ಸಾರಾಂಶ
ಯಲಬುರ್ಗಾ:
ಮಳೆಯಿಂದ ಹಳ್ಳಿಯಲ್ಲಿ ಡೆಂಘೀ ಸೇರಿದಂತೆ ವಿವಿಧ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಇದ್ದು ಈ ಕುರಿತು ಯಾವ ಕ್ರಮಕೈಗೊಂಡಿದ್ದೀರಿ ಎಂದು ಜಿಪಂ ಉಪ ಕಾರ್ಯದರ್ಶಿ ಟಿ. ಕೃಷ್ಣಮೂರ್ತಿ ಅವರು ಟಿಎಚ್‌ಒ ನೇತ್ರಾವತಿ ಹಿರೇಮಠ ಅವರನ್ನು ತಾಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿದರು.ಟಿಎಚ್‌ಒ ಪ್ರತಿಕ್ರಿಯಿಸಿ, ತಾಲೂಕಿನ ಗುನ್ನಾಳ, ಸಂಗನಾಳ, ಗುನ್ನಾಳ, ಬೇವೂರು, ಹಿರೇವಂಕಲಕುಂಟಾ, ತಾಳಕೇರಿ, ಬಂಡಿ ಹಾಗೂ ಕುಕನೂರು ತಾಲೂಕಿನ ಮಾಳೆಕೊಪ್ಪ, ಬಿಡನಾಳ, ಕುದರಿಮೋತಿ, ಚಿಕೇನಕೊಪ್ಪ ಗ್ರಾಪಂ ವ್ಯಾಪ್ತಿಯಲ್ಲಿ ಕಲುಷಿತ ನೀರು, ಅಸ್ವಚ್ಛತೆಯಿಂದಾಗಿ ಡೆಂಘೀ ಪ್ರಕರಣ ಕಂಡು ಬಂದಿದೆ. ಈ ಕುರಿತು ವರದಿ ತಯಾರಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಚ್ಛತೆ ಕಾಪಾಡಲು ಗ್ರಾಪಂಗಳಿಗೆ ತಿಳಿಸಲಾಗಿದೆ ಎಂದರು.
ಪರಿಸ್ಥಿತಿ ಆಧರಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಇಂಥ ಗಂಭೀರ ವಿಷಯಗಳ ಕುರಿತು ತಾಪಂ ಹಾಗೂ ಆರ್‌ಡಬ್ಲ್ಯೂಎಸ್‌ಗೆ ಮಾಹಿತಿ ನೀಡಬೇಕು ಎಂದು ಉಪ ನಿರ್ದೇಶಕರು ತಿಳಿಸಿದರು. ಈಗಾಗಲೇ ಸ್ವಚ್ಛತೆ ಕೈಗೊಂಡು ಫಾಗಿಂಗ್ ಮಾಡಿಸಲಾಗಿದೆ ಎಂದು ಸಂಬಂಧಿಸಿದ ಆಯಾ ಗ್ರಾಪಂ ಪಿಡಿಒಗಳು ಸಭೆಯ ಗಮನಕ್ಕೆ ತಂದರು.ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಯಾದ ಶಾಲಾ ಕೊಠಡಿಗಳ ಪರಿಶೀಲನೆ ನಡೆಸಿ ದುರಸ್ತಿಗಾಗಿ ಜಿಪಂಗೆ ವರದಿ ಕೊಡಬೇಕು ಎಂದು ಪ್ರಭಾರ ಬಿಇಒ ಅಶೋಕ ಗೌಡರ್‌ಗೆ ಕೃಷ್ಣಮೂರ್ತಿ ನಿರ್ದೇಶಿಸಿದರು. ಇದಕ್ಕೆ ಪ್ರಭಾರ ಬಿಇಒ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ಈ ಮುಂಚೆ ಹಾನಿಯಾದ ಕಟ್ಟಡಗಳ ಮೇಲ್ಚಾವಣಿ ದುರಸ್ತಿಗಾಗಿ ₹ ೧೭.೧೦ ಲಕ್ಷ ಕ್ರಿಯಾಯೋಜನೆ ತಯಾರಿಸಿ ಜಿಪಂಗೆ ವರದಿ ಕಳಿಸಲಾಗಿದೆ. ವಾರದಿಂದ ಸುರಿಯುತ್ತಿರುವ ಮಳೆಯಿಂದ ಹಾನಿಯಾದ ಕಟ್ಟಡಗಳ ಸ್ಥಳ ಪರಿಶೀಲನೆ ನಡೆಸಿ ವರದಿ ತಯಾರಿಸಲಾಗುವುದು ಎಂದರು.
೨೪೦೦ ಮೆಟ್ರಿಕ್ ಟನ್ ಯೂರಿಯಾ:ಯಲಬುರ್ಗಾ ಹಾಗೂ ಕುಕನೂರು ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ೮೭ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೊಂಡಿದೆ. ಸಹಕಾರ ಸಂಘಗಳ ಮೂಲಕ ಈಗಾಗಲೇ ೨೪೦೦ ಮೆಟ್ರಿಕ್ ಟನ್ ಯೂರಿಯಾ ರಸಗೊಬ್ಬರ ವಿತರಿಸಲಾಗಿದೆ. ಇನ್ನು ಗೊಬ್ಬರದ ಬೇಡಿಕೆ ಇದೆ. ಆದ್ಯತೆ ಮೇರೆಗೆ ಹಂಚಿಕೆ ಮಾಡಲಾಗುತ್ತಿದೆ. ೨೦೨೫-೨೬ನೇ ಸಾಲಿಗೆ ಕ್ಷೇತ್ರದಲ್ಲಿ ೫೦೦ ಕೃಷಿಹೊಂಡ ನಿರ್ಮಾಣ ಮಾಡುವ ಗುರಿ ಇದೆ. ಈ ಆರ್ಥಿಕ ವರ್ಷದಲ್ಲಿ ೧೨೦೦ ರೈತರಿಗೆ ಸ್ಪಿಂಕ್ಲರ್ ಪೈಪ್ ವಿತರಣೆ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಸಭೆಯ ಗಮನಕ್ಕೆ ತಂದರು.
೪೯೯ ಶಿಕ್ಷಕರ ಹುದ್ದೆ ಖಾಲಿ:ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಅಭ್ಯಾಸದ ಗುಣಮಟ್ಟ ಹೆಚ್ಚಿಸಲು ಶಿಕ್ಷಣ ಇಲಾಖೆಯಿಂದ ೨೯ ಅಂಶಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಾರದಲ್ಲಿ ೨ ಬಾರಿ ಆಯಾ ಶಾಲೆಗೆ ಭೇಟಿ ನೀಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಕಾರ್ಯನಿರತ ಮತ್ತು ಖಾಲಿ ಹುದ್ದೆಗಳ ಮಾಹಿತಿ ಪ್ರಕಾರ ೪೯೯ ಶಿಕ್ಷಕರ ಹುದ್ದೆ ಖಾಲಿ ಇವೆ ಎಂದು ಪ್ರಭಾರ ಬಿಇಒ ಅಶೋಕ ಗೌಡರ ಮಾಹಿತಿ ನೀಡಿದರು. ಇದೇ ವೇಳೆ ತಾಲೂಕು ಮಟ್ಟದ ಇಲಾಖೆ ಅಧಿಕಾರಿಗಳು ತಮ್ಮ ಪ್ರಗತಿ ವರದಿ ಮಂಡಿಸಿದರು.ಈ ವೇಳೆ ತಾಪಂ ಇಒ ಸಂತೋಷ ಪಾಟೀಲ್, ಸಹಾಯಕ ನಿರ್ದೇಶಕರಾದ ಹನಮಂತಗೌಡ ಪಾಟೀಲ್, ಎಫ್.ಡಿ. ಕಟ್ಟಿಮನಿ, ಶರಣಪ್ಪ ಕೆಳಗಿನಮನಿ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಲಿಂಗನಗೌಡ ಪಾಟೀಲ್, ಸಿಡಿಪಿಒ ಬೆಟ್ಟದೇಶ ಮಾಳೆಕೊಪ್ಪ, ಪ್ರಕಾಶ ಚೂರಿ, ಟಿ.ಜೆ. ದಾನಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.