ಮಳೆಗಾಲದಲ್ಲಿ ರಸ್ತೆ ಸುಸ್ಥಿತಿಗೆ ನಿಗಾ ವಹಿಸಿ

| Published : Jun 15 2024, 01:09 AM IST

ಸಾರಾಂಶ

Take, care, road, condition, during, rainy, season

ಕನ್ನಡಪ್ರಭ ವಾರ್ತೆ ಖಾನಾಪುರ

ತಾಲೂಕುಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಜನಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಕೆನರಾ ಲೋಕಸಭಾ ಮತಕ್ಷೇತ್ರದ ನೂತನ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯತಿ ಸಭಾಗೃಹದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲೂಕುಮಟ್ಟದ ಅಧಿಕಾರಿಗಳ, ಪಿಡಿಒ ಮತ್ತು ಗ್ರಾಮ ಲೆಕ್ಕಿಗರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರ ಜೊತೆ ಸೌಜನ್ಯಯುತವಾಗಿ ವರ್ತಿಸಬೇಕು. ಎಲ್ಲರೂ ತಮ್ಮ ಕಚೇರಿಗಳನ್ನು ಸ್ವಚ್ಛ ಮತ್ತು ಅಂದವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.ಲೋಕೋಪಯೋಗಿ ಇಲಾಖೆಯವರು ಮಳೆಗಾಲದಲ್ಲಿ ರಸ್ತೆಗಳ ಸುಸ್ಥಿತಿಗೆ ನಿಗಾ ವಹಿಸಬೇಕು. ಸದ್ಯ ಪ್ರಗತಿಯಲ್ಲಿರುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಗಮನಹರಿಸಬೇಕು. ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಈಗಿನಿಂದಲೇ ಸನ್ನದ್ಧರಾಗಬೇಕು ಎಂದರು.ಲೋಕೋಪಯೋಗಿ ಅಥವಾ ಜಿಪಂ ಇಂಜಿನಿಯರಿಂಗ್ ಇಲಾಖೆಗಳ ಅಧೀನಕ್ಕೊಳಪಟ್ಟ ರಸ್ತೆಗಳಲ್ಲಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ರಸ್ತೆ ಅಪಘಾತಗಳು ಸಂಭವಿಸಿದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಮೊದಲ ಆರೋಪಿ ಎಂದು ಬಿಂಬಿಸಿ ದೂರು ದಾಖಲಿಸಬೇಕು ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.ಅಕ್ರಮ ದಂಧೆಗೆ ಕಡಿವಾಣ ಹಾಕಿ:

ಖಾನಾಪುರ ತಾಲೂಕಿನಲ್ಲಿ ಗಾಂಜಾ ಮಾರಾಟ ಮತ್ತು ಸೇವನೆ ಅವ್ಯಾಹತವಾಗಿ ನಡೆದಿರುವ ಬಗ್ಗೆ ಮತ್ತು ಈ ವ್ಯಸನಕ್ಕೀಡಾಗಿರುವವರಿಂದ ಸಮಾಜದ್ರೋಹಿ ಕೆಲಸಗಳು ನಡೆಯುತ್ತಿರುವ ಬಗ್ಗೆ ಸ್ಥಳೀಯರಿಂದ ತಮಗೆ ಮಾಹಿತಿ ಲಭಿಸಿದ್ದು, ಕೂಡಲೇ ಗಾಂಜಾ ದಂಧೆಯನ್ನು ಬೇರುಮಟ್ಟದಿಂದ ನಿರ್ನಾಮ ಮಾಡುವ ಮೂಲಕ ಇಡೀ ಖಾನಾಪುರ ತಾಲೂಕನ್ನು ಗಾಂಜಾ ಮುಕ್ತವಾಗಿಸುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಮಾಜದ ಹಿತದೃಷ್ಟಿಯಿಂದ ಈ ಅಕ್ರಮ ದಂಧೆಯನ್ನು ಹತ್ತಿಕ್ಕಬೇಕು. ಪಟ್ಟಣ ಹಾಗೂ ಅಕ್ಕಪಕ್ಕದಲ್ಲಿ ನಡೆಯುತ್ತಿರುವ ಕ್ಲಬ್‌ಗಳನ್ನು ಬಂದ್ ಮಾಡಬೇಕು. ಬೀಟ್ ಪೊಲೀಸರು ತಮ್ಮ ಬೀಟ್ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮಗಳ ಮೇಲೆ ನಿಗಾ ವಹಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಸಭೆಯಲ್ಲಿ ತಹಸೀಲ್ದಾರ್, ತಾಪಂ ಇಒ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಪಿಡಿಒಗಳು, ಗ್ರಾಮ ಲೆಕ್ಕಿಗರು ಇದ್ದರು. ಇದೇ ಸಂದರ್ಭದಲ್ಲಿ ಸಂಸದರು ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿದರು. ಸಭೆಯಿಂದ ದೂರ ಉಳಿದ ರೇಷ್ಮೆ, ಸಾರಿಗೆ, ಭೂಸೇನಾ ನಿಗಮ, ನಿರ್ಮಿತಿ ಕೇಂದ್ರ ಮತ್ತಿತರ ಇಲಾಖೆಗಳ ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಶಾಸಕ ವಿಠ್ಠಲ ಹಲಗೇಕರ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಆನಂದ ಭಿಂಗೆ ಕಾರ್ಯಕ್ರಮ ನಿರ್ವಹಿಸಿದರು. ಮಹಾಂತೇಶ ಜಾಂಗಟಿ ಸ್ವಾಗತಿಸಿದರು. ಸಲೀಂ ಅಮ್ಮಣಗಿ ವಂದಿಸಿದರು.ಬಿಜೆಪಿ ಸಭೆಯಲ್ಲಿ ಭಾಗಿ: ಸನ್ಮಾನ ಸ್ವೀಕಾರ:

ಖಾನಾಪುರ: ಶುಕ್ರವಾರ ಪಟ್ಟಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಬಳಿಕ ಸಂಸದ ಕಾಗೇರಿ ಪಟ್ಟಣದ ಶಿವಸ್ಮಾರಕ ಸಭಾಗೃಹದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಪಕ್ಷದಿಂದ ಸನ್ಮಾನ ಸ್ವೀಕರಿಸಿದರು. ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಖಾನಾಪುರ ತಾಲೂಕಿನ ಮತದಾರರು ಅತೀ ಹೆಚ್ಚು ಮತ ನೀಡಿದ್ದಾರೆ. ತಮಗೆ ಬಂದ ಮತಗಳಲ್ಲಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿ ಚಲಾವಣೆಯಾದ ಮತ್ತು ಕಾಂಗ್ರೆಸ್ ಧೋರಣೆಗೆ ಬೇಸತ್ತು ಚಲಾವಣೆಯಾದ ಮತಗಳೂ ಸೇರಿವೆ ಎಂದರು.ಸಭೆಯಲ್ಲಿ ಶಾಸಕ ಹಲಗೇಕರ, ಬ್ಲಾಕ್ ಅಧ್ಯಕ್ಷ ಸಂಜಯ ಕುಬಲ, ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಜೆಡಿಎಸ್ ಮುಖಂಡ ನಾಸೀರ ಬಾಗವಾನ ಸೇರಿದಂತೆ ಬಿಜೆಪಿ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಇದ್ದರು. ಅಪ್ಪಯ್ಯ ಕೋಡೊಳಿ ಸ್ವಾಗತಿಸಿದರು. ಬಸವರಾಜ ಸಾಣಿಕೊಪ್ಪ ನಿರೂಪಿಸಿದರು. ಸದಾನಂದ ಪಾಟೀಲ ವಂದಿಸಿದರು.

ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಳೆದ ವರ್ಷ ನಿರ್ಮಾಣವಾದ ರಸ್ತೆಗಳ ನಿರ್ವಹಣೆ ಬಗ್ಗೆ ಗಮನಹರಿಸಬೇಕು. ರಸ್ತೆಗಳಲ್ಲಿ ಸಣ್ಣಪುಟ್ಟ ಗುಂಡಿಗಳಿದ್ದರೂ ದುರಸ್ತಿ ಮಾಡಿಸಬೇಕು. ಮುಖ್ಯವಾಗಿ ಜೆಜೆಎಂ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರು ಪೈಪ್‌ಲೈನ್ ಅಳವಡಿಸಲು ತೆರೆದಿದ್ದ ಗುಂಡಿಗಳನ್ನು ಮುಚ್ಚಿರುವ ಬಗ್ಗೆ ಪರಿಶೀಲಿಸಬೇಕು.

-ವಿಶ್ವೇಶ್ವರ ಹೆಗಡೆ ಕಾಗೇರಿ, ಕೆನರಾ ಲೋಕಸಭಾ ಮತಕ್ಷೇತ್ರದ ನೂತನ ಸಂಸದ.