ಸಾರಾಂಶ
ಹಾವೇರಿ: ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಆರ್. ವಿಶಾಲ್ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಕಂದಾಯ, ವಿಪತ್ತು ನಿರ್ವಹಣೆ, ಜಿಲ್ಲಾ ಪಂಚಾಯತಿ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯಕ್ರಮಗಳು, ಕುಡಿಯುವ ನೀರು, ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.ಬರುವ ಬೇಸಿಗೆ ಸಮಯದಲ್ಲಿ ನೀರು ಪೂರೈಕೆ ಅಗತ್ಯ ಜಲಮೂಲಗಳಿಂದ ನೀರಿನ ಸಂಗ್ರಹಣೆ ಮಾಡಿಕೊಳ್ಳಬೇಕು. ಜಿಲ್ಲೆಯ ಎಲ್ಲ ನಗರ, ಪಟ್ಟಣಗಳ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ನಗರದ ಕುಡಿಯುವ ನೀರಿನ ಮೂಲ, ಕೊಳವೆಬಾವಿಗಳ ವಿವರ, ಅಂತರ್ಜಲ ಮಟ್ಟಗಳ ವಿವರ, ದುರಸ್ತಿಯಲ್ಲಿರುವ ಹಾಗೂ ಸುಸ್ಥಿತಿಯಲ್ಲಿರುವ ಕೊಳವೆಬಾವಿಗಳ ಮಾಹಿತಿಯನ್ನು ಸಂಗ್ರಹಿಸಬೇಕು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಸಿದ್ಧತೆ ಮಾಡಿಕೊಳ್ಳಬೇಕು. ಪರ್ಯಾಯ ನೀರಿನ ಲಭ್ಯತೆ, ಮೂಲಗಳನ್ನು ಗುರುತುಮಾಡಿಕೊಂಡು ಅಗತ್ಯ ಬಿದ್ದಾಗ ಬಳಕೆಮಾಡಿಕೊಳ್ಳುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುವಂತೆ ತಾಕೀತು ಮಾಡಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಮಮತಾ ಮಾಯಮಾಡಿ, ಕಳೆದ ಬೇಸಿಗೆಯಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಿಲ್ಲ. ಹೆಗ್ಗೇರಿ ಕೆರೆ ಹಾಗೂ ಬೋರವೆಲ್‌ಗಳ ಮೂಲಕ ನೀರು ಸರಬರಾಜು ಮಾಡಲಾಗಿದೆ. ನೀರಿನ ಕೊರತೆ ಇರುವುದಿಲ್ಲ ಎಂದು ಮಾಹಿತಿ ನೀಡಿದರು.ಜಾನುವಾರುಗಳಿಗೆ ಲಸಿಕೆ ಹಾಕಿಸಿ: ಜಾನುವಾರುಗಳಿಗೆ ಅಗತ್ಯ ಲಸಿಕೆಗಳನ್ನು ಸಕಾಲದಲ್ಲಿ ನೀಡಬೇಕು ಹಾಗೂ ಕುಡಿಯುವ ನೀರಿನ ಜೊತೆಗೆ ಜಾನುವಾರುಗಳಿಗೆ ಮೇವಿನ ಸಂಗ್ರಹಣೆ ಬಗ್ಗೆ ಗಮನಹರಿಸಬೇಕು. ನೀರಾವರಿ ಹೊಂದಿದ ರೈತರಿಗೆ ಅಗತ್ಯ ಮೇವಿನ ಬೀಜದ ಕಿಟ್ ನೀಡಬೇಕು ಎಂದು ಪಶು ಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.
ಏಪ್ರಿಲ್-ಮೇ ತಿಂಗಳಲ್ಲಿ ಅಧಿಕ ಬಿಸಿಲಿನಿಂದ ಉಂಟಾಗುವ ಹೀಟ್ ಸ್ಟೋಕ್‌ಗೆ ಚಿಕಿತ್ಸೆ ನೀಡಲು ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಲಾಯನ್ ಸಂಗ್ರಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮೂರರಿಂದ ಆರು ತಿಂಗಳ ಅವಧಿಯ ಕೋರ್ಟ್ ಕೇಸ್‌ಗಳನ್ನು ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಆದ್ಯತೆ ಮೇರೆಗೆ ಇತ್ಯರ್ಥಗೊಳಿಸಬೇಕು. ಆರ್‌ಟಿಸಿ ಮ್ಯೂಟೇಷನ್ ಹಾಗೂ ಆರ್‌ಟಿಸಿ ಕರೆಕ್ಸನ್ ತ್ವರಿತವಾಗಿ ಕಾಲಮಿತಿಯೊಳಗೆ ವಿಲೇಗೊಳಿಸಬೇಕು ಹಾಗೂ ಭೂಮಾಪನ ಬಾಕಿ ಪ್ರಕರಣಗಳನ್ನು ತ್ವರಿತವಾಗಿ ವಿಲೇಗೊಳಿಸುವಂತೆ ಸೂಚನೆ ನೀಡಿದರು.ಜಿಲ್ಲೆಯಲ್ಲಿ ಆರ್‌ಟಿಸಿಗೆ ಆಧಾರ್ ಜೋಡಣೆ ಬಹಳ ಕಡಿಮೆಯಾಗಿದ್ದು, ಆದ್ಯತೆ ಮೇರೆಗೆ ನೂರಕ್ಕೆ ನೂರರಷ್ಟು ಆಧಾರ್ ಜೋಡಣೆಗೆ ಕ್ರಮವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾನಗಲ್ಲ ತಾಲೂಕಿನ ಯಳವಟ್ಟಿಯಲ್ಲಿ ಗುರುತಿಸಲಾದ ಮಾವು ಸಂಸ್ಕರಣ ಘಟಕದ ಜಮೀನು ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಅಗತ್ಯ ಮಾಹಿತಿ ಕಲೆಹಾಕಿ ವಿವರ ನೀಡುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಹಾಗೂ ಶಿಗ್ಗಾಂವಿ ಟೆಕ್ಸ್‌ಟೈಲ್ ಪಾರ್ಕ್ ಕಾಮಗಾರಿ ಕುರಿತು ವಿವರವಾದ ಮಾಹಿತಿ ನೀಡುವಂತೆ ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಾಮಾಜಿಕ ಪಿಂಚಣಿ, ಅನ್ನಭಾಗ್ಯ, ಭಾಗ್ಯಲಕ್ಷ್ಮಿ ಸೇರಿದಂತೆ ವಿವಿಧ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ಮರಣಹೊಂದಿದ ಕುರಿತು ಇ-ಜನ್ಮ ತಂತ್ರಾಂಶದಲ್ಲಿ ದಾಖಲಾಗದ ಪ್ರಕರಣಗಳನ್ನು ಪತ್ತೆ ಹಚ್ಚಿ ಸೌಲಭ್ಯಗಳು ದುರುಪಯೋಗವಾಗದಂತೆ ಸ್ಥಗಿತಗೊಳಿಸಬೇಕು ಎಂದು ತಹಸೀಲ್ದಾರ್‌ಗಳಿಗೆ, ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತೋಟಗಾರಿಕೆ, ಕೃಷಿ ಇಲಾಖೆ, ಮೀನುಗಾರಿಕೆ, ರೇಷ್ಮೆ , ಲೋಕೋಪಯೋಗಿ ಇಲಾಖೆ, ಹೆಸ್ಕಾಂ, ಶಾಲಾ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ, ಫಲಾನುಭವಿಗಳ ಆಯ್ಕೆ ಹಾಗೂ ಕಾರ್ಯಕ್ರಮ ಅನುಷ್ಠಾನವನ್ನು ಕಾಲಮಿತಿಯೊಳಗೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ಅಕ್ಷಯ್ ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ, ಉಪ ವಿಭಾಗಾಧಿಕಾರಿಗಳಾದ ಚೆನ್ನಪ್ಪ ಹಾಗೂ ಮಹ್ಮದ ಖಿಜರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಮೇಶಪ್ಪ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ವಿವಿಧ ತಾಲೂಕುಗಳ ತಹಸೀಲ್ದಾರ್‌ಗಳು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))