ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
2025ರ ಜ. 15ರಂದು ನಡೆಯುವ ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಲಕ್ಷಾಂತರ ಭಕ್ತರು ಬರುವುದರಿಂದ ಟ್ರಾಫಿಕ್ ಸಮಸ್ಯೆಗಳಾಗದಂತೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಇತರೆ ಮುಂಜಾಗ್ರತೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚನೆ ನೀಡಿದರು.ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳಿಗೆ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ವರ್ಷದಂತೆ ಈ ವರ್ಷವು ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಜನರಿಗೆ ಯಾವುದೇ ಸಮಸ್ಯೆಗಳಾದಲ್ಲಿ ತಕ್ಷಣ ಸೇವೆ ನೀಡಲು ಆರೋಗ್ಯ ಇಲಾಖೆಯ ತಂಡ ತಯಾರಿಯಲ್ಲಿ ಇರಬೇಕು. ಅದರಲ್ಲಿ ನುರಿತ ವೈದ್ಯರು ಇರುವಂತೆ ನೋಡಿಕೊಳ್ಳಬೇಕು. ಸ್ವಚ್ಛತೆಗಾಗಿ ಹೆಚ್ಚಿನ ಪೌರ ಕಾರ್ಮಿಕರ ನಿಯೋಜನೆ ಮಾಡಬೇಕು ಮತ್ತು ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಗಳಾಗದಂತೆ ಮುಂಜಾಗ್ರತೆಯಾಗಿ ಎರಡು ಕುಡಿಯುವ ನೀರಿನ ಹೆಚ್ಚುವರಿ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಬೇಕು. ಕೆಲವು ಕಡೆ ಓಪನ್ ವೈರಿಂಗ್ ಇರುತ್ತವೆ. ಹಾಗಾಗಿ ಜೆಸ್ಕಾಂನವರು ಎಲೆಕ್ಟ್ರಿಕಲ್ ಫಿಟ್ನೆಸ್ ಕುರಿತು ಪರಿಶೀಲನೆ ಮಾಡಬೇಕು. ಎರಡು ಅಗ್ನಿಶಾಮಕ ದಳದ ವಾಹನಗಳನ್ನು ತಯಾರಿಯಲ್ಲಿ ಇಡಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಮಾತನಾಡಿ, ಟ್ರಾಫಿಕ್ ಸಮಸ್ಯೆಗಳಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಿದ ಮಾಹಿತಿಯನ್ನು ಮುಂಚಿತವಾಗಿ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ತಿಳಿಸುವ ಕೆಲಸ ನಮ್ಮ ಇಲಾಖೆಯ ಅಧಿಕಾರಿಗಳು ಮಾಡಬೇಕು. ಅಲ್ಲದೆ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಜಾತ್ರೆಯ ದಿನದಂದು ಅಂದಾಜು 8ರಿಂದ 10 ಲಕ್ಷ್ಯ ಜನರು ಸೇರುವುದರಿಂದ ಸೂಕ್ತ ಸಾರಿಗೆ ಜೊತೆಗೆ ಎಲ್ಲಾ ಕಡೆ ಲೈಟಿಂಗ್ ವ್ಯವಸ್ಥೆಯಾಗಬೇಕೆಂದು ಹೇಳಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಮಹೇಶ್ ಮಾಲಗಿತ್ತಿ. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ಕೊಪ್ಪಳ ತಹಸೀಲ್ದಾರ ವಿಠಲ್ ಚೌಗಲಾ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆರಕ್ಷಕ ನಿರೀಕ್ಷಕ ನಾಗರಾಜ ಆರ್., ನಿರ್ಮಿತಿ ಕೇಂದ್ರದ ಶಶಿಧರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ, ಗವಿಸಿದ್ದೇಶ್ವರ ಮಠದ ಭಕ್ತರಾದ ಬಸವರಾಜ ಬಳ್ಳೊಳಿ, ಶರಣು ಶೆಟ್ಟರ್ ಸೇರಿದಂತೆ ಲೋಕೋಪಯೋಗಿ ಇಲಾಖೆ, ಸಾರಿಗೆ, ಜೆಸ್ಕಾಂ, ನಗರಸಭೆ ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.