ ಅಧ್ಯಕ್ಷ ಯು.ಜೆ.ಮಲ್ಲಿಕಾರ್ಜುನ ಮಾತನಾಡಿ, ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಅಮಾಯಕ ಪ್ರವಾಸಿಗರ ಮೇಲೆ ನಡೆಸಿರುವ ದಾಳಿ ಖಂಡನೀಯ. ಅತ್ಯಂತ ಧಾರುಣವಾಗಿ ಪ್ರವಾಸಿಗರನ್ನು ಕೊಲ್ಲಲಾಗಿದೆ. ಇದೊಂದು ಅಮಾನವೀಯ, ಮೃಗೀಯ ಘಟನೆಯಾಗಿದೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ ಭದ್ರತಾ ವೈಫಲ್ಯ ಎಂದು ತೆಗಳುವ ಬದಲು ದುಷ್ಟರನ್ನು ಮಟ್ಟಹಾಕಲು ನೈತಿಕ ಧೈರ್ಯ ತುಂಬಬೇಕು ಎಂದು ಹೇಳಿದರು.ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್ ಮಾತನಾಡಿ, ಹೇಡಿಗಳ ರೀತಿಯಲ್ಲಿ ಬಂದು ೨೬ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿರುವ ಉಗ್ರಗಾಮಿಗಳ ಕೃತ್ಯ ಅಮಾನವೀಯವಾದದ್ದು. ಭಾರತ ಬದಲಾಗಿದ್ದು, ಗುಂಡಿಗೆ ಗುಂಡಿನಿಂದಲೇ ಉತ್ತರಿಸುವ ಶಕ್ತಿ ಬಂದಿದೆ. ಅಮಾಯಕರನ್ನು ಕೊಂದ ಉಗ್ರಗಾಮಿಗಳನ್ನು ನಮ್ಮ ಯೋಧರು ಹುಡುಕಿಹುಡುಕಿ ಕೊಲ್ಲುತ್ತಾರೆ. ಅಂತಹ ಶಕ್ತಿ ಭಾರತೀಯ ಸೈನ್ಯಕ್ಕಿದೆ. ಭಯೋತ್ಪಾದನೆ ಮೂಲೋಚ್ಚಾಟನೆಗೆ ಕೇಂದ್ರ ಸರ್ಕಾರಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಪ್ರಮುಖರಾದ ಸವಿತಾ ವಾಸು, ಪ್ರೇಮ ಕಿರಣ್ ಸಿಂಗ್, ಮಧುರಾ ಶಿವಾನಂದ್, ಭಾವನಾ ಸಂತೋಷ್, ಗಣೇಶಪ್ರಸಾದ್, ಸುಳಗೋಡು ಗಣಪತಿ, ಅನಿಲ್, ಚಂದ್ರಶೇಖರ್, ಪ್ರತಿಮಾ ಜೋಗಿ, ಐ.ವಿ.ಹೆಗಡೆ, ಕೆ.ವಿ.ಜಯರಾಮ್, ದೇವೇಂದ್ರಪ್ಪ, ಕವಿತಾ ಜಯಣ್ಣ ಇನ್ನಿತರರು ಇದ್ದರು.