ಜಿಲ್ಲೆಯ ಪೌರಕಾರ್ಮಿಕರ ಆರೋಗ್ಯ ಬಗ್ಗೆ ಕಾಳಜಿವಹಿಸಿ

| Published : Oct 28 2024, 01:25 AM IST

ಜಿಲ್ಲೆಯ ಪೌರಕಾರ್ಮಿಕರ ಆರೋಗ್ಯ ಬಗ್ಗೆ ಕಾಳಜಿವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಆರೋಗ್ಯ ಕುರಿತು ತೀವ್ರ ಕಾಳಜಿ ವಹಿಸಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಬೇಕು. ನಿಗದಿತ ಕನಿಷ್ಠ ವೇತನ ಪಾವತಿ, ಜೀವ ವಿಮೆ ಸೌಲಭ್ಯ, ಉಪಾಹಾರ, ಸುರಕ್ಷತಾ ಪರಿಕರಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಆರೋಗ್ಯ ಕುರಿತು ತೀವ್ರ ಕಾಳಜಿ ವಹಿಸಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಬೇಕು. ನಿಗದಿತ ಕನಿಷ್ಠ ವೇತನ ಪಾವತಿ, ಜೀವ ವಿಮೆ ಸೌಲಭ್ಯ, ಉಪಾಹಾರ, ಸುರಕ್ಷತಾ ಪರಿಕರಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅಧಿನಿಯಮ ೨೦೧೩ರ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೌರಕಾರ್ಮಿಕರು, ಸ್ವಚ್ಛತಾ ಕೆಲಸಗಾರರಿಗೆ ಅತ್ಯುತ್ತಮ ಗುಣಮಟ್ಟದ ಪರಿಕರ ಹಾಗೂ ಸಮವಸ್ತ್ರ ಒದಗಿಸಬೇಕು. ಪೌರಕಾರ್ಮಿಕರಿಗೆ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸುವಂತೆ ಸುರಕ್ಷಾ ಕಿಟ್, ಪರಿಕರಗಳ ಬಗ್ಗೆ ತರಬೇತಿ ಹಮ್ಮಿಕೊಳ್ಳಬೇಕು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಖಾಯಂ ನೇರಪಾವತಿ, ಗುತ್ತಿಗೆ ಆಧಾರದ ಇರುವವರಿಗೆ ಕಡ್ಡಾಯವಾಗಿ ಇಎಸ್‌ಐ, ಪಿಎಫ್ ವಿಮೆ ಸೌಲಭ್ಯ ದೊರಕಿಸಿಕೊಡಲು ಕ್ರಮ ವಹಿಸಬೇಕು ಎಂದು ಹೇಳಿದರು.

ನಗರ ಸ್ವಚ್ಛತೆಗಾಗಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರಿಗೆ ಪ್ರಥಮ ಆದ್ಯತೆಯ ಮೇಲೆ ಮೂಲಸೌಲಭ್ಯ ಒದಗಿಸುವಂತೆ ತಿಳಿಸಿದ ಅವರು, ನವೆಂಬರ್ ೧ ರೊಳಗೆ ಗೃಹಭಾಗ್ಯ ಯೋಜನೆಯ ಮನೆಗಳನ್ನು ಪೌರಕಾರ್ಮಿಕರಿಗೆ ಹಸ್ತಾಂತರ ಮಾಡುವಂತೆ ಮಹಾನಗರ ಪಾಲಿಕೆಗೆ ಅವರು ಸೂಚನೆ ನೀಡಿದರು.

ಹೊಸದಾಗಿ ಪೌರಕಾರ್ಮಿಕರಿಗಾಗಿ ನಿರ್ಮಿಸಿದ ವಸತಿ ಸಮುಚ್ಛಯಗಳಿಗೆ ಸೂಕ್ತ ಬಸ್ ಸೌಲಭ್ಯ ಕಲ್ಪಿಸಬೇಕು. ಪೌರಕಾರ್ಮಿಕರ ಮಕ್ಕಳಿಗೆ ಜಿಲ್ಲೆಯಲ್ಲಿರುವ ವಸತಿ ಶಾಲೆಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಖಾಯಂ ಆಗಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಕುರಿತು ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಅವರು ನಿರ್ದೇಶನ ನೀಡಿದರು.

ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ ಸೌದಾಗರ ಮಾತನಾಡಿ, ಜಿಲ್ಲೆಯ ಮಹಾನಗರ ಪಾಲಿಕೆ ಸೇರಿದಂತೆ ೧೫ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಮ್ಯಾನುವೆಲ್ ಸ್ಕ್ಯಾವೆಂಜರ್‌ಗಳು ಇಲ್ಲ. ಜಿಲ್ಲೆಯಲ್ಲಿ ಒಟ್ಟು ೫೮೮ ಖಾಯಂ ಪೌರಕಾರ್ಮಿಕರರಿದ್ದು, ಈ ಪೈಕಿ ೨೪೦ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಬಿಎಲ್‌ಸಿ-೧೨೪, ಎಎಚ್‌ಪಿ-೧೧೬ ಸೇರಿದಂತೆ ಒಟ್ಟು ೨೪೦ ಮನೆಗಳು ಅನುಮೋದನೆಗೊಂಡು ೧೩೧ ಮನೆಗಳು ಮುಕ್ತಾಯಗೊಂಡಿವೆ. ಬಾಕಿ ಉಳಿದ ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿವೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ೫೬ ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರ ನೀಡಲಾಗಿದೆ. ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ನಿಯಮಿತವಾಗಿ ವೇತನ ಹಾಗೂ ಇಎಸ್‌ಐ ಮತ್ತು ಇಪಿಎಫ್‌ಗಳನ್ನು ಪಾವತಿಸಲಾಗಿದೆ ಎಂಬ ಮಾಹಿತಿ ನೀಡಿದರು.

ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರಾಠೋಡ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲಿಕ ಮಾನವರ, ಮಹಾನಗರ ಪಾಲಿಕೆ ಪರಿಸರ ಅಭಿಯಂತರ ಸಜ್ಜನ, ಪುರಸಭೆ ಮತ್ತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ವಿಭಾಗಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.----------------

ಕೋಟ್‌

ಹೊಸದಾಗಿ ಪೌರಕಾರ್ಮಿಕರಿಗಾಗಿ ನಿರ್ಮಿಸಿದ ವಸತಿ ಸಮುಚ್ಚಯಗಳಿಗೆ ಸೂಕ್ತ ಬಸ್ ಸೌಲಭ್ಯ ಕಲ್ಪಿಸಬೇಕು. ಪೌರಕಾರ್ಮಿಕರ ಮಕ್ಕಳಿಗೆ ಜಿಲ್ಲೆಯಲ್ಲಿರುವ ವಸತಿ ಶಾಲೆಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾಯಂ ಆಗಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಕುರಿತು ಒಂದು ವಾರದೊಳಗೆ ವರದಿ ಸಲ್ಲಿಸಿ.

- ಟಿ.ಭೂಬಾಲನ್‌, ಜಿಲ್ಲಾಧಿಕಾರಿ