ಮೇಲುಕೋಟೆ: ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದ ಸುತ್ತ ಮತ್ತು ಉತ್ಸವ ಬೀದಿಗಳಲ್ಲಿ ಭಕ್ತರ ವಾಹನ ನಿಲುಗಡೆಯಾಗದಂತೆ ಕ್ರಮ ವಹಿಸಬೇಕು ಎಂದು ದರ್ಶನ್ ಪುಟ್ಟಣ್ಣಯ್ಯ ಜಿಲ್ಲಾ ಎಸ್ಪಿ ಶೋಭಾರಾಣಿ ಅವರಿಗೆ ಸೂಚಿಸಿದರು.
ಕಾರ್ಯಕ್ರಮಕ್ಕೆ ಬರುತ್ತಿದ್ದ ವೇಳೆ ಚೆಲುವನಾರಾಯಣಸ್ವಾಮಿ ದೇಗುಲದ ಸುತ್ತಮುತ್ತ ಉಂಟಾಗಿದ್ದ ಟ್ರಾಫಿಕ್ ಜಾಮ್ ನಿಂದ ಕಾರನ್ನು ಅಲ್ಲೇ ಬಿಟ್ಟು ದ್ವಿಚಕ್ರ ವಾಹನದಲ್ಲಿ ಸಮಾರಂಭಕ್ಕೆ ಆಗಮಿಸಿದಾಗ ವಾಹನ ದಟ್ಟನೆ ಅವ್ಯವಸ್ಥೆ ಗಮನಿಸಿದ ಶಾಸಕರು, ಇನ್ನು ಮುಂದೆ ಶನಿವಾರ, ಭಾನುವಾರ ಮತ್ತು ರಜಾದಿನಗಳಂದು ಭಕ್ತರ ವಾಹನದಟ್ಟಣೆ ನಿಯಂತ್ರಿಸಲು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಭಕ್ತರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು ಎಂದು ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಸೂಚನೆ ನೀಡಿದರು.ವೈರಮುಡಿ ಬ್ರಹ್ಮೋತ್ಸವದ ಉತ್ಸವಗಳು ಆರಂಭವಾಗಿರುವುದರಿಂದ ರಸ್ತೆ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದರೆ ಉತ್ಸವಕ್ಕೆ ಅಡಚಣೆಯಾಗುತ್ತದೆ. ಆದ್ದರಿಂದ ಜಾತ್ರಾ ಅವಧಿಯಲ್ಲಿ ಉತ್ಸವ ಬೀದಿಗಳಲ್ಲಿ ಯಾವುದೇ ವಾಹನಗಳು ನಿಲುಗಡೆಯಾಗದಂತೆ ನೋಡಿಕೊಳ್ಳಬೇಕು ಎಂದು ಗ್ರಾಪಂ ಅಧಿಕಾರಿಗಳು ಸೇರಿದಂತೆ ಸರ್ಕಲ್ ಇನ್ಸ್‌ಪೆಕ್ಟರ್ ಶರತ್ ಶ್ರೀರಂಗಪಟ್ಟಣ ಡಿವೈಎಸ್.ಪಿ ಹಾಗೂ ಮೇಲುಕೋಟೆ ಪೊಲೀಸರಿಗೂ ಸೂಚನೆ ನೀಡಿದರು.
ರಜಾದಿನಗಳು ಹಾಗೂ ವಿಶೇಷ ದಿನಗಳಲ್ಲಿ ಭಕ್ತರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸದ ಕಾರಣ ದೇವಾಲಯ ಕಲ್ಯಾಣಿ, ಯೋಗನರಸಿಂಹಸ್ವಾಮಿ ಬೆಟ್ಟ, ರಾಯಗೋಪುರ ಬಳಿ ವಾಹನದಟ್ಟಣೆ ಉಂಟಾಗಿದೆ ಎಂದರು.ಉತ್ಸವ ಹೋಗುವ ಕಣಿವೆ ಬಳಿ ಕಂಬಗಳನ್ನು ನೆಟ್ಟು ಬೀದಿ ದೀಪಗಳನ್ನು ಅಳವಡಿಸಬೇಕು. ತೆರೆದ ಚರಂಡಿಗಳ ಮೇಲ್ಭಾಗ ತಾತ್ಕಾಲಿಕವಾಗಿ ಮುಚ್ಚಿ ಭಕ್ತರು ಚರಂಡಿಗೆ ಬೀಳದಂತೆ ಕ್ರಮವಹಿಸಬೇಕು. ಯಾವುದೇ ಅಧಿಕಾರಿ ನಿರ್ಲಕ್ಷ್ಯಮಾಡಿದರೆ ನನ್ನ ಗಮನಕ್ಕೆ ತಬೇಕು ಎಂದು ಹೇಳಿದರು.
ಈ ವೇಳೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪರಮೇಶ್ ಗೌಡ, ಸದಸ್ಯರಾದ ಪುಟ್ಟಸ್ವಾಮಿಗೌಡ, ಕಾಡೇನಹಳ್ಳಿ ಸತೀಶ್, ಡಾ.ಪ್ರೀತಿ ಮಹದೇವ್, ಬಚ್ಚಿಕೊಪ್ಪಲು ರಾಜು, ಮೇಲುಕೋಟೆ ಗ್ರಾಪಂ ಪಿಡಿಒ ರಾಜೇಶ್ವರ್ ಸೇರಿದಂತೆ ಹಲವು ಗಣ್ಯರು ಇದ್ದರು.