ಸಾರಾಂಶ
ತೀರ್ಥಹಳ್ಳಿ: ತಾಲೂಕಿನಲ್ಲಿ ಈಗಾಗಲೇ ಆರು ಕೆಎಫ್‍ಡಿ ಪ್ರಕರಣ ದಾಖಲಾಗಿದ್ದು, ಈವರೆಗೆ ಈ ಸೋಂಕು ಕಾಣಿಸಿಕೊಳ್ಳದಿರುವ ಭಾಗಗಳಲ್ಲಿ ಈ ಬಾರಿ ಸೋಂಕು ಪಾಸಿಟಿವ್ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಮಳೆಗಾಲ ಆರಂಭವಾಗುವವರೆಗೂ ಇದರ ಭೀಕರತೆಯ ಅಪಾಯ ಇದ್ದು ಇದರ ನಿಯಂತ್ರಣಕ್ಕೆ ಸರ್ಕಾರದ ಎಲ್ಲಾ ಇಲಾಖೆಗಳು ಸಮರೋಪಾದಿಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಕೆಎಫ್‍ಡಿ ನಿಯಂತ್ರಣದ ಸಲುವಾಗಿ ಸೋಮವಾರ ಪಟ್ಟಣದ ಗ್ರಾಮೀಣಸೌಧದಲ್ಲಿ ನಡೆದ ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ರಾಜಧಾನಿಯಲ್ಲಿ ಕುಳಿತವರಿಗೆ ಮಲೆನಾಡಿನ ಜನರನ್ನು ಕಾಡುತ್ತಿರುವ ಮಂಗನ ಕಾಯಿಲೆ, ಡೆಂಗ್ಯೂ ಮುಂತಾದ ಕಾಯಿಲೆಗಳ ಬಗ್ಗೆ ಪೂರ್ಣ ಅರಿವಿರೋಲ್ಲ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಅವರ ಗಮನಕ್ಕೆ ತರುವ ಮೂಲಕ ಎಲ್ಲ ಸೌಲಭ್ಯವನ್ನೂ ಒದಗಿಸಬೇಕು. ಇಲ್ಲವಾದರೆ ನಾನು ನಿಮ್ಮನ್ನೇ ಕೇಳೋದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಮಂಗನ ಕಾಯಿಲೆಯಿಂದಾಗಿ ಈ ವರೆಗೆ ತಾಲೂಕಿನಲ್ಲಿ ಹಲವಾರು ಮಂದಿ ಜೀವ ತೆತ್ತಿದ್ದಾರೆ. ಈ ಬಾರಿ ಮುಂಜಾಗ್ರತೆ ಕ್ರಮವಾಗಿ ಲಸಿಕೆ ನೀಡದಿರುವುದು ಈ ರೋಗ ಉಲ್ಬಣಗೊಳ್ಳುವ ಸಾಧ್ಯತೆಯೂ ಇದೆ. ಡೆಂಗ್ಯೂನಿಂದ ಓರ್ವ ವ್ಯಕ್ತಿಯ ಸಾವು ಕೂಡಾ ಈಚೆಗೆ ಸಂಭವಿಸಿದೆ. ಯಾವುದೇ ಸಬೂಬು ಹೇಳದೇ ಸರ್ಕಾರ ತಾಲೂಕಿಗೆ ಅಗತ್ಯವಿರುವ ಸವಲತ್ತನ್ನು ಒದಗಿಸಬೇಕು ಎಂದೂ ದೂರವಾಣಿ ಮೂಲಕ ಆರೋಗ್ಯ ಇಲಾಖೆ ಕಾರ್ಯದರ್ಶಿಯವರೊಂದಿಗೆ ಮಾತನಾಡಿ ತಿಳಿಸಿದರು.ಇಲ್ಲಿನ ಜೆಸಿ ಆಸ್ಪತ್ರೆಯಲ್ಲಿರುವ ಕೆಎಫ್‍ಡಿ ವಿಶೇಷ ವಾರ್ಡಿಗೆ ಪ್ರತ್ಯೇಕ ಸಿಬ್ಬಂದಿಗಳ ಅಗತ್ಯವಿದೆ. ಕೆಎಫ್‍ಡಿಯ ನಾಲ್ಕು ಪ್ರಕರಣಗಳು ಬಂದಿರುವ ಕಟಗಾರು ಸಮುದಾಯ ಕೇಂದ್ರದಲ್ಲೇ ಖಾಯಂ ವೈದ್ಯರಿಲ್ಲಾ. ಕುಗ್ರಾಮಗಳಿರುವ ತಾಲೂಕಿನ ಆಗುಂಬೆ ಭಾಗಕ್ಕೆ ಒಂದು ಆಂಬುಲೆನ್ಸ್ ಅಗತ್ಯವಿದೆ. ಮಳೆಗಾಲ ಆರಂಭವಾಗುವವರೆಗೂ ಈ ಸೋಂಕಿನ ಅಪಾಯ ಇದ್ದು ಇದರ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಬೇಕು. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು.ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಕಳುಹಿಸುವ ಎಲ್ಲಾ ಕೆಎಫ್‍ಡಿ ರೋಗಿಗಳಿಗೆ ಉಚಿತ ಚಿಕಿತ್ಸೆ ದೊರೆಯುವಂತಾಗಬೇಕು. ಇದರಲ್ಲಿ ಬಿಪಿಎಲ್ ಎಪಿಎಲ್ ತಾರತಮ್ಯ ಮಾಡಕೂಡದು. ವೈದ್ಯಕೀಯ ಕಾಲೇಜನ್ನು ಹೊಂದಿರುವ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ಸ್ಪೆಷಲಿಸ್ಟ್ ವೈದ್ಯರುಗಳಿದ್ದರೂ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಕಡಿಮೆಯಾಗದಿರುವುದು ಆಶ್ಚರ್ಯದ ಸಂಗತಿ ಎಂದು ಹೇಳಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಟರಾಜ್ ಮಾತನಾಡಿ, ಬಹಳ ಮಂದಿ ಖಾಸಗಿಯಾಗಿ ಚಿಕಿತ್ಸೆ ಪಡೆದು ರೋಗ ಉಲ್ಬಣಗೊಂಡ ನಂತರದಲ್ಲಿ ಕೊನೆ ಗಳಿಗೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವುದು ವಾಡಿಕೆಯಾಗಿದ್ದು, ಇದೇ ಸಮಸ್ಯೆಗೆ ಕಾರಣವಾಗಿದೆ. ಮದ್ಯವ್ಯಸನಿಗಳು, ಬಿಪಿ ಶುಗರ್ ಇರುವವರಲ್ಲಿ ಈ ಸೋಂಕು ಶೀಘ್ರವಾಗಿ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.ಸಭೆಯಲ್ಲಿ ತಹಸೀಲ್ದಾರ್ ಎಸ್.ರಂಜಿತ್, ತಾಪಂ ಇಓ ಎಂ.ಶೈಲಾ, ಜಿಲ್ಲೆಯ ಆರೋಗ್ಯ ಇಲಾಖೆಯ ವಿವಿಧ ವಿಭಾಗಗಳ ಅಧಿಕಾರಿಗಳಾದ ಡಾ.ಕಿರಣ್, ಡಾ.ಹರ್ಷವರ್ಧನ್, ಡಾ.ನಾಗರಾಜ ನಾಯ್ಕ್, ತಾಲೂಕು ವೈಧ್ಯಾಧಿಕಾರಿ ಡಾ.ಅನಿಕೇತನ್, ಜೆಸಿ ಆಸ್ಪತ್ರೆ ವೈಧ್ಯಾಧಿಕಾರಿ ಡಾ.ಗಣೇಶ್ ಭಟ್, ಪಶು ವೈಧ್ಯಾಧಿಕಾರಿ ಡಾ.ನಾಗರಾಜ್, ತೀರ್ಥಹಳ್ಳಿ, ಮಂಡಗದ್ದೆ, ಮೇಗರವಳ್ಳಿ ವಲಯ ಅರಣ್ಯಾಧಿಕಾರಿಗಳು, ಪಿಡಿಓಗಳು ಇತರರು ಇದ್ದರು.