ಬೇಸಿಗೆಯಲ್ಲಿ ಮಾರ್ಚ, ಏಪ್ರಿಲ್ ಹಾಗೂ ಮೇ ತಿಂಗಳವರೆಗೆ ತಾಲೂಕಿನ ಯಾವುದೇ ಗ್ರಾಮ,ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಇಂಡಿ
ಬೇಸಿಗೆಯಲ್ಲಿ ಮಾರ್ಚ, ಏಪ್ರಿಲ್ ಹಾಗೂ ಮೇ ತಿಂಗಳವರೆಗೆ ತಾಲೂಕಿನ ಯಾವುದೇ ಗ್ರಾಮ,ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕ ಯಶವಂತರಾಯಗೌಡ ಪಾಟೀಲ ಸೂಚನೆ ನೀಡಿದರು.ನಗರದ ತಾಪಂ ಕಚೇರಿ ಸಭಾಭವನದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕರೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು. ಲಭ್ಯವಿರುವ ನೀರನ್ನು ಸದ್ಬಳಕೆ ಮಾಡಿಕೊಂಡು ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೀರನ್ನು ಕಾಯ್ದಿಟ್ಟುಕೊಳ್ಳಲು ತಿಳಿಸಿ, ಮಹಾರಾಷ್ಟ್ರದಿಂದ ಭೀಮಾನದಿಗೆ ನೀರು ಹರಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆಯಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಭೀಮಾನದಿಯಲ್ಲಿ ಸದ್ಯ ನೀರಿನ ಪ್ರಮಾಣ ಎಷ್ಟು, ಈ ನೀರು ಎಷ್ಟು ದಿನಗಳ ವರೆಗೆ ಕುಡಿಯುವ ನೀರಿಗೆ ಅನುಕೂಲವಾಗುತ್ತದೆಂದು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಮಹಾರಾಷ್ಟ್ರದಿಂದ ನೀರು ಬಿಡದೇ ಇದ್ದರೆ ಕುಡಿಯುವ ನೀರು ಹಾಗೂ ಕಬ್ಬು ಬೆಳೆಗಾರರಗೆ ತೊಂದರೆಯಾಗುತ್ತದೆ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆ, ಕೆರೆ ತುಂಬಿಸುವ ಸೇರಿದಂತೆ ವಿವಿಧ ಯೋಜನೆಗಳು ಇದ್ದು, ಯೋಜನೆಗಳಿಗೆ ನೀರಿನ ಕೊರತೆಯಾದರೇ ಯೋಜನೆಗಳು ಹೇಗೆ ಉಪಯೋಗವಾಗುತ್ತವೆ ಎಂದು ಪ್ರಶ್ನಿಸಿದರು.ಕಳೆದ ವರ್ಷದಲ್ಲಿ ಅಂಜುಟಗಿ, ಕೊಳುರಗಿ, ಝಳಕಿ, ಹಡಲಸಂಗ್, ಬಸನಾಳ, ಚವಡಿಹಾಳ, ಚೊರಗಿ , ನಿಂಬಾಳ ಕೆಡಿ, ಚಿಕ್ಕ ಬೆವನೂರ, ತಡವಲಗ, ಸಾಲೋಟಗಿ ಇನ್ನೂ ಕೆಲವು ಗ್ರಾಮ ಪಂಚಾಯತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಿದ್ದು, ಈ ಬಾರಿ ಯಾವುದೇ ಸಮಸ್ಯೆ ಆಗದಂತೆ ಮುಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದರು.ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯಾವುದೇ ಸಮಸ್ಯೆ ಬಾರದಂತೆ ಖುದ್ದಾಗಿ ಪರಿಶೀಲನೆ ನಡೆಸಬೇಕು. ಎಲ್ಲ ಬೋರವೆಲ್‌ಗಳ ಮಾಹಿತಿ ಕ್ರೋಢೀಕರಿಸಬೇಕು. ಚಾಲ್ತಿಯಲ್ಲಿರುವ ಬೋರವೆಲ್‌ಗಳು ಪರಿಶೀಲನೆ ಮಾಡಬೇಕು. ದುರಸ್ತಿ ಅವಶ್ಯಕತೆವಿರುವ ಬೋರವೆಲ್‌ಗಳ ದುರಸ್ತಿಗೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.ಕೆಬಿಜೆಎನ್‌ಎಲ್ ಇಇ ಮನೋಜಕುಮಾರ ಗಡಬಳ್ಳಿ ಅವರು, ಕುಡಿಯುವ ನೀರಿಗಾಗಿ ಮಾತ್ರ ಕಾಲುವೆಯ ನೀರು ಉಪಯೋಗಿಸಿಕೊಂಡರೇ ಅನುಕೂಲವಾಗುತ್ತದೆ. ವಾರಾಬಂದಿ ಪ್ರಕಾರ ಸಂಗೋಗಿ, ಹೊರ್ತಿ, ಹಂಜಗಿ, ಲೋಣಿ ಕೆಡಿ ಕೆರೆಗಳಿಗೆ ಮಾರ್ಚ್‌ರವರೆಗೆ ನೀರಿನ ಸಮಸ್ಯೆ ಆಗುವುದಿಲ್ಲ ಎಂದು ತಿಳಿಸಿದರು.ಜಲಧಾರೆ ಯೋಜನೆ ಬೇಸಿಗೆವರೆಗೆ ಪೂರ್ಣಗೊಳ್ಳಲಿದೆಯೇ ಎಂದು ಶಾಸಕರು ಪ್ರಶ್ನಿಸಿದರು. ಮುಂದಿನ ವರ್ಷದ ಬೇಸಿಗೆಯವರೆಗೆ ಜಲಧಾರೆ ಯೋಜನೆ ಕಾಮಗಾರಿ ಪೂರ್ಣಗೊಳ್ಳಲಿದೆಂದು ಅಧಿಕಾರಿಗಳು ತಿಳಿಸಿದರು. ಸದ್ಯ ಬಿಡುತ್ತಿರುವ ನೀರಿನ ಜತೆಗೆ 1 ಟಿಎಂಸಿ ನೀರು ಹೆಚ್ಚುವರಿಯಾಗಿ ಬಿಟ್ಟರೆ ಅನುಕೂಲವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಆನಂದ.ಕೆ ಮಾತನಾಡಿ, ಬೇಸಿಗೆಯಲ್ಲಿ ಯಾವುದೇ ನೀರಿನ ಅಭಾವವಾಗದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ನೀರಿನ ಸಮಸ್ಯೆ ಉದ್ಭವಿಸಬಹುದಾದ ಸ್ಥಳಗಳ ಕುರಿತು ಮುಂಚಿತವಾಗಿ ತಿಳಿದುಕೊಂಡು ಮಾಹಿತಿ ಸಲ್ಲಿಸಬೇಕು. ನಗರ ನೀರು ಸರಬರಾಜಿಗೆ ಸಂಬಂಧಿಸಿದ ಅಗತ್ಯ ಮುಜಾಗೃತಾ ಕ್ರಮವಹಿಸಬೇಕು. ಗ್ರಾಮ ಪಂಚಾಯತಿ ಹಂತದಲ್ಲಿಯೂ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಏನಾದರೂ ಸಮಸ್ಯೆ ಕಂಡು ಬಂದರೇ ನನ್ನ ಗಮನಕ್ಕೆ ತರಬೇಕು ಎಂದು ಸೂಚಿಸಿದರು.ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ತಹಸೀಲ್ದಾರ್ ಬಿ.ಎಸ್ ಕಡಕಭಾವಿ, ತಾಪಂ ಇಒ ಭೀಮಾಶಂಕರ ಕನ್ನೂರ, ಕೆಬಿಜೆಎನ್‌ಎಲ್ ಇಇ ಮನೋಜಕುಮಾರ ಗಡಬಳ್ಳಿ, ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ, ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ, ಯೋಜನಾಧಿಕಾರಿ ನಂದೀಪ ರಾಠೋಡ, ಎಇಇ ಎಸ್.ಆರ್.ಮೆಂಡೆಗಾರ, ಶಿವಾಜಿ ಬನಸೋಡೆ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಒ, ಆಡಳಿತಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.