ಬೌದ್ಧ ಸಮ್ಮೇಳನ ಕಾರ್ಯಕ್ರಮದ ಅಂಗವಾಗಿ ನಡೆಯುವ ಧಮ್ಮ ಯಾತ್ರೆಯನ್ನು ಯಶಸ್ವಿಯಾಗಿಸುವ ಮೂಲಕ ಮಹಾಸಮ್ಮೇಳನ ಅದ್ಧೂರಿಯಾಗಿ ನಡೆಯಲಿ, ಇದರ ಜವಾಬ್ದಾರಿ ಹೊತ್ತ ಸಮಿತಿಯು ಪ್ರತಿ ಗ್ರಾಮಗಳಲ್ಲೂ ಬುದ್ಧರ ಸಂದೇಶ ತಲುಪಿಸುವ ನಿಟ್ಟಿನಲ್ಲಿ ಮುಂದಾಗಲಿ, ಬುದ್ಧ ಒಂದು ಸಮಾಜಕ್ಕೆ ಮೀಸಲಾದವರಲ್ಲ, ಅವರೊಬ್ಬ ಶ್ರೇಷ್ಠ ದಾರ್ಶನಿಕರು, ಅವರ ಸಂದೇಶ ಮನೆ- ಮನೆಗಳಲ್ಲೂ ತಲುಪುವಂತಾಗಬೇಕು .

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

‌ಅಂತಾರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನದ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಧಮ್ಮ ಪಯಣ ಜಾಗೃತಿ ಜಾಥಾವನ್ನು ಪಟ್ಟಣದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ವಿಧ್ಯುಕ್ತವಾಗಿ ಚಾಲನೆ ನೀಡಿದರು.

ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಧಮ್ಮ ಪಯಣ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಧಮ್ಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಜೊತೆಗೆ ಮುಂದಿನ ತಿಂಗಳು ಚಾ.ನಗರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಬೌದ್ಧ ಧಮ್ಮ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಈಗಾಗಲೇ ಬುದ್ಧನ ಸಂದೇಶ ಗ್ರಾಮಗಳಲ್ಲಿ ಪ್ರಸಾರಕ್ಕಾಗಿ ನಾಲ್ಕು ರಥಗಳ ಮೂಲಕ ಜಾಥಾ ಪ್ರಾರಂಭವಾಗಿದೆ. ಗುಂಡ್ಲುಪೇಟೆ ರಥ ಯಾತ್ರೆಯೂ ಗಡಿಯಂಚಿನ ಕ್ಯಾಲಿಕಟ್ ನಿಂದ ಆರಂಭವಾಗಿದ್ದು ಎಲ್ಲಾ ಧರ್ಮಗಳ, ಎಲ್ಲಾ ವರ್ಗಗಳ ಜನತೆ ಇದಕ್ಕೆ ಸಹಕಾರ ನೀಡಬೇಕು, ಸಮ್ಮೇಳನದಲ್ಲಿ ಅನೇಕ ಧರ್ಮಗಳ ಧರ್ಮಗುರುಗಳು, ಹಿಂದೂ ಸ್ವಾಮೀಜಿಗಳನ್ನು ಗೌರವದಿಂದ ಬರಮಾಡಿಕೊಳ್ಳಲಾಗುವುದು, ಶ್ರೀಲಂಕಾ, ನೇಪಾಳ ಸೇರಿ ಹಲವು ದೇಶಗಳಿಂದ ಬುದ್ಧನ ಸಂದೇಶ ಪಸರಿಸುವ ಬುದ್ಧರ ಅನುಯಾಯಿಗಳನ್ನು ಗೌರವಪೂರ್ವಕವಾಗಿ ಆಹ್ವಾನ ನೀಡಲಾಗುವುದು, 2 ದಿನಗಳ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನತೆ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

ಈ ವೇಳೆ ಚನ್ನಾಲಿಂಗನಹಳ್ಳಿ ಬೌದ್ಧ ವಿಹಾರದ ಮನೋರಕ್ಖಿತ ಬಂತೇಜಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿ, ಧಮ್ಮ ಜಾಗೃತಿ ಜಾಥಾ ಯಶಸ್ವಿಗೆ ಸಹಕರಿಸಿ, 2 ದಿನಗಳ ಸಮ್ಮೇಳನದಲ್ಲೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಬೌದ್ಧ ಸಮ್ಮೇಳನ ಕಾರ್ಯಕ್ರಮದ ಅಂಗವಾಗಿ ನಡೆಯುವ ಧಮ್ಮ ಯಾತ್ರೆಯನ್ನು ಯಶಸ್ವಿಯಾಗಿಸುವ ಮೂಲಕ ಮಹಾಸಮ್ಮೇಳನ ಅದ್ಧೂರಿಯಾಗಿ ನಡೆಯಲಿ, ಇದರ ಜವಾಬ್ದಾರಿ ಹೊತ್ತ ಸಮಿತಿಯು ಪ್ರತಿ ಗ್ರಾಮಗಳಲ್ಲೂ ಬುದ್ಧರ ಸಂದೇಶ ತಲುಪಿಸುವ ನಿಟ್ಟಿನಲ್ಲಿ ಮುಂದಾಗಲಿ, ಬುದ್ಧ ಒಂದು ಸಮಾಜಕ್ಕೆ ಮೀಸಲಾದವರಲ್ಲ, ಅವರೊಬ್ಬ ಶ್ರೇಷ್ಠ ದಾರ್ಶನಿಕರು, ಅವರ ಸಂದೇಶ ಮನೆ- ಮನೆಗಳಲ್ಲೂ ತಲುಪುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಬಾಲರಾಜು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಅಂಬೇಡ್ಕರ್ ಸಂಘದ ಅಧ್ಯಕ್ಷ ಆನಂದಮೂರ್ತಿ, ಅಂಬೇಡ್ಕರ್ ಪ್ರತಿಮೆ ನಿರ್ಮಾತೃ ಓಲೆ ಮಹದೇವ, ಮುಳ್ಳೂರು ಶಿವಮಲ್ಲು, ವೆಂಕಟರಮಣ(ಪಾಪು), ಮಹದೇವಕುಮಾರ್, ಆನಂದರಾಜು ಇನ್ನಿತರರಿದ್ದರು.

---------

ಬುದ್ಧನ ಸಂದೇಶಗಳು ಸಾರ್ವಕಾಲಿಕವಾದುವು, ಅವರ ಸಂದೇಶ ತಲುಪಿಸುವಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಲಿದೆ, ಪ್ರತಿಯೊಂದು ಗ್ರಾಮಕ್ಕೂ ಬುದ್ಧನ ಸಂದೇಶ ತಲುಪುವಂತಾಗಬೇಕು, ಈನಿಟ್ಟಿನಲ್ಲಿ ನಾನು ಕಾರ್ಯಪ್ರವೃತ್ತನಾಗಿದ್ದೇನೆ, ಸಮಿತಿಯ ಎಲ್ಲಾ ಸದಸ್ಯರು ಧಮ್ಮ ಜಾಥಾ ಯಶಸ್ವಿಗೆ ಸಹಕರಿಸಬೇಕು, ಅದೇ ರೀತಿಯಲ್ಲಿ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ

ಸಮ್ಮೇಳನ ಅದ್ಧೂರಿಯಾಗಿ ನಡೆಯಲು ಎಲ್ಲರೂ ಸಹಕರಿಸಬೇಕು, ನಮ್ಮ ಜಿಲ್ಲೆಗೆ ಈ ಅವಕಾಶ ಒದಗಿಬಂದಿರುವುದು ಹೆಮ್ಮೆಯ ಸಂಗತಿ.

- ಮುಳ್ಳೂರು ಶಿವಮಲ್ಲು, ಸಾಹಿತಿ ಹಾಗೂ ಬುದ್ಧನ ಅನುಯಾಯಿ