ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಕ್ಫ್ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಹೋರಾಟದಲ್ಲಿ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಶ್ರೀಗಳು ತಮ್ಮ ನಾಲಿಗೆಯಿಂದ ಕೋಮುದ್ವೇಷ ಹುಟ್ಟಿಸುವಂತೆ ಮಾತನಾಡಿದ್ದಾರೆ. ರಾಜಕೀಯ ಮಾಡುವುದಿದ್ದರೇ ಕಾವಿ ಕಿತ್ತೊಗೆದು ರಾಜಕೀಯ ಅಖಾಡಕ್ಕೆ ಬರ್ರಿ. ರಾಜಕೀಯ ಮಾಡೋಣು ಎಂದು ಕನ್ಹೇರಿ ಶ್ರೀಗಳಿಗೆ ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಸವಾಲು ಹಾಕಿದರು.ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಾವಿಗೆ ಭವ್ಯ ಪರಂಪರೆ ಇದೆ. ಕಾವಿ ಧರಿಸಿದವರಿಗೆ ನಾವೆಲ್ಲರೂ ಗೌರವ ಕೊಡುತ್ತೇವೆ. ಶಾಸಕ ಯತ್ನಾಳ ಅವರು ಹೇಳಿದ್ದನ್ನು ಕೇಳಿಕೊಂಡು ಮುಸ್ಲಿಮರ ಬಗ್ಗೆ ಹಗುರವಾಗಿ ಮಾತನಾಡುವ ಸ್ವಾಮೀಜಿಗಳಿಗೆ ಯಾರು ಗುರು ಎಂಬುವುದು ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.ಜೆಪಿಸಿ ಕಮಿಟಿ ಚೇರಮನ್ ಜಗದಾಂಬಿಕಾ ಪಾಲ ಅವರಿಗೆ ನ.4 ರಂದು ಸಚಿವೆ ಶೋಭಾ ಕರಂದ್ಲಾಜೆ ಅವರು ಪತ್ರ ಬರೆದು ರೈತರಿಗೆ ಅನ್ಯಾಯ ಆಗಿದೆ. ಹಾಗಾಗಿ ವಕ್ಫ್ ಕಾನೂನು ರದ್ದು ಮಾಡುವ ಧರಣಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅದನ್ನು ನಂಬಿ ಅವರು ದಿಢೀರನೆ ವಿಶೇಷ ವಿಮಾನದ ಮೂಲಕ ನಗರಕ್ಕೆ ಬಂದಿದ್ದರು. ವಕ್ಫ್ ಕಾನೂನು ತಿದ್ದುಪಡಿ ಮಸೂದೆ ಅಧ್ಯಕ್ಷರಾಗಿರುವ ಪಾಲ ಅವರು, ವಕ್ಫ್ ಕಾನೂನು ರದ್ಧತಿ ವಿಚಾರಕ್ಕೆ ಆಗಮಿಸಿದ್ದು, ತಮ್ಮದಲ್ಲದ ವ್ಯಾಪ್ತಿಗೆ ಬಂದಂತಾಗಿದೆ ಎಂದು ಕಿಡಿಕಾರಿದರು.ಸಿಎಂ ಸಿದ್ದರಾಮಯ್ಯನವರು ರೈತರಿಗೆ ಹೊರಡಿಸಿದ ಎಲ್ಲ ನೋಟಿಸ್‌ಗಳನ್ನು ವಾಪಸ್ ಪಡೆಯಲಾಗಿದೆ. ಯಾವುದೇ ತಿದ್ದುಪಡಿಯನ್ನು ರೈತರ ಪಹಣಿಯಲ್ಲಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಬಿಜೆಪಿಯವರಿಂದ 2 ವಾರಗಳಿಂದ ನಡೆಯುತ್ತಿರುವ ವಕ್ಫ್ ವಿರೋಧಿ ಹೋರಾಟ ನಗೆಪಾಟಿಲಿಗೆ ಈಡಾಗಿದೆ. ಏಕೆಂದರೆ 4 ದಿನಗಳ ಕಾಲ ನಡೆದ ಧರಣಿಯಲ್ಲಿ ಒಬ್ಬರೂ ರೈತರ ಪರವಾಗಿ ಮಾತನಾಡಿಲ್ಲ. ಕೇವಲ ಮುಸ್ಲಿಮರನ್ನು ಮಾತ್ರ ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ವಕ್ಫ್ ಬಗ್ಗೆ, ಧರ್ಮದ ಭಗ್ಗೆ, ಕರ್ಮದ ಬಗ್ಗೆ ಗೊತ್ತಿಲ್ಲದವರೆಲ್ಲ ವಕ್ಫ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.ವಕ್ಫ್ ಲಾ ಎಂಬ ಪುಸ್ತಕದಲ್ಲಿ ಸೂಚಿಸಿರುವುದನ್ನು ಬಿಟ್ಟರೇ ಬೇರೆಯದ್ದು ಒಂದು ಇಂಚು ಜಾಗ ಕೂಡ ತೆಗೆದುಕೊಳ್ಳಲು ವಕ್ಫ್‌ಗೆ ಅಧಿಕಾರ ಇಲ್ಲ. ಆ 4 ತರಹದ ಆಸ್ತಿಗಳು ಯಾವುದು ಎಂದರೇ ಮೊದಲನೇಯದಾಗಿ ದೇವರ ಹೆಸರಿನಲ್ಲಿ ಯಾವುದೇ ವ್ಯಕ್ತಿ ತನ್ನ ಆಸ್ತಿಯನ್ನು ಬಿಟ್ಟುಕೊಟ್ಟಾಗ. 2ನೇಯದಾಗಿ ಹಿಂದಿನ ಕಾಲದಲ್ಲಿ ವಕ್ಫ್ ಉಪಯೋಗಿಸುತ್ತ ಬಂದ ಆಸ್ತಿ. 3ನೇಯದಾಗಿ ಮುಸ್ಲಿಂ ಸಮಾಜದ ಜನರಿಗೆ (ಕಿದ್ಮತಗಾರ) ಗ್ರ್ಯಾಂಟ್ ಆದ ಭೂಮಿ. 4ನೇಯದಾಗಿ ವಂಶ ಪಾರಂಪರವಾಗಿ ಬಂದ ಆಸ್ತಿಗಳು. ಹೀಗೆ ಈ 4 ಮೂಲದ ಆಸ್ತಿಗಳು ಮಾತ್ರ ವಕ್ಫ್‌ಗೆ ಬರಲು ಸಾಧ್ಯ. ಇದನ್ನು ಬಿಟ್ಟು ಬೇರೆ ಯಾವುದೇ ಅಥವಾ ಯಾರದ್ದೇ ಆಸ್ತಿಯನ್ನು ವಕ್ಫ್‌ಗೆ ತೆಗೆದುಕೊಳ್ಳಲು ಅಧಿಕಾರವಿಲ್ಲ. ಆದರೆ, ಶಾಸಕ ಯತ್ನಾಳ, ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿಯವರು ಹಿಂದೂ-ಮುಸ್ಲಿಂ ಜನರಗಳ ಮಧ್ಯೆ ಜಗಳ ಹಚ್ಚಲು ಹಾಗೂ ಈ ಮೂಲಕ ತಮ್ಮ ಮತಗಳ ಕ್ರೋಢೀಕರಣ ಮಾಡಲು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ದೂರಿದರು.ಗೋಷ್ಠಿಯಲ್ಲಿ ಡಾ.ರವಿಕುಮಾರ ಬಿರಾದಾರ, ನಾಗರಾಜ ಲಂಬು, ಫಯಾಜ್ ಕಲಾದಗಿ ಉಪಸ್ಥಿತರಿದ್ದರು.ವಕ್ಫ್ ಆಸ್ತಿ ಯಾವುದು?, ಯಾವ ಆಸ್ತಿ ವಕ್ಫ್‌ಗೆ ಹೋಗುತ್ತದೆ ಎಂಬುವುದರ ಕುರಿತು ಅದಕ್ಕೊಂದು ಕಾನೂನು ಇದೆ. ಆ ಕಾನೂನಿನ ಪುಸ್ತಕದಲ್ಲಿ ಹೇಳಿರುವಂತೆ ಕೇವಲ 4 ಮೂಲಗಳಿಂದ ಬರುವ ಆಸ್ತಿಗಳು ಮಾತ್ರ ವಕ್ಫ್‌ಗೆ ಆಸ್ತಿ ಬರಲು ಸಾಧ್ಯ.
-ಎಸ್.ಎಂ.ಪಾಟೀಲ ಗಣಿಹಾರ, ಅಹಿಂದ ಮುಖಂಡರು.