ಶರಾವತಿ ನದಿಪಾತ್ರದ ಜನರ ಬಗ್ಗೆ ಎಚ್ಚರ ವಹಿಸಿ: ಸಚಿವ ಮಾಂಕಾಳು ವೈದ್ಯ

| Published : Jul 31 2024, 01:06 AM IST

ಶರಾವತಿ ನದಿಪಾತ್ರದ ಜನರ ಬಗ್ಗೆ ಎಚ್ಚರ ವಹಿಸಿ: ಸಚಿವ ಮಾಂಕಾಳು ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಲಿಂಗನಮಕ್ಕಿ ಮೈದುಂಬಿದ ಹಿನ್ನೆಲೆ ಜಲಾಶಯಕ್ಕೆ ಬಂದರು ಒಳನಾಡು ಹಾಗೂ ಮೀನುಗಾರಿಕೆ ಸಚಿವ ಮಾಂಕಾಳು ವೈದ್ಯ ಬಾಗಿನ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ತಾಳಗುಪ್ಪ

ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರಬಿಡುವಾಗ ನದಿ ಪಾತ್ರದ ಕೆಳದಂಡೆಗಳಲ್ಲಿ ವಾಸಿಸುವ ಜನರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವಂತೆ ಬಂದರು ಒಳನಾಡು ಹಾಗೂ ಮೀನುಗಾರಿಕೆ ಸಚಿವ ಮಾಂಕಾಳು ವೈದ್ಯ ಕೆಪಿಸಿ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಲಿಂಗನಮಕ್ಕಿ ಜಲಾಶಯಕ್ಕೆ ಭೇಟಿ ನೀಡಿ ಬಾಗಿನ ಸಮರ್ಪಿಸಿ ಕೆಪಿಸಿ ಕಾರ್ಯಾಲಯದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ಈ ವರ್ಷ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಬಹುತೇಕ ಎಲ್ಲ ಜಲಾಶಯಗಳು ತುಂಬುವ ಹಂತ ತಲುಪಿದೆ, ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ನೀರು ನದಿಗೆ ಹರಿಸುವುದು ಅನಿವಾರ್ಯವಾದರೂ ನದಿಪಾತ್ರದ ಎಡದಂಡೆ ಹಾಗೂ ಬಲದಂಡೆಗಳಲ್ಲಿ ವಾಸವಾಗಿರುವ ಜನರ ಬಗ್ಗೆ ಎಚ್ಚರಿಕೆ ವಹಿಸಬೇಕು. ಜಲಾಶಯ ಪೂರ್ತಿ ತುಂಬುವರೆಗೂ ಕಾಯದೆ ಪ್ರತಿಶತ ೮೦ ತುಂಬಿದ ನಂತರ ಜಲಾಶಯದಿಂದ ಸಲ್ಪ-ಸಲ್ಪ ಪ್ರಮಾಣದ ನೀರನ್ನು ನದಿಗೆ ಹರಿಸಬೇಕು ಹಾಗೂ ಸಮುದ್ರ ಇಳಿತ ಕಂಡಾಗ ನದಿಗೆ ನೀರು ಬಿಟ್ಟರೆ ನೇರವಾಗಿ ಸಮುದ್ರ ಸೇರುತ್ತದೆ ಎಂದರಲ್ಲದೆ, ಇಂತಹ ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವುದರಿಂದ ನದಿ ಪಾತ್ರದ ಜನರಿಗೆ ಯಾವುದೇ ಪ್ರವಾಹದ ಭೀತಿ ಉಂಟಾಗುವುದಿಲ್ಲ ಎಂದರು.

ಕೆಪಿಸಿ ವಿದ್ಯುತ್ ವಿಭಾಗದ ಮುಖ್ಯ ಇಂಜಿನಿಯರ್ ಎಚ್.ಆರ್.ರಮೇಶ್, ಕಾಮಗಾರಿ ವಿಭಾಗದ ಮೋಹನ್, ಭಟ್ಕಳ ಉಪ ವಿಭಾಗಾಧಿಕಾರಿ ಡಾ.ನಯನ, ಗೇರುಸೊಪ್ಪೆ ವಿಭಾಗದ ಅಭಿಯಂತರ ಗಿರೀಶ್ ಮತ್ತು ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರವಾಹ ಎದುರಿಸಲು ಸನ್ನದ್ಧರಾಗಲು ಕರೆ

ಶರಾವತಿ ನದಿಪಾತ್ರಕ್ಕೆ ಸಂಬಂಧಿಸಿದ ಹೊನ್ನಾವರ ತಾಲೂಕಿನ ೧೩ ಪಂಚಾಯಿತಿ ಪಿಡಿಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಜಲಾಶಯ ದ ಸುರಕ್ಷತೆಯ ದೃಷ್ಟಿಯಿಂದ ನೀರು ನದಿಗೆ ಹರಿಸುವುದು ಅನಿವಾರ್ಯವಾದರೂ ಯಾವುದೇ ಸಂದರ್ಭದಲ್ಲಿ ಪ್ರವಾಹವನ್ನು ಎದುರಿಸಲು ಸನ್ನದ್ಧ ಸ್ಥಿತಿಯಲ್ಲಿ ಇರಬೇಕೆಂದು ಸಚಿವ ಮಾಂಕಾಳು ವೈದ್ಯ ಸೂಚಿಸಿದರು.