ಸಾರಾಂಶ
ಮಕ್ಕಳಿಗೆ ಸರಿಯಾದ ಆಹಾರ ವಿತರಣೆಯ ಜೊತೆಗೆ ಅವರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ವಸತಿ ನಿಲಯ ಪಾಲಕರಿಗೆ ಅಪರ ಜಿಲ್ಲಾಧಿಕಾರಿ ಹಾಗೂ ತುಮಕೂರು ತಾಲೂಕು ನೋಡಲ್ ಅಧಿಕಾರಿ ಡಾ.ತಿಪ್ಪೇಸ್ವಾಮಿ ಸೂಚಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಮಕ್ಕಳಿಗೆ ಸರಿಯಾದ ಆಹಾರ ವಿತರಣೆಯ ಜೊತೆಗೆ ಅವರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ವಸತಿ ನಿಲಯ ಪಾಲಕರಿಗೆ ಅಪರ ಜಿಲ್ಲಾಧಿಕಾರಿ ಹಾಗೂ ತುಮಕೂರು ತಾಲೂಕು ನೋಡಲ್ ಅಧಿಕಾರಿ ಡಾ.ತಿಪ್ಪೇಸ್ವಾಮಿ ಸೂಚಿಸಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು.
ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಮತ್ತು ಗುಣಮಟ್ಟ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.ಮಕ್ಕಳು ನಿಯಮಿತವಾಗಿ ವಸತಿ ನಿಲಯಕ್ಕೆ ಬರುತ್ತಿದ್ದಾರೆಯೇ? ಶಾಲೆಗೆ ಹೋಗುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಒಂದು ವೇಳೆ ಅನುಮಾನ ಬಂದರೆ ಅವರ ಪೋಷಕರನ್ನು ಕರೆಯಿಸಿ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು ಸುಖಾಸುಮ್ಮನೆ ಹೊರಗೆ ಹೋಗಲು ಬಿಡಬಾರದು. ಊರುಗಳಿಗೆ ಹೋಗುವಾಗ ಮತ್ತು ಬರುವಾಗ ಪೋಷಕರಿಗೆ ಮಾಹಿತಿ ಇರಬೇಕು. ಎಲ್ಲವನ್ನೂ ದಾಖಲೆ ಮಾಡಬೇಕು ಎಂದು ಸೂಚಿಸಿದರು.
ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಮೆನು ಪ್ರಕಾರ ಆಹಾರ ವಿತರಿಸಬೇಕು. ಶೌಚಾಲಯಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಎಲ್ಲಿಯೂ ಅವ್ಯವಸ್ಥೆಗಳಾಗಬಾರದು. ವಸತಿ ನಿಲಯದಲ್ಲಿ ಮಕ್ಕಳು ಇರುವಾಗ ಅವರು ಓದಿನ ಕಡೆಗೆ ಗಮನ ಹರಿಸುವಂತೆ ನೋಡಿಕೊಳ್ಳಬೇಕು. ಮೊಬೈಲ್ ಗೀಳಿಗೆ ಬೀಳುವವರ ಸಂಖ್ಯೆ ಹೆಚ್ಚುತ್ತಿದ್ದು, ಇದರ ಬಗ್ಗೆಯೂ ನಿಗಾ ಇಡಬೇಕು. ಒಟ್ಟಾರೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನಿಲಯ ಪಾಲಕರೂ ಸೇರಿದಂತೆ ವಸತಿ ನಿಲಯದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಿಬ್ಬಂದಿಗಳೂ ಕೈಜೋಡಿಸಬೇಕು ಎಂದು ಕರೆ ನೀಡಿದರು.