34 ಗ್ರಾಪಂಗಳಲ್ಲಿ ಕುಡಿಯುವ ನೀರು ಪೂರೈಕೆ ಪರಿಸ್ಥಿತಿ, ಚಾಲ್ತಿಯಲ್ಲಿರುವ ಕೊಳವೆ ಬಾವಿಗಳ ಸ್ಥಿತಿಗತಿ, ಕೊಳವೆ ಬಾವಿಗಳು ಸ್ಥಗಿತಗೊಂಡರೆ ಕೈಗೊಳ್ಳಬೇಕಾದ ಪರ್ಯಾಯ ಕ್ರಮ ಕುರಿತು ಮಾಹಿತಿ ಪಡೆದ ಶಾಸಕರು ಸಮಸ್ಯೆ ಬಂದ ಮೇಲೆ ಪರದಾಡುವ ಬದಲು ಸಮಸ್ಯೆ ಬರದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಬೇಸಿಗೆ ಆರಂಭವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಹಳ್ಳಿಗಳಲ್ಲೂ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಆಯಾ ಭಾಗದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ನಿರ್ದೇಶಿಸಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಗ್ರಾಪಂ ಆಡಳಿತಾಧಿಕಾರಿಗಳು ಮತ್ತು ಪಿಡಿಒಗಳ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೇಸಿಗೆಯಲ್ಲಿ ನೀರಿನ ಅಭಾವ ಎದುರಿಸಲು ಕೂಡಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ತಾಲೂಕಿನ 34 ಗ್ರಾಪಂಗಳಲ್ಲಿ ಕುಡಿಯುವ ನೀರು ಪೂರೈಕೆ ಪರಿಸ್ಥಿತಿ, ಚಾಲ್ತಿಯಲ್ಲಿರುವ ಕೊಳವೆ ಬಾವಿಗಳ ಸ್ಥಿತಿಗತಿ, ಕೊಳವೆ ಬಾವಿಗಳು ಸ್ಥಗಿತಗೊಂಡರೆ ಕೈಗೊಳ್ಳಬೇಕಾದ ಪರ್ಯಾಯ ಕ್ರಮ ಕುರಿತು ಮಾಹಿತಿ ಪಡೆದ ಶಾಸಕರು ಸಮಸ್ಯೆ ಬಂದ ಮೇಲೆ ಪರದಾಡುವ ಬದಲು ಸಮಸ್ಯೆ ಬರದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಸ್ಥಗಿತಗೊಂಡಿರುವ ಕೊಳವೆ ಬಾವಿಗಳ ಮಾಹಿತಿ ಪಡೆದ ಶಾಸಕರು ಕುಡಿಯುವ ನೀರಿನ ಸಮಸ್ಯೆಗಳನ್ನು ಕುರಿತು ನಾನು ಈಗಾಗಲೇ ಜಿಪಂ ಸಿಇಒ ಜೊತೆ ಮಾತನಾಡಿದ್ದೇನೆ. 15 ನೇ ಹಣಕಾಸು ನಿಧಿಯಲ್ಲೂ ಹಣ ಇಲ್ಲ. ಕಳೆದ ವರ್ಷ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಿವರಿಗೆ ಇದುವರೆಗೂ ಪೇಮೆಂಟ್ ಆಗಿಲ್ಲ. ಶಾಸಕರ ಅನುದಾನದ ಲಭ್ಯತೆಯೂ ಕಡಿಮೆ ಇದೆ. 15 ನೇ ಹಣಕಾಸು ನಿಧಿಯ ಬಡ್ಡಿ ಮೊತ್ತವನ್ನು ಕ್ರೋಡೀಕರಿಸಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಿಯಾಯೋಜನೆ ರೂಪಿಸಿ ತಾಪಂಗೆ ಸಲ್ಲಿಸಿ ತುರ್ತು ವ್ಯವಸ್ಥೆಗೆ ಬಳಕೆ ಮಾಡಿಕೊಳ್ಳಬೇಕು ಎಂದರು.
ತಾಲೂಕಿನಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿಗಾಗಿ ಬಹುತೇಕ ಕಡೆ ರಸ್ತೆಗಳನ್ನು ಅಗೆಯಲಾಗಿದೆ. ಇದರಿಂದ ಸಾರ್ವಜನಿಕ ಸಮಸ್ಯೆ ಎದುರಾಗಿದೆ. ಜೆಜೆಎಂ ವತಿಯಿಂದ ತೆಗೆಸಿರುವ ಕೊಳವೆ ಬಾವಿಗಳಿಗೂ ಇದುವರೆಗೆ ಸಂಪರ್ಕ ಕಲ್ಪಿಸಿಲ್ಲ. ಮನೆ ಮನೆಗಳಿಗೆ ಸರಿಯಾದ ರೀತಿಯಲ್ಲಿ ನಲ್ಲಿಗಳನ್ನು ಅಳವಡಿಸಿಲ್ಲ. ಜೆಜೆಎಂ ಕಾಮಗಾರಿಯಿಂದ ಯಾವುದೇ ಕಾರಣಕ್ಕೂ ಕುಡಿಯುವ ನೀರು ಪೂರೈಕೆಗೆ ಅಡ್ಡಿಯಾಗದಂತೆ ಕ್ರಮ ವಹಿಸುವಂತೆ ಶಾಸಕರು ಎಚ್ಚರಿಸಿದರು.ತಾಲೂಕಿನ ಆಲಂಬಾಡಿ ಕಾವಲು ಗ್ರಾಪಂಲ್ಲಿ ಕಳೆದ ಐದಾರು ದಿನಗಳಿಂದ ಜನರಿಗೆ ಕುಡಿಯುವ ನೀರು ಬಿಟ್ಟಿಲ್ಲ. ಪಿಡಿಓ ಮೋಟಾರ್ ಸುಟ್ಟಿದೆ ಎಂದು ಕಾರಣ ಹೇಳುತ್ತಿದ್ದಾರೆ. ಸುಟ್ಟುಹೋದ ಒಂದು ಮೋಟಾರನ್ನು ತಕ್ಷಣವೇ ಸರಿಪಡಿಸಿ ಜನರಿಗೆ ಕುಡಿಯುವ ನೀರು ಕೊಡಲಾಗುವುದಿಲ್ಲವೇ? ಎಂದು ಪಿಡಿಓ ವಿರುದ್ಧ ಹರಿಹಾಯ್ದರು.
ವಿದ್ಯುತ್ ಇಲಾಖೆ ಅಸಹಕಾರದಿಂದ ಕೆಲವು ಕಡೆ ಕುಡಿಯುವ ನೀರು ಪೂರೈಕೆಗೆ ಅಡಚಣೆಯಾಗುತ್ತಿದೆ. ಸೆಸ್ಕಾಂ ಅಧಿಕಾರಿಗಳು ಸಕಾರಾತ್ಮಕ ಸಹಕಾರ ನೀಡುವಂತೆ ಕೆಲವು ಪಿಡಿಓಗಳು ಸಭೆಯಲ್ಲಿ ಶಾಸಕರ ಗಮನ ಸೆಳೆದರು. ಕುಡಿಯುವ ನೀರು ಪೂರೈಕೆ, ರೈತರ ಕೃಷಿ ಪಂಪ್ ಸೆಟ್ಟುಗಳು ಸೇರಿದಂತೆ ಯಾವುದೇ ಸಾರ್ವಜನಿಕ ಸಮಸ್ಯೆಗಳಿಗೆ ಅನಗತ್ಯ ಕೊಕ್ಕೆ ಹಾಕದಂತೆ ಸೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ತಾಪಂ ಇಒ ಕೆ.ಸುಷ್ಮಾ, ತಾಪಂ ಯೋಜನಧಿಕಾರಿ ಶ್ರೀನಿವಾಸ್, ಗ್ರೇಡ್-2 ತಹಸೀಲ್ದಾರ್ ಲೋಕೇಶ್, ಸೆಸ್ಕಾಂ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಜಿಪಂ ಕುಡಿಯುವ ನೀರು ವಿಭಾಗದ ಎಂಜಿನಿಯರ್ ರಶ್ಮಿ ಸೇರಿದಂತೆ ವಿವಿಧ ಗ್ರಾಪಂ ಆಡಳಿತಾಧಿಕಾರಿಗಳು ಮತ್ತು ಪಿಡಿಒಗಳು ಇದ್ದರು.