ರಾಣಿಬೆನ್ನೂರು: ಅವಶ್ಯಕತೆ ಬಿದ್ದಾಗ ಆರೋಗ್ಯದ ಬಗ್ಗೆ ಚಿಂತಿಸುವ ಬದಲು ಮುಂಚಿತವಾಗಿ ಅದರ ಬಗ್ಗೆ ಕಾಳಜಿ ವಹಿಸಬೇಕು ಎಂದು ಕೆಎಲ್‌ಇ ಸಂಸ್ಥೆಯ ಮಾಜಿ ನಿರ್ದೇಶಕ ಶಂಕರಣ್ಣ ಮುನವಳ್ಳಿ ಹೇಳಿದರು.

ನಗರದ ರಾಜರಾಜೇಶ್ವರಿ ಮಹಿಳಾ ಕಾಲೇಜ್‌ನಲ್ಲಿ ಶನಿವಾರ ಕೆಎಲ್‌ಇ ಡಾ. ಪ್ರಭಾಕರ್ ಕೋರೆ ಆಸ್ಪತ್ರೆ, ವೈದ್ಯಕೀಯ ಸಂಶೋಧನಾ ಕೇಂದ್ರ, ಗಂಗಾಧರ ಮಹಾಸ್ವಾಮಿಗಳ ಮಹಾವಿದ್ಯಾಲಯ ಮೂರುಸಾವಿರಮಠ ವೈದ್ಯಕೀಯ ಕಾಲೇಜು, ಸ್ಥಳೀಯ ರೋಟರಿ ಸಂಸ್ಥೆ, ವರ್ತಕರ ಸಂಘ ಆಶ್ರಯದಲ್ಲಿ ಏರ್ಪಡಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಉದ್ಘಾಟಿಸಿ ವಹಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಇಂತಹ ಶಿಬಿರಗಳನ್ನು ಉತ್ತರ ಕರ್ನಾಟಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿಯೂ ಕೈಗೊಂಡು ಈ ಭಾಗದ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಲಾಗುವುದು ಎಂದರು.

ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಸಮರ್ಪಕವಾಗಿ ಆರೋಗ್ಯ ಸೌಲಭ್ಯಗಳ ಕೊರತೆಯಿಂದ ಜನರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಲಿವೆ ಎಂದರು.

ಮನುಷ್ಯನಿಗೆ ಆರೋಗ್ಯವೇ ಸಂಪತ್ತು. ಅದು ಚೆನ್ನಾಗಿದ್ದರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು. ತುರ್ತು ಪರಿಸ್ಥಿತಿಗಳಲ್ಲಿ ಸೂಕ್ತ ಚಿಕಿತ್ಸೆಗಾಗಿ ಈ ಭಾಗದ ಜನರು ದಾವಣಗೆರೆ, ಮಣಿಪಾಲ, ಮಂಗಳೂರು, ಹುಬ್ಬಳ್ಳಿ ಮುಂತಾದ ನಗರಗಳಿಗೆ ಹೋಗಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಸ್ಥಳೀಯರ ಅಭಿಪ್ರಾಯದಂತೆ ಈ ಪ್ರದೇಶದಲ್ಲಿ ಗುಣಮಟ್ಟದ ವೈದ್ಯಕೀಯ ಕಾಲೇಜು ಮತ್ತು ಬಹುಮಟ್ಟದ ಆಸ್ಪತ್ರೆಯನ್ನು ಸ್ಥಾಪಿಸುವುದು ಅತ್ಯವಶ್ಯಕವಾಗಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ತಕ್ಷಣದ ಮತ್ತು ಸಮರ್ಪಕ ಚಿಕಿತ್ಸಾ ಸೌಲಭ್ಯ ದೊರೆಯುವಂತೆ ಆಗುತ್ತದೆ. ಈ ನಿಟ್ಟಿನಲ್ಲಿ ಕೆಎಲ್‌ಇ ಸಂಸ್ಥೆ ವತಿಯಿಂದ ಈ ಭಾಗದಲ್ಲಿ ಆಸ್ಪತ್ರೆ ಕಟ್ಟಬೇಕು ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರವೀಣ ಖನ್ನೂರ ಮಾತನಾಡಿ, ರೋಟರಿ ಕ್ಲಬ್‌ಗೆ ಸೇವೆಯೇ ಮೊದಲ ಆದ್ಯತೆಯಾಗಿದೆ. ಆರೋಗ್ಯ ತಪಾಸಣೆ ಶಿಬಿರವು ಜನರಿಗೆ ಅತ್ಯಂತ ಉಪಯುಕ್ತವಾಗಿದೆ. ಉಚಿತವಾಗಿ ವೈದ್ಯಕೀಯ ಸೇವೆಗಳನ್ನು ನೀಡುವ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗುತ್ತಿದೆ. ಶಿಬಿರದಲ್ಲಿ ಔಷಧೋಪಚಾರದ ಜತೆಯಲಿಲ ನೇತ್ರದಾನ ಮತ್ತು ದೇಹದಾನದ ಕುರಿತು ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದೆ. ಕೆಎಲ್‌ಇ ಸಂಸ್ಥೆಯಿಂದ ಇಂತಹ ಸೇವಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಇಂತಹ ಶಿಬಿರಗಳು ಬಡಜನರಿಗೆ ಮಹತ್ತರವಾದ ಸಹಾಯವಾಗಿದ್ದು, ಆರೋಗ್ಯ ಸೇವೆಯನ್ನು ಎಲ್ಲರಿಗೂ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದರು.


ಕೆಎಲ್‌ಇ ಸಂಸ್ಥೆ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿ.ಪಿ. ಲಿಂಗನಗೌಡರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ವೀರೇಶ ಮೋಟಗಿ, ಬಸವರಾಜ ಪಟ್ಟಣಶೆಟ್ಟಿ, ಜಯಣ್ಣ ಜಂಬಿಗಿ, ಜಿ.ಜಿ.ಹೊಟ್ಟೆಗೌಡರ, ವೀರಣ್ಣ ಅಂಗಡಿ, ಸುಧೀರ ಕುರವತ್ತಿ, ಡಾ.ಬಸವರಾಜ ಅಂಗಡಿ, ವೀರಣ್ಣ ಅಂಗಡಿ, ಜಯಣ್ಣ ಜಂಬಗಿ, ಡಾ.ಅಲ್ಲಮಪ್ರಭು, ಡಾ.ಅಮೃತ ಡಂಬಳ, ರಾಮಚಂದ್ರಪ್ಪ ಜಿ.ಎಸ್, ಉಮೇಶ ಹೊನ್ನಾಳಿ, ಭಾರತಿ ಜಂಬಗಿ, ಮಂಗಳಗೌರಿ ಪೂಜಾರ ಮತ್ತಿತರರಿದ್ದರು.

ತಪಾಸಣೆ ವೇಳೆ ನೂಕುನುಗ್ಗಲು: ಉಚಿತ ಆರೋಗ್ಯ ಶಿಬಿರದಲ್ಲಿ ಸುಮಾರು ಆರು ಸಾವಿರಕ್ಕೂ ಅಧಿಕ ರೋಗಿಗಳ ತಪಾಸಣೆ ನಡೆಸಲಾಯಿತು. ಎಲಬು, ಕೀಲು ಮತ್ತು ಮೂಳೆ ಹಾಗೂ ಚರ್ಮರೋಗ ವಿಭಾಗದಲ್ಲಿ ಜನರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾಯಿತು. ಇದೇ ಸಂದರ್ಭದಲ್ಲಿ ಕೆಎಲ್‌ಇ ಆಸ್ಪತ್ರೆಯ ಮಾಹಿತಿ ಮತ್ರು ಸಂಪರ್ಕ ಕೇಂದ್ರವನ್ನು ಉದ್ಟಾಟಿಸಲಾಯಿತು.