ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 33 ಮತ್ತು 34ರಲ್ಲಿ ಪಾಲಿಕೆ ಆಯುಕ್ತೆ ಅಶ್ವಿಜ ಪರಿಶೀಲನೆ ಕೈಗೊಂಡು ವಾರ್ಡ್ ಮಟ್ಟದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆ, ಅಹವಾಲುಗಳನ್ನು ಖುದ್ದಾಗಿ ಆಲಿಸಿ ಪರಿಹಾರ ನೀಡಲು ತಾಂತ್ರಿಕ, ನೀರು ಸರಬರಾಜು, ಯುಜಿಡಿ, ಆರೋಗ್ಯ ಮತ್ತು ಕಂದಾಯ ವಿಭಾಗದ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಭೇಟಿ ನೀಡಿದರು.ಮಹಾನಗಪಾಲಿಕೆ ವ್ಯಾಪ್ತಿಯ ಎಸ್‌ಎಲ್‌ಎನ್ ನಗರ, ಕ್ಯಾತ್ಸಂದ್ರಗಳಲ್ಲಿನ ಯುಜಿಡಿ ದೂರುಗಳಿಗೆ ಸಂಬಂಧಿಸಿದಂತೆ ಯುಜಿಡಿ ವಿಭಾಗದಿಂದ ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಪರಿಶೀಲಿಸಿ ಯುಜಿಡಿ ಪೈಪ್‌ಲೈನ್ ಸ್ವಚ್ಛತೆ ಕೈಗೊಳ್ಳುವ ಕಾರ್ಮಿಕರಿಗೆ ಅಗತ್ಯ ಸುರಕ್ಷಾ ಪರಿಕರಗಳನ್ನು ಧರಿಸಿ ಸಾರ್ವಜನಿಕ ದೂರುಗಳನ್ನು ಆದ್ಯತೆ ಮೇರೆಗೆ ಪರಿಹರಿಸಲು ಸೂಚಿಸಿದರು. ಸ್ಥಳೀಯ ಸಾರ್ವಜನಿಕರೊಂದಿಗೆ ಸಂವಾದ ನಡೆಸಿ ಇನ್ನೂ ಯುಜಿಡಿ ಸಂಪರ್ಕ ಪಡೆಯದೇ ಇರುವ ಬಗ್ಗೆ ವಿಚಾರಿಸಿ ಸಂಪರ್ಕ ಪಡೆಯಲು ಇರುವ ಅಡೆತಡೆಗಳ ಬಗ್ಗೆ ಮಾಹಿತಿ ಪಡೆದು ಸಾರ್ವಜನಿಕರು ಸರಳವಾಗಿ ಯುಜಿಡಿ ಸಂಪರ್ಕ ಪಡೆಯುವಂತೆ ತುರ್ತು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸದರಿ ವಾರ್ಡ್‌ಗಳ ಕಸ ವಿಲೇವಾರಿ, ಸ್ವಚ್ಛತೆ ವಿಷಯವಾಗಿ ಪರಿಶೀಲಿಸಿ ಕಸ ಸಂಗ್ರಹಣೆಯಲ್ಲಿನ ನ್ಯೂನ್ಯತೆ ಕುರಿತಂತೆ ಸಾರ್ವಜನಿಕರಿಂದ ಕೇಳಿಬಂದ ದೂರುಗಳನ್ನು ಪರಿಹರಿಸಲು ಆರೋಗ್ಯ ಶಾಖೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಪ್ರತಿ ದಿನ ಕಸ ಸಂಗ್ರಹಿಸಲು, ಬ್ಲಾಕ್ ಸ್ಪಾಟ್‌ಗಳಲ್ಲಿ ಕಸ ಸಂಗ್ರಹವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಹಾಗೂ ಕೋಳಿ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದಂತೆ ಅಂಗಡಿ ಮಾಲೀಕರಿಗೆ ತಿಳಿವಳಿಕೆ ನೀಡಲಾಯಿತು. ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸಿ ಪಾಲಿಕೆ ಕಸದ ಆಟೋಗಳಿಗೆ ನೀಡಲು ಸ್ಥಳೀಯ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಯಿತು. ಸದರಿ ವಾರ್ಡ್‌ಗಳಲ್ಲಿನ ಸಮುದಾಯ ಶೌಚಾಲಯಗಳ ಸ್ವಚ್ಛತೆಯ ಬಗೆಗಿನ ದೂರುಗಳ ಕುರಿತು ಪರಿಶೀಲಿಸಿ, ಪ್ರತಿದಿನ ಶೌಚಾಲಯದ ಸ್ವಚ್ಚತೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಸಂಬಂಧಪಟ್ಟ ಸಿಬ್ಬಂದಿಗಳಿಗೆ ಸೂಚಿಸಲಾಯಿತು. ಸದರಿ ಶೌಚಾಯದಲ್ಲಿನ ಬೆಳಕಿನ ವ್ಯವಸ್ಥೆ ಕಲ್ಪಿಸಲು ಹಾಗೂ ಶೌಚಾಲಯದಲ್ಲಿ ನೀರು ಪೂರೈಕೆಯಲ್ಲಿನ ಲೋಪ ಸರಿಪಡಿಸಲು ವಾರ್ಡ್ ಇಂಜಿನಿಯರ್‌ಗೆ ಆದೇಶಿಸಿದರು.ಕ್ಯಾತ್ಸಂದ್ರದಲ್ಲಿರುವ ಸಮುದಾಯ ಭವನವು ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗದೇ ಇರುವ ಬಗೆಗಿನ ಸಾರ್ವಜನಿಕರ ದೂರಿನ ಕುರಿತು ಪರಿಶೀಲಿಸಿದರು. ಸದರಿ ಸಮುದಾಯ ಭವನದ ಸುತ್ತುಮತ್ತ ಮಳೆ ನೀರು ಸಂಗ್ರವಾಗುತ್ತಿದ್ದು, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ತುರ್ತಾಗಿ ಸದರಿ ಸಮುದಾಯ ಭವನವನ್ನು ಸಾರ್ವಜನಿಕ ಉಪಯೋಗಕ್ಕೆ ಲಭ್ಯವಾಗುವಂತೆ ಕ್ರಮವಹಿಸಲು ವಾರ್ಡ್‌ನ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಆದೇಶಿಸಲಾಯಿತು.ಎಸ್‌ಎಲ್‌ಎನ್ ನಗರದ ಪೇಟೆ ಬೀದಿಯಲ್ಲಿನ ಹಲವು ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಉದ್ದಿಮೆ ಪರವಾನಿಗೆ ಪಡೆದು ವಾಣಿಜ್ಯ ವಹಿವಾಟು ನಡೆಸಲು ತಿಳಿಸಿದರು. ಇನ್ನೂ ವಾಣಿಜ್ಯ ಉದ್ದಿಮೆ ಪಡೆಯದೇ ಇರುವ ಉದ್ದಿಮೆಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ವಹಿಸಲು ವಾರ್ಡ್ ಆರೋಗ್ಯ ನಿರೀಕ್ಷಕರಿಗೆ ಸೂಚಿಸಲಾಯಿತು.