ಹೃದಯ ಆರೋಗ್ಯದ ಕಾಳಜಿ ವಹಿಸಿ: ಡಾ. ಲಿಂಗರಾಜು

| Published : Oct 04 2024, 01:02 AM IST

ಸಾರಾಂಶ

ಪ್ರತಿಯೊಬ್ಬರು ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಅವಶ್ಯಕ.

ವಿಶ್ವ ಹೃದಯ ದಿನ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಅಧಿಕಾರಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಹೃದಯವು ಮಾನವ ದೇಹದ ಪ್ರಮುಖ ಅಂಗಾಗಗಳಲ್ಲಿ ಒಂದಾಗಿದೆ. ಅದರ ಅಸಮರ್ಪಕ ಕಾರ್ಯವು ಸಾವಿಗೆ ಕಾರಣವಾಗಬಹುದು. ಆದ್ದರಿಂದ ಪ್ರತಿಯೊಬ್ಬರು ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಅವಶ್ಯಕ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಲಿಂಗರಾಜು ಟಿ. ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕ, ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಎನ್.ಸಿ.ಡಿ. ಕ್ಲಿನಿಕ್ ಕೊಪ್ಪಳ ವತಿಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ವಿಶ್ವ ಹೃದಯ ದಿನ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹೃದಯ ರಕ್ತನಾಳದ ಆರೋಗ್ಯ ಮತ್ತು ಕೆಲವು ಜೀವನಶೈಲಿಯ ಅಭ್ಯಾಸಗಳ ಬಗ್ಗೆ ಅರಿವಿನ ಕೋರತೆಯಿಂದಾಗಿ ಹೃದಯ ರಕ್ತನಾಳದ ಕಾಯಿಲೆಗಳು ಮರಣಕ್ಕೆ ಪ್ರಮುಖ ಕಾರಣಗಳಾಗಿರುತ್ತವೆ ಎಂದು ಹೇಳಿದರು.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಂದಕುಮಾರ ಮಾತನಾಡಿ, ಡಾ. ಪುನಿತ ರಾಜಕುಮಾರ ಹೃದಯ ಜ್ಯೋತಿ ಯೋಜನೆ ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿದ್ದು, 30 ವರ್ಷ ಹಾಗೂ ಮೇಲ್ಪಟ್ಟ ಎಲ್ಲ ವಯಸ್ಸಿನವರು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.ಹೃದಯ ಕಾಯಿಲೆಯ ಗಂಡಾಂತರ ಅಂಶಗಳು, ಅಹಿತಕರ ಆಹಾರ ಸೇವನೆ, ಅಧಿಕ ತೂಕ, ದೈಹಿಕ ಮತ್ತು ಕ್ರೀಡಾಚಟುವಟಿಕೆಗಳ ಕುರಿತು ತಿಳಿಸಿದರು .

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಲಮಾಣಿ ಮಾತನಾಡಿ, ಇತ್ತೀಚೆಗೆ ಸಣ್ಣ ಸಣ್ಣ ವಯಸ್ಸಿನಲ್ಲಿ ಹೃದಯ ಸಂಬಂಧಿ ಕಾಯಲೆಗಳು ಹೆಚ್ಚಾಗುತ್ತಿವೆ. ನಮ್ಮಲ್ಲಿ ಒತ್ತಡದ ಜೀವನ ಹೆಚ್ಚಾಗಿದೆ. ನಾವು ಸೇವಿಸುವ ಅಹಾರ ಶೈಲಿಯು ಬದಲಾಗಿದೆ, ನಮ್ಮ ಜೀವನ ಪದ್ದತಿ ಬದಲಾಯಿಸಿಕೊಳ್ಳಬೇಕು, ವ್ಯಾಯಾಮ, ಯೋಗ ಮಾಡಬೇಕು, ಅದರಿಂದ ರೋಗಗಳು ಬರದಂತೆ ತಡೆಗಟ್ಟಬಹುದು ಎಂದರು.

ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಹಾಗೂ ಪೋಸ್ಟರ್ ಮೇಕಿಂಗ್ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠ ನಿರ್ಮೂಲನಾ ಅಧಿಕಾರಿಗಳು ಡಾ. ಪ್ರಕಾಶ, ಡಾ. ಪ್ರದೀಪ ಕುಮಾರ, ಡಾ. ಅಶೋಕ, ಡಾ. ಹುಲಿಗೆಮ್ಮ, ಡಾ. ನರಸಿಂಹ, ಲಕ್ಷ್ಮಣ ಸಜ್ಜನರ ಹಾಗೂ ಎನ್.ಸಿ.ಡಿ. ಕ್ಲಿನಿಕ್ ಸಿಬ್ಬಂದಿ, ಎನ್.ಟಿ.ಸಿ.ಪಿ ಸಿಬ್ಬಂದಿ ಸರ್ವೇಕ್ಷಣಾ ಘಟಕದ ಸಿಬ್ಬಂದಿ ಭಾಗವಹಿಸಿದ್ದರು. ಶಿವಾನಂದ ನಿರೂಪಿಸಿ, ಡಾ. ಜಯಶ್ರೀ ಸ್ವಾಗತಿಸಿ, ವಂದಿಸಿದರು.