ಕೋವಿಡ್ ನಿಯಂತ್ರಣಕ್ಕಾಗಿ ಮುನ್ನೆಚ್ಚರಿಕೆ ವಹಿಸಿ: ಪ್ರಭು ಚವ್ಹಾಣ್‌

| Published : Dec 24 2023, 01:46 AM IST

ಸಾರಾಂಶ

ಇತ್ತೀಚೆಗೆ ಕೋವಿಡ್‌ ಉಪಟಳ ಹೆಚ್ಚಾಗುತ್ತಿದ್ದು, ಕೋವಿಡ್‌ ನಿಯಂತ್ರಣಕ್ಕೆ ಕ್ರಮಕೈಗೊಳ್ಳಿ.

ಬೀದರ್‌: ನೆರೆ ರಾಜ್ಯಗಳಲ್ಲಿ ಕೋವಿಡ್‌ ರೂಪಾಂತರಿ ಜೆಎನ್‌ 1 ಪ್ರಕರಣಗಳು ಕಾಣಿಸಿರುವುದರಿಂದ ಗಡಿ ಭಾಗದಲ್ಲಿರುವ ಔರಾದ್‌ ಮತ್ತು ಕಮಲ ನಗರ ತಾಲೂಕಿನಲ್ಲಿ ರೋಗ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಮಾಜಿ ಸಚಿವರು ಹಾಗೂ ಶಾಸಕ ಪ್ರಭು ಚವ್ಹಾಣ್‌ ಸೂಚಿಸಿದರು.

ಔರಾದ್‌ (ಬಿ) ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್‌ ನಿಯಂತ್ರಣ ಕುರಿತಾದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

ಬೆಂಗಳೂರಿನಲ್ಲಿಯೂ ಪ್ರಕರಣಗಳು ಕಾಣಿಸಿವೆ. ಔರಾದ್‌ ಕ್ಷೇತ್ರಕ್ಕೆ ತೆಲಂಗಾಣಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿಗಳು ಹೊಂದಿರುವುದರಿಂದ ರೋಗ ವ್ಯಾಪಿಸುವ ಸಾಧ್ಯತೆಗಳಿರುತ್ತವೆ ಹಾಗಾಗಿ ಸಾಕಷ್ಟು ಮುನ್ನೆಚ್ಚರಿಕೆವಹಿಸುವ ಅಗತ್ಯವಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾದ ಕೋವಿಡ್‌ ತಪಾಸಣೆ ಕೇಂದ್ರಗಳನ್ನು ತೆರೆಯಬೇಕು ಎಂದು ಸೂಚಿಸಿದರು.

ರೋಗ ಲಕ್ಷಣಗಳಿದ್ದವರು ಸುಲಭವಾಗಿ ಸ್ವಯಂ ಪ್ರೇರಣೆಯಿಂದ ತಪಾಸಣೆಗೆ ಒಳಪಡುವ ವಾತಾವರಣ ನಿರ್ಮಾಣವಾಗಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೋವಿಡ್‌ ವಾರ್ಡ್‌ಗಳನ್ನು ತೆರೆದು ವೆಂಟಿಲೇಟರ್‌, ಆಕ್ಸಿಜನ್‌ ಸೇರಿದಂತೆ ಅಗತ್ಯ ಔಷಧಗಳನ್ನು ಲಭ್ಯವಿರುವಂತೆ ನೋಡಿಕೊಳ್ಳಬೇಕೆಂದು ಸೂಚಿಸಿದರು.

ಈ ಹಿಂದೆ ಎಲ್ಲರೂ ಕೋವಿಡ್‌ ಲಸಿಕೆಗಳನ್ನು ಪಡೆದಿರುವುದರಿಂದ ರೋಗ ತೀವ್ರವಾಗಿ ಹರಡುವ ಸಾಧ್ಯತೆ ಕಡಿಮೆಯಿರುತ್ತಿತ್ತು ಆದರೂ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಆರೋಗ್ಯ ಇಲಾಖೆಯಿಂದ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು. ಎಲ್ಲ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಭೆ ನಡೆಸಿ ರೋಗ ಹರಡದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ನಿರ್ದೇಶನ ನೀಡಬೇಕು. ಪ್ರತಿ ಗ್ರಾಮಗಳಲ್ಲಿಯೂ ಜನಜಾಗೃತಿ ಮೂಡಿಸಬೇಕು. ಮಾಸ್ಕ್‌ ಧರಿಸುವುದು ಮತ್ತು ಸ್ಯಾನಿಟೈಸರ್‌ ಬಳಕೆಯ ಕುರಿತು ಜನರಿಗೆ ಮನವರಿಕೆ ಮಾಡಿಕೊಡಬೇಕೆಂದು ತಿಳಿಸಿದರು.

ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ ಅವರು ಮಾತನಾಡಿ, ತಾಲೂಕಿನಲ್ಲಿರುವ ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 60 ವರ್ಷ ಮಲ್ಪಟ್ಟವರು, ಗರ್ಭಿಣಿ ಮಹಿಳೆಯರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗೆ ಬರುವವರಲ್ಲಿ ರೋಗ ಲಕ್ಷಣಗಳಿದ್ದರೆ ತಕ್ಷಣ ತಪಾಸಣೆ ನಡೆಸಲಾಗುತ್ತಿದೆ. ರೋಗ ನಿಯಂತ್ರಣಕ್ಕಾಗಿ ಇಲಾಖೆಯಿಂದ ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಔರಾದ್‌ ತಹಸೀಲ್ದಾರ ಮಲಶೆಟ್ಟಿ ಚಿದ್ರೆ, ಕಮಲನಗರ ತಹಸೀಲ್ದಾರ ಅಮಿತ ಕುಲಕರ್ಣಿ, ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಸ್ವಾಮಿದಾಸ, ವೈದ್ಯಾಧಿಕಾರಿಗಳಾದ ಡಾ. ರಮಣ ಪೋಕಲವಾರ, ಡಾ.ನಿತಿನ ಬಿರಾದಾರ, ಡಾ.ಶ್ರೀಮಂತ, ಡಾ.ಅಮಿತ ಪಾಲ್‌, ಡಾ.ಅನೀಲ ಕುಮಾರ ರಾಯಪಳ್ಳಿ, ಡಾ.ಫೈಜಲ್‌, ಡಾ.ಪವನ, ಡಾ.ಅಬ್ದುಲ್‌ ವಾಜಿದ, ಇಲಾಖೆಯ ಅಮರನಾಥ ಜ್ಯಾಂತೆ ಸೇರಿದಂತೆ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.