ಸಾರಾಂಶ
ಶಿವಮೊಗ್ಗ: ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ, ಗ್ರಾ.ಪಂ., ಜಿ.ಪಂ., ತಾ.ಪಂ. ಚುನಾವಣೆಗಳನ್ನು ನಡೆಸದೇ ಇರುವುದರಿಂದ ರಾಜ್ಯ ಚುನಾವಣಾ ಆಯೋಗವು ಮುಖ್ಯಮಂತ್ರಿ, ಸಚಿವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಆಗ್ರಹಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಆದೇಶಗಳನ್ನು ಉಲ್ಲಂಘಿಸಿ, ಚುನಾವಣೆಗಳನ್ನು ನಡೆಸದೇ ಇರುವುದರಿಂದ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದರು.ರಾಜ್ಯದ 187 ಸ್ಥಳೀಯ ಸಂಸ್ಥೆಗಳ ಅವಧಿಯು ಬರುವ ನವೆಂಬರ್‌ಗೆ ಮುಗಿಲಿದೆ. ರಾಜ್ಯದಲ್ಲಿ ಜಿ.ಪಂ. ಮತ್ತು ತಾ.ಪಂ. ಚುನಾವಣೆಗಳು ಐದು ವರ್ಷಗಳಿಂದ ನಡೆದಿಲ್ಲ. ಹಿಂದಿನ ಬಿಜೆಪಿ ಸರ್ಕಾರ ೨ ವರ್ಷಗಳ ಕಾಲ ಚುನಾವಣೆ ನಡೆಸದೆ ಕಾಲಾಹರಣ ಮಾಡಿದೆ. ಈಗಿನ ಕಾಂಗ್ರೆಸ್ ಸರ್ಕಾರವೂ ಮೀಸಲಾತಿ ಮತ್ತು ಕ್ಷೇತ್ರ ವಿಂಗಡಣೆಯ ಕುಂಟು ನೆಪವೊಡ್ಡಿ ಪಂಚಾಯತ್ ರಾಜ್ ಕಾಯ್ದೆಯ ಮೂಲ ಆಶಯಕ್ಕೆ ಧಕ್ಕೆ ಬರುವ ರೀತಿ ಕಾಲದಿಂದ ಕಾಲಕ್ಕೆ ಕೋರ್ಟ್ ಆದೇಶಗಳಿದ್ದರೂ ಸಹ ಚುನಾವಣೆಗಳನ್ನು ಮುಂದೂಡುತ್ತಾ ಬಂದಿದೆ ಎಂದು ದೂರಿದರು.ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಪತ್ರಿಕಾಗೋಷ್ಠಿಯಲ್ಲಿ ಚುನಾವಣೆಯ ವಿಳಂಬಕ್ಕೆ ಹೊಣೆಗಾರರಾದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಬೇಕಾದೀತು ಎಂದು ಎಚ್ಚರಿಸಿದ್ದಾರೆ. ವಾಸ್ತವವಾಗಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಶಾಸಕಾಂಗವೇ ಅಂದರೆ ರಾಜ್ಯ ಸರ್ಕಾರವೇ ಕಾರ್ಯಾಂಗದ ಮೇಲೆ ಅಂದರೆ ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಿದೆ. ಅಲ್ಲದೆ ಸರ್ಕಾರ ಮುಖ್ಯ ಕಾರ್ಯದರ್ಶಿಗಳನ್ನೊಳಗೊಂಡ ಎಲ್ಲಾ ಅಧಿಕಾರಿಗಳ ಮೇಲೆ ದಬ್ಬಾಳಿಕೆಯ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.ಆದ್ದರಿಂದ ರಾಜ್ಯ ಮುಖ್ಯ ಚುನಾವಣಾ ಆಯುಕ್ತರು ಕಾನೂನಿನಲ್ಲಿ ಅವಕಾಶವಿದ್ದರೆ ಚುನಾವಣೆಗಳನ್ನು ಮುಂದೂಡುತ್ತಾ ಬಂದಿರುವ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಂಚಾಯತ್ ರಾಜ್ ಸಚಿವ ಹಾಗೂ ನಗರಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಹೊಳೆಮಡಿಲು ವೆಂಕಟೇಶ್, ಜಿ.ಜನಮೇಜಿರಾವ್, ಅರಸಾಳು ರಂಗನಾಥ್, ಎಚ್.ಎಂ.ಸಂಗಯ್ಯ, ಕೊಂಡಜ್ಜಿ ವಿಜಯಕುಮಾರ್ ಉಪಸ್ಥಿತರಿದ್ದರು.