ಸುರಕ್ಷತೆಯ ನಂಬಿಕೆಯಿಂದ ನಿತ್ಯ ಲಕ್ಷಾಂತರ ಜನರು ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಅವರ ಸುರಕ್ಷತೆ ಹಾಗೂ ತಮ್ಮ ಸುರಕ್ಷತೆಯ ಬಗ್ಗೆ ಸಿಬ್ಬಂದಿ ಹೆಚ್ಚಿನ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಂಸ್ಥೆಯ ಎಂಡಿ ಪ್ರಿಯಾಂಗಾ ಎಂ. ತಮ್ಮ ಸಿಬ್ಬಂದಿಗೆ ಹೇಳಿದರು.
ಹುಬ್ಬಳ್ಳಿ:
ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಸಾರ್ವಜನಿಕರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ಸೂಚಿಸಿದರು.ಇಲ್ಲಿನ ಹುಬ್ಬಳ್ಳಿ ಗ್ರಾಮಾಂತರ 1ನೇ ಘಟಕಕ್ಕೆ ತೆರಳಿ ಸಿಬ್ಬಂದಿಗಳಿಗೆ ಸಿಹಿ ಹಂಚಿ ಹೊಸ ವರ್ಷದ ಶುಭಾಶಯ ತಿಳಿಸಿ ಮಾತನಾಡಿದರು.
ಸುರಕ್ಷತೆಯ ನಂಬಿಕೆಯಿಂದ ನಿತ್ಯ ಲಕ್ಷಾಂತರ ಜನರು ನಮ್ಮ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಅವರ ಸುರಕ್ಷತೆ ಹಾಗೂ ತಮ್ಮ ಸುರಕ್ಷತೆಯ ಬಗ್ಗೆ ಸಿಬ್ಬಂದಿ ಹೆಚ್ಚಿನ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ರಸ್ತೆಯ ಮೇಲೆ ಇತರೆ ವಾಹನಗಳೊಂದಿಗೆ ಪೈಪೋಟಿಗೆ ಇಳಿಯಬಾರದು. ಬಸ್‌ಗಳ ಸಮರ್ಪಕ ನಿರ್ವಹಣೆಗೆ ತಾಂತ್ರಿಕ ಸಿಬ್ಬಂದಿ ಸಕಾಲದಲ್ಲಿ ಅಗತ್ಯ ಕ್ರಮ ವಹಿಸಬೇಕು. ಎಲ್ಲರೂ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಕೌಟುಂಬಿಕ ಹಾಗೂ ವೃತ್ತಿ ಬದುಕಿನ ಸಮತೋಲನ ನಿಭಾಯಿಸಬೇಕು ಎಂದರು.ವಿಭಾಗೀಯ ನಿಯಂತ್ರಣಧಿಕಾರಿ ಎಚ್. ರಾಮನಗೌಡರ ಮಾತನಾಡಿ, ಎಲ್ಲ ಸಿಬ್ಬಂದಿಗಳಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿ ಮಾಡಿ ಹೊಸ ವರ್ಷದ ಶುಭಾಶಯಗಳು ತಿಳಿಸಲು ಸಾಧ್ಯವಾಗುವುದಿಲ್ಲ. ಆದರೆ, ತಾವೇ ಸ್ವತಃ ನೌಕರರ ಕಾರ್ಯ ಸ್ಥಳಕ್ಕೆ ಬಂದು ಹೊಸ ವರ್ಷದ ಶುಭಾಶಯ ತಿಳಿಸಿ, ಸಿಹಿಹಂಚಿ ಅವರೊಂದಿಗೆ ಸಂವಾದ ನಡೆಸಿರುವುದು ನೌಕರರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದಂತಾಗಿದೆ ಎಂದು ಹೇಳಿದರು.
ಈ ವೇಳೆ ವಿಭಾಗೀಯ ತಾಂತ್ರಿಕ ಎಂಜಿನಿಯರ್ ದೀಪಕ ಜಾಧವ, ವಿಭಾಗೀಯ ಸಂಚಾರ ಅಧಿಕಾರಿ ವೈ.ಎಂ. ಶಿವರೆಡ್ಡಿ, ಪ್ರಭಾರ ಸಹಾಯಕ ಉಗ್ರಾಣಾಧಿಕಾರಿ ಶ್ರೀದೇವಿ ಉಪರಿ, ಡಿಪೋ ಮ್ಯಾನೇಜರ್ ಚೈತನ್ಯ ಅಗಳಗಟ್ಟಿ, ಮೇಲ್ವಿಚಾರಕರು, ಚಾಲಕರು, ನಿರ್ವಾಹಕರು, ತಾಂತ್ರಿಕ, ಆಡಳಿತ ಸಿಬ್ಬಂದಿಗಳಿದ್ದರು.