ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ

| Published : Feb 16 2024, 01:47 AM IST

ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ಮಳೆಯ ಕೊರತೆಯಿಂದ ಬ್ಯಾರೇಜ್‌ನಲ್ಲಿ ನೀರಿನ ಪ್ರಮಾಣ ಸಾಕಷ್ಟು ಕಡಿಮೆ ಇದೆ. ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಆಗಲಾರದಂತೆ ಈಗಾಗಲೇ ನಮ್ಮ ಅಧಿಕಾರಿಗಳ ತಂಡ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ತಾಲೂಕಿನ ಭೀಮಾ ಸೊನ್ನ ಬ್ಯಾರೇಜ್‌ನಲ್ಲಿ ನೀರಿನ ಕೊರತೆಯಿದ್ದು, ನದಿಯ ಅಕ್ಕ ಪಕ್ಕದಲ್ಲಿರುವ ರೈತರು ಅಧಿಕಾರಿಗಳಿಗೆ ಸಹಕಾರ ನೀಡುವ ಮೂಲಕ ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆಯಾಗಲಾರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಹೇಳಿದರು.

ಅವರು ತಾಲೂಕಿನ ಭೀಮಾ ಸೊನ್ನ ಬ್ಯಾರೇಜ್‌ಗೆ ಭೇಟಿ ನೀಡಿ ನೀರಿನ ಪ್ರಮಾಣ ಪರಿಶೀಲನೆ ನಡೆಸಿ ಮಾತನಾಡಿ, ಈ ಬಾರಿ ಮಳೆಯ ಕೊರತೆಯಿಂದ ಬ್ಯಾರೇಜ್‌ನಲ್ಲಿ ನೀರಿನ ಪ್ರಮಾಣ ಸಾಕಷ್ಟು ಕಡಿಮೆ ಇದೆ. ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆ ಆಗಲಾರದಂತೆ ಈಗಾಗಲೇ ನಮ್ಮ ಅಧಿಕಾರಿಗಳ ತಂಡ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ.

ಹಳ್ಳಿಗಳಲ್ಲಿ ನೀರಿನ ಕೊರತೆಯಾದರೆ ರೈತರಿಂದ ನೀರು ಖರೀದಿಸಿ ಟ್ಯಾಂಕರ್ ಮೂಲಕ, ನೀರು ಪೂರೈಸಲಾಗುವುದು. ವಿವಿಧ ಯೋಜನೆಗಳಲ್ಲಿ ಕೊಳವೆ ಬಾವಿ ಸಹ ಕೊರೆಯಲಾಗುವುದು ಎಂದು ಹೇಳಿದರು.

ಕರ್ನಾಟಕ ಭೀಮಾ ಏತ ನೀರಾವರಿ ನಿಗಮ ನಿಯಮಿತ ಕಾರ್ಯಪಾಲಕ ಅಭಿಯಂತರ ಸಂತೋಷಕುಮಾರ ಸಜ್ಜನ್ ಮಾಹಿತಿ ನೀಡಿ, ಈಗಾಗಲೇ ಸೊನ್ನ ಬ್ಯಾರೇಜ್ ನಲ್ಲಿ 0.718 ಟಿಎಂಸಿ ನೀರು ಸಂಗ್ರಹವಿದೆ. ಅಫಜಲ್ಪುರ ಪಟ್ಟಣಕ್ಕೆ ಕುಡಿವ ನೀರಿನ ಸಲುವಾಗಿ ಪ್ರತಿ ತಿಂಗಳಿಗೊಮ್ಮೆ 0.015 ಟಿಎಂಸಿ ನೀರು ಬಿಡಲಾಗುತ್ತಿದೆ. ಕಳೆದ ವರ್ಷ ಫೆಬ್ರುವರಿಯಲ್ಲಿ 2.25 ಟಿಎಂಸಿ ನೀರು ಸಂಗ್ರಹವಿತ್ತು. ಈಗ ನೋಡಿದರೆ ನೀರಿನ ಪ್ರಮಾಣ ಸಾಕಷ್ಟು ಕಡಿಮೆ ಇರುವುದರಿಂದ ಇನ್ನೂ ಎರಡು ತಿಂಗಳು ಹೋಗಬಹುದು ಎಂದು ಹೇಳಿದರು.

ಡಿಜಿಟಲ್ ಗ್ರಂಥಾಲಯಗಳಿಗೆ ಭೇಟಿ:

ಭಂಕಲಗಾ, ಉಡಚಾಣ, ಕರಜಗಿ, ಮಾಶಾಳ ಗ್ರಾಮದ ಡಿಜಿಟಲ್ ಗ್ರಂಥಾಲಯಗಳಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ ನೀಡಿ, ಅಲ್ಲಿನ ವಾತಾವರಣ ಬಗ್ಗೆ ತಿಳಿದುಕೊಂಡು ದಿನನಿತ್ಯ ಎಷ್ಟು ಜನ ಗ್ರಂಥಾಲಯಕ್ಕೆ ಭೇಟಿಕೊಡುತ್ತಾರೆ ಎಂದು ತಿಳಿದುಕೊಂಡು, ಓದುಗರಿಗೆ ಅನುಕೂಲವಾಗುವಂತೆ ಹೆಚ್ಚಿನ ಪುಸ್ತಕಗಳು, ದಿನಪತ್ರಿಕೆಗಳು ತೆಗೆದುಕೊಂಡು ಬಂದು ಓದುಗರಿಗೆ ಯಾವುದೇ ಸಮಸ್ಯೆ ಆಗಲಾರದಂತೆ ನೋಡಿಕೊಳ್ಳಿ. ಅಲ್ಲದೇ ತಾಪಂ ಪ್ರಭಾರಿ ಕಾರ್ಯನಿರ್ವಾಹಕ ಐಎಎಸ್ ಅಧಿಕಾರಿ ಗಜಾನನ ಬಾಳೆ ಜಾರಿಗೆ ತಂದಿರುವ "ನನ್ನ ಜನ ನನ್ನ ಋಣ "ಯೋಜನೆ ಮಾದರಿಯಾಗಿದೆ ಎಂದರು.

ಶಿಶು ಪಾಲನಾ ಕೇಂದ್ರಕ್ಕೆ ಭೇಟಿ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಬಂಕಲಗಾ ಶಿಶು ಪಾಲನಾ ಕೇಂದ್ರಕ್ಕೆ ಭೇಟಿ, ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಅಲ್ಲದೇ ಮಕ್ಕಳಿಗೆ ನಿಮ್ಮ ಮಕ್ಕಳಂತೆ ಪೋಷಿಸುವ ಮೂಲಕ ಆಟದ ಜೊತೆಗೆ ಮಕ್ಕಳ ಬುದ್ಧಿಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಒಳ್ಳೆಯ ನೃತ್ಯಗಳನ್ನು ಮಕ್ಕಳಿಂದ ಮಾಡಿಸಿ ಎಂದು ತಿಳಿಸಿ ಗ್ರಾಮಸ್ಥರ ಕೆಲವು ಬೇಡಿಕೆಗಳ ಮನವಿ ಪತ್ರಗಳನ್ನು ಸ್ವೀಕರಿಸಿದರು.

ಜಿಲ್ಲಾಧಿಕಾರಿ ಕಂಡು ಕಕ್ಕಾಬಿಕ್ಕಿಯಾಗಿ ಓಡಿದ ಶಿಕ್ಷಕರು: ಅಫಜಲ್ಪುರ ತಾಲೂಕಿನ ಮಾಶಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ದಿಡೀರ್ ಭೇಟಿ ನೀಡಿದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯ ಗುರುಗಳ ಕೋಣೆಯಲ್ಲಿದ್ದ ಕೆಲ ಶಿಕ್ಷಕರು ಕಕ್ಕಾಬಿಕ್ಕಿಯಾಗಿ ತಮ್ಮ ಶಾಲಾ ಕೊಠಡಿಗೆ ಓಡಿ ಹೋಗಿರುವ ಪ್ರಸಂಗ ಜರುಗಿತು. ಅಷ್ಟರಲ್ಲೇ ಜಿಲ್ಲಾಧಿಕಾರಿ ಶಾಲಾ ಆವರಣದಲ್ಲಿ ಬಂದಿದ್ದಾಗ ಶಾಲಾ ಆವರಣದಲ್ಲಿ ಹಂದಿಗಳು ಓಡಾಡುತ್ತಿದ್ದನ್ನು ಕಂಡು ಶಾಲಾ ಆವರಣದಲ್ಲಿ ಈ ರೀತಿ ಹಂದಿಗಳು ಓಡಾಡುತ್ತಿರುವಾಗ ನೀವುಗಳು ಏನು ಮಾಡುತ್ತಿದ್ದೀರಿ ಎಂದು ಮುಖ್ಯ ಗುರುಗಳಿಗೆ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಗಜಾನನ ಬಾಳೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ, ತಹಸೀಲ್ದಾರ ಸಂಜೀವಕುಮಾರ ದಾಸರ, ಬಾಬುರಾವ ಜ್ಯೋತಿ, ವಿಜಯ ಮಹಾಂತೇಶ ಹೂಗಾರ, ಮಹೆಬೂಬ ಅಲಿ, ರಮೇಶ್ ಪಾಟೀಲ ಸೇರಿದಂತೆ ಇತರರಿದ್ದರು.