ಕನ್ನಡಪ್ರಭ ವಾರ್ತೆ ಮೈಸೂರು

ಯುವಜನತೆ ತಮ್ಮ ಅಮೂಲ್ಯ ಜೀವನವನ್ನು ಮಾದಕ ವ್ಯಸನಕ್ಕೆ ಬಲಿಯಾಗದಂತೆ ಎಚ್ಚರ ವಹಿಸುವುದು ಅಗತ್ಯ ಎಂದು ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರೂಪಾ ತಿಳಿಸಿದರು.

ನಗರದ ಬಿ‌.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಲಾ ಕಾನೂನು ಕಾಲೇಜಿನ ಪ್ರಥಮ ವಾರ್ಷಿಕೋತ್ಸವ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು ಅವರು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಮಾದಕ ದ್ರವ್ಯ ಸೇವನೆಯು ವ್ಯಕ್ತಿಯ ಆರೋಗ್ಯ, ಕುಟುಂಬ, ಶಿಕ್ಷಣ, ಉದ್ಯೋಗ ಹಾಗೂ ಸಮಾಜದ ಶಾಂತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕ್ಷಣಿಕ ಸುಖಕ್ಕಾಗಿ ಆರಂಭವಾಗುವ ಈ ದುಶ್ಚಟವು ಅನೇಕ ಕುಟುಂಬಗಳನ್ನು ದುಃಖದತ್ತ ತಳ್ಳುತ್ತದೆ ಎಂದು ಅವರು ಎಚ್ಚರಿಸಿದರು.

ಕಾನೂನು ಮಾದಕ ದ್ರವ್ಯಗಳ ಅಕ್ರಮ ಸಾಗಣೆ, ಮಾರಾಟ ಮತ್ತು ಬಳಕೆಯ ವಿರುದ್ಧ ಕಠಿಣ ಕ್ರಮಗಳನ್ನು ಒದಗಿಸಿದೆ. ಆದರೆ, ಕಾನೂನಿಗಿಂತಲೂ ಮುಖ್ಯವಾದದ್ದು ಜಾಗೃತಿ, ಉತ್ತಮ ಸಂಸ್ಕಾರ ಮತ್ತು ಆತ್ಮ ಸಂಯಮ. ಪ್ರತಿಯೊಬ್ಬ ನಾಗರಿಕನೂ ಸಮಾಜವನ್ನು ವ್ಯಸನಮುಕ್ತವಾಗಿಸಲು ತನ್ನದೇ ಆದ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು ಎಂದರು.


ವಿದ್ಯಾರ್ಥಿಗಳೇ, ನಿಮ್ಮ ಕನಸುಗಳು ಮತ್ತು ಗುರಿಗಳೇ ನಿಮ್ಮ ಜೀವನದ ನಿಜವಾದ ಶಕ್ತಿ. ಕೆಟ್ಟ ಸ್ನೇಹ, ತಪ್ಪು ಅಭ್ಯಾಸಗಳು ಮತ್ತು ವ್ಯಸನಗಳಿಂದ ದೂರವಿದ್ದು ಶಿಕ್ಷಣ, ಕ್ರೀಡೆ, ಕಲೆ ಹಾಗೂ ಸಾಮಾಜಿಕ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮ್ಮ ಯಶಸ್ಸೇ ನಿಮ್ಮ ಕುಟುಂಬದ ಹೆಮ್ಮೆ ಹಾಗೂ ರಾಷ್ಟ್ರದ ಶಕ್ತಿಯಾಗುತ್ತದೆ ಎಂದು ಅವರು ಹೇಳಿದರು.

ಪೋಷಕರು ಮತ್ತು ಶಿಕ್ಷಕರು ಮಕ್ಕಳೊಂದಿಗೆ ಆತ್ಮೀಯವಾಗಿ ಮಾತನಾಡಿ, ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು, ಸರಿಯಾದ ಮಾರ್ಗದರ್ಶನ ನೀಡಬೇಕು. ಸಮಾಜದ ಪ್ರತಿಯೊಬ್ಬ ಸದಸ್ಯರೂ ವ್ಯಸನದ ವಿರುದ್ಧ ಜಾಗೃತಿ ಮೂಡಿಸಿದಾಗ ಮಾತ್ರ ಆರೋಗ್ಯಕರ ಮತ್ತು ಸುರಕ್ಷಿತ ಸಮಾಜವನ್ನು ನಿರ್ಮಿಸಲು ಸಾಧ್ಯ. ಎಲ್ಲರೂ ಮಾದಕ ದ್ರವ್ಯಗಳಿಂದ ದೂರವಿದ್ದು, ಇತರರನ್ನೂ ವ್ಯಸನಮುಕ್ತ ಜೀವನದತ್ತ ಪ್ರೇರೇಪಿಸುವ ಸಂಕಲ್ಪ ಮಾಡೋಣ ಎಂದು ಅವರು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎ.ವಿ.ಎಸ್.ಎಸ್ ಹಾಗೂ ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಲಾ ಸಂಸ್ಥಾಪಕ ಅಧ್ಯಕ್ಷ ತುಂಬಲ ರಾಮಣ್ಣ ಮಾತನಾಡಿ, ಕಾನೂನು ಶಿಕ್ಷಣವು ಕೇವಲ ವೃತ್ತಿ ಅವಕಾಶಗಳನ್ನು ನೀಡುವುದಲ್ಲ, ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಸಂವಿಧಾನದ ಮೌಲ್ಯಗಳನ್ನು ಬಲಪಡಿಸುವ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಉತ್ತಮ ಕಾನೂನು ಜ್ಞಾನವನ್ನು ಪಡೆದು ಸಮಾಜದ ದುರ್ಬಲ ವರ್ಗಗಳಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಿ ಆರೋಗ್ಯಕರ ಹಾಗೂ ಶಿಸ್ತುಬದ್ಧ ಜೀವನ ನಡೆಸುವಂತೆ ಅವರು ಕರೆ ನೀಡಿದರು.

ಮೈಸೂರು ವಕೀಲರ ಸಂಘದ ಅಧ್ಯಕ್ಷ ಲೋಕೇಶ್, ಕಾಲೇಜಿನ ಪ್ರಾಂಶುಪಾಲ ಡಾ.ಎಸ್. ಗುರುಸ್ವಾಮಿ, ಎವಿಎಸ್ಎಸ್ ನಿರ್ದೇಶಕರಾದ ಶ್ರೀಕಂಠ, ಗೋವಿಂದರಾಜು, ಕಾನೂನು ಸೇವಾ ಕೇಂದ್ರ ಸಂಯೋಜಕ ಟಿ.ಎಂ. ಮಹದೇವಮೂರ್ತಿ, ರೆಡ್ ಕ್ರಾಸ್ ಸಂಯೋಜಕಿ ಬಿ.ಎಂ. ಚೈತ್ರಾ ಮೊದಲಾದವರು ಇದ್ದರು.