ಸಾರಾಂಶ
ಬ್ಯಾಡಗಿ: ತಾಲೂಕಿನಲ್ಲಿ ಪ್ರಸಕ್ತ ವರ್ಷ ಮುಂಗಾರು ಹಂಗಾಮಿನ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ. 98ರಷ್ಟು ಹೆಚ್ಚು(75 ಮಿಮೀ) ಮಳೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ರೈತರು ಬಸಿಗಾಲುವೆಗಳ ಮೂಲಕ ನಿಂತ ನೀರನ್ನು ಹರಿದು ಹೋಗುವಂತೆ ಕ್ರಮ ವಹಿಸಲು ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಸೂಚಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಾಡಿಕೆಯಂತೆ ಜೂನ್ ತಿಂಗಳಿನಲ್ಲಿ ಸರಾಸರಿ 38 ಮಿಮೀ ಮಳೆಯಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಆರಂಭದಲ್ಲೇ ಮಳೆಯ ಪ್ರಮಾಣ ಹೆಚ್ಚಾಗಿದ್ದರಿಂದ ಬಿತ್ತನೆ ಹಂತದಲ್ಲಿ ಕೃಷಿ ಭೂಮಿಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲು ಸಲಹೆ ನೀಡಿದ್ಧಾರೆ.ತಾಲೂಕಿನಲ್ಲಿ ಬಿತ್ತನೆ ಕಾರ್ಯ ಶೇ. 90ರಷ್ಟು ಮುಕ್ತಾಯಗೊಂಡಿದ್ದು, ಪ್ರಮುಖ ಬೆಳೆಗಳಾದ ಮೆಕ್ಕೆಜೋಳ ಹಾಗೂ ಹತ್ತಿ ಸೇರಿದಂತೆ ದ್ವಿದಳ ಧಾನ್ಯಗಳಾದ ಶೇಂಗಾ, ಹೆಸರು, ಅಲಸಂದೆ, ಸೋಯಾಬಿನ್ ಇನ್ನಿತರ ಬೆಳೆಗಳ ಬಿತ್ತನೆ ಕಾರ್ಯ ಮುಕ್ತಾಯ ಹಂತ ತಲುಪಿದೆ. ತಾಲೂಕಿನ ಇನ್ನೂ ಕೆಲವೆಡೆ ಈಗಾಗಲೇ ಮೊಳಕೆ ಕಾಣಿಸಿಕೊಳ್ಳುತ್ತಿದ್ದು, ರೈತರು ಕಳೆಯನ್ನು ತೆಗೆಯುವ ಮೂಲಕ ಹುಲ್ಲುಗೂಡದಂತೆ ಎಚ್ಚರಿಕೆ ವಹಿಸಲು ತಿಳಿಸಿದ್ದಾರೆ.
ಯೂರಿಯಾ ಗೊಬ್ಬರ ಮಿತವಾಗಿ ಬಳಸಿ: ಮಳೆ ಪ್ರಮಾಣ ಕಡಿಮೆಯಾದ ನಂತರ ಅಂತರ ಬೇಸಾಯ ನಡೆಸಿದ ಬಳಿಕವಷ್ಟೇ ಮೇಲುಗೊಬ್ಬರವಾಗಿ ಯೂರಿಯಾ ರಸಗೊಬ್ಬರವನ್ನು ಶಿಫಾರಸ್ಸಿನಂತೆ ಮಿತವಾಗಿ ಬಳಕೆ ಮಾಡದಲ್ಲಿ ಮಾತ್ರ ಬೆಳೆಗಳಿಗೆ ಸಾರಜನಕ ಒದಗಿಸಿ ಉತ್ತಮ ಫಸಲಿಗೆ ನೆರವಾಗಲಿದೆ. ಆದರೆ ಕೆಲ ರೈತರು ಶಿಫಾರಸ್ಸಿಗಿಂತ ಹೆಚ್ಚು ಯೂರಿಯಾ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ.ಇದರಿಂದ ಬೆಳೆಗಳ ಬೆಳವಣಿಗೆ ನಿಯಂತ್ರಣಕ್ಕೆ ಸಿಗದೇ ರೋಗ ಮತ್ತು ಕೀಟಬಾಧೆ ಹೆಚ್ಚಾಗುವ ಮೂಲಕ ಹೂವುಗಳ ಉತ್ಪಾದನೆ ಕಡಿಮೆಯಾಗಿ ಕಾಳು ಕಟ್ಟುವಿಕೆ ಸೀಮಿತಗೊಂಡು ಉತ್ಪಾದನೆಯಲ್ಲಿ ಕುಂಠಿತಗೊಳ್ಳುವ ಸಾಧ್ಯತೆಯಿದೆ. ಪರ್ಯಾಯವಾಗಿ ರೋಗನಾಶಕ ಹಾಗೂ ಕೀಟನಾಶಕ ಬಳಸಬೇಕಾದ ಅನಿವಾರ್ಯ ಎದುರಾಗಲಿದ್ದು, ಕೃಷಿ ಮೇಲಿನ ಖರ್ಚು ಎರಡು ಪಟ್ಟಾಗಲಿದೆ ಎಂದಿದ್ದಾರೆ.
ಶೇ. 25ರಷ್ಟು ಯೂರಿಯಾ ಹೀರಲಿವೆ: ಯೂರಿಯ ರಸಗೊಬ್ಬರದಲ್ಲಿನ ಶೇ. 20ರಿಂದ 25ರಷ್ಟು ಮಾತ್ರ ಬೆಳೆಗಳು ಹೀರಿಕೊಳ್ಳುವ ಸಾಮರ್ಥ್ಯವಿದ್ದು, ಅದಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯ ದ್ರಾವಣವನ್ನು ಪ್ರತಿ ಲೀ. ನೀರಿಗೆ 4 ಮಿಲೀ ಮಿಶ್ರಣ ಮಾಡಿ 20ರಿಂದ 25 ದಿನಗಳ ಅಂತರದಲ್ಲಿ 2 ಬಾರಿ ಎಲೆಗಳ ಮೇಲೆ ಸಿಂಪಡಿಸುವುದು ಸೂಕ್ತ. ನೀರಿನಲ್ಲಿ ಕರಗುವ 19:19:19/ ಪೋಟ್ಯಾಷ್ 0:0:50/13:0:45 ರಸಗೊಬ್ಬರ ಪ್ರತಿ ಲೀ. ನೀರಿಗೆ 1.5 ಗ್ರಾಂ ಬೆರೆಸಿ ಎಲೆಗಳ ಮೇಲೆ ಸಿಂಪರಣೆ ಮಾಡುವುದರಿಂದ ಬೆಳೆ ಬೇಗನೆ ಚೇತರಿಸಿಕೊಳ್ಳಲಿವೆ ಎಂದಿದ್ದಾರೆ. ಹೆಚ್ಚಿನ ವಿವರಗಳಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಲು ಸೂಚಿಸಿದ್ದಾರೆ.ವಿಶ್ವ ರಕ್ತದಾನಿಗಳ ದಿನಾಚರಣೆ ಇಂದುಹಾವೇರಿ: ವಿಶ್ವ ರಕ್ತದಾನಿಗಳ ದಿನಾಚರಣೆ ಹಾಗೂ ರಕ್ತದಾನ ಶಿಬಿರ ಜೂ. 19ರಂದು ಬೆಳಗ್ಗೆ 11 ಗಂಟೆಗೆ ನಗರದ ಶ್ರೀಭಗತ್‌ಸಿಂಗ್ ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯದಲ್ಲಿ ಜರುಗಲಿದ್ದು, ಆಸಕ್ತರು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬಹುದು.ರಕ್ತದಾನದ ಕುರಿತು ಜಾಗೃತಿ ಜಾಥಾ 10.30ಕ್ಕೆ ಶ್ರೀಭಗತ್‌ಸಿಂಗ್ ಪದವಿಪೂರ್ವ ಮತ್ತು ಪದವಿ ಮಹಾವಿದ್ಯಾಲಯದಿಂದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ಜರುಗಲಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.