ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಿ

| Published : Nov 22 2023, 01:00 AM IST

ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಸದ್ಯ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಇತ್ತೀಚೆಗೆ ಜಿಲ್ಲಾಧಿಕಾರಿಯವರು ನಡೆಸಿದ ಸಭೆಯಲ್ಲಿ ಪಿಡಿಒಗಳು ತಪ್ಪು ಮಾಹಿತಿ ನೀಡಿದ್ದಾರೆ. ಹಾಹಾಕಾರ ಎದ್ದ ನಂತರ ಕ್ರಮ ವಹಿಸುವ ಬದಲು ಮುಂಚಿತವಾಗಿ ಜಾಗೃತರಾಗಬೇಕು ಎಂದರು.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಯಾವ ಹಳ್ಳಿಗಳಿಂದಲೂ ದೂರು ಬರಬಾರದು. ಆ ರೀತಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಇಲ್ಲಿಯ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ತಾಕೀತು ಮಾಡಿದರು.

ಪಟ್ಟಣದ ತಾಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ವಿವಿಧ ಇಲಾಖೆಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸದ್ಯ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಇತ್ತೀಚೆಗೆ ಜಿಲ್ಲಾಧಿಕಾರಿಯವರು ನಡೆಸಿದ ಸಭೆಯಲ್ಲಿ ಪಿಡಿಒಗಳು ತಪ್ಪು ಮಾಹಿತಿ ನೀಡಿದ್ದಾರೆ. ಹಾಹಾಕಾರ ಎದ್ದ ನಂತರ ಕ್ರಮ ವಹಿಸುವ ಬದಲು ಮುಂಚಿತವಾಗಿ ಜಾಗೃತರಾಗಬೇಕು ಎಂದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಕಿರಣ್‌ ನಾಯ್ಕ ಮಾಹಿತಿ ನೀಡಿ, ತಾಲೂಕಿನ 104 ಹಳ್ಳಿಗಳಲ್ಲಿ ನೀರಿನ ಸಮಸ್ಯೆಯಾಗುವ ಲಕ್ಷಣಗಳು ಇದ್ದು, ಟಾಸ್ಕ್‌ಫೋರ್ಸ್‌ ಸಮಿತಿ ಮೂಲಕ ಜಿಲ್ಲಾಧಿಕಾರಿಯವರಿಗೆ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಕಳಿಸಿದ್ದೇವೆ ಎಂದು ಉತ್ತರಿಸಿದರು.

ಯು. ಕಲ್ಲಹಳ್ಳಿ,ಇಟ್ಟಿಗುಡಿ, ಪವನಪುರ, ವಡ್ಡಿನಹಳ್ಳಿ, ಎನ್‌. ಶೀರನಹಳ್ಳಿ ಹಾಗೂ ಚಿಗಟೇರಿ ಎಸ್ಸಿ ಕಾಲನಿಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಇದೆ ಎಂದರು.

ಶಾಸಕರು, ಡಿಸಿಯವರಿಗೆ ನೀರಿನ ಸಮಸ್ಯೆ ಕುರಿತು ತಪ್ಪು ಮಾಹಿತಿ ನೀಡಿದ್ದೀರಿ ಎಂದು ಸುದೀರ್ಘ ಸಮಯ ಅಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು. ಇನ್ನೊಂದು ಬಾರಿ ಎಲ್ಲ ಪಿಡಿಒಗಳ ಸಭೆ ಕರೆದು ನೀರಿನ ಸಮಸ್ಯೆ ನಿವಾರಣೆ ಕುರಿತು ಚರ್ಚಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ್‌ ಅವರಿಗೆ ಸೂಚಿಸಿದರು.

ಬೆಳೆವಿಮೆ ಪರಿಹಾರಕ್ಕಾಗಿ ಪರಿಶೀಲನೆ ಮಾಡುವಾಗ ರೈತರಿಗೆ ಮೋಸ ಮಾಡಲಾಗುತ್ತದೆ ಎಂಬ ದೂರಿದ್ದು, ಕಡಬಗೇರಿಯಲ್ಲಿ ಆ ರೀತಿ ಆಗಿದೆ. ಪರಿಶೀಲಿಸಿ ಎಂದು ಸಹಾಯಕ ಕೃಷಿ ನಿರ್ದೇಶಕ ಉಮೇಶ ಅವರಿಗೆ ಶಾಸಕಿ ಎಂ.ಪಿ. ಲತಾ ಸೂಚಿಸಿದರು.

ಉಪವಿಭಾಗಾಧಿಕಾರಿ, ತಹಸೀಲ್ದಾರ್‌ ಸಮ್ಮುಖದಲ್ಲಿ ಸಭೆ ನಡೆಸಿ ಬೆಳೆ ವಿಮೆ ತಾರತಮ್ಯದ ಕುರಿತು ಸರಿಪಡಿಸುತ್ತೇವೆ ಎಂದು ಕೃಷಿ ಎಡಿ ಉಮೇಶ ಉತ್ತರಿಸಿದರು.

ಹಲುವಾಗಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸರಿಯಾಗಿ ಔಷಧಿ ನೀಡುತ್ತಿಲ್ಲ. ಕೆಲವರು ಕುಡಿದು ಬಂದು ಗಲಾಟೆ ಮಾಡುತ್ತಾರೆ ಎಂಬ ಆರೋಪವಿದೆ, ಪರಿಶೀಲಿಸಿ ಎಂದು ತಾಲೂಕು ಆರೋಗ್ಯಾಧಿಕಾರಿ ಹಾಲಸ್ವಾಮಿಯವರಿಗೆ ಶಾಸಕರು ಸೂಚಿಸಿದರು.

ಪಟ್ಟಣದ ವಾಲ್ಮೀಕಿ ಭವನದ ಕಾಮಗಾರಿಯನ್ನು ಜನವರಿ ವೇಳೆಗೆ ಸಂಪೂರ್ಣಗೊಳಿಸಿ ಉದ್ಘಾಟನೆಯಾಗಬೇಕು ಎಂದು ಪಿಡಬ್ಲ್ಯುಡಿ ಎಇಇ ಪ್ರಕಾಶ ಪಾಟೀಲ್‌ ಅವರಿಗೆ ತಿಳಿಸಿದರು.

ಪಟ್ಟಣದಲ್ಲಿ ಟ್ರಾಫಿಕ್‌ ಸಮಸ್ಯೆ ಸುಧಾರಿಸಲು ಟ್ರಾಫಿಕ್‌ ಪೊಲೀಸ್‌ ಠಾಣೆ ಮಂಜೂರಾತಿಗೆ ಮನವಿ ಪತ್ರ ಹಾಗೂ ಜಾಗದ ಬಗ್ಗೆ ವಿವರ ಮಾಹಿತಿ ಕೊಡಿ ಎಂದು ಶಾಸಕರು ಪಿಎಸ್‌ಐ ಶಂಭುಲಿಂಗಹಿರೇಮಠ್‌ ಅವರಿಗೆ ಸೂಚಿಸಿದರು. ಇತ್ತೀಚೆಗೆ ನಡೆದ ಜನತಾ ದರ್ಶನದಲ್ಲಿ ಬಂದ ಅರ್ಜಿಗಳನ್ನು ಈವರೆಗೂ ವಿಲೇವಾರಿ ಮಾಡದಿರುವುದಕ್ಕೆ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಹಸೀಲ್ದಾರ್‌ ಬಿ.ವಿ. ಗಿರೀಶಬಾಬು, ಬಿಇಒ ಯು. ಬಸವರಾಜಪ್ಪ, ಪುರಸಭಾ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಬೆಸ್ಕಾಂ ಎಇಇಗಳಾದ ವಿರುಪಾಕ್ಷಪ್ಪ, ಆರಾದ್ಯ, ಆರ್‌ಎಫ್‌ಒಗಳಾದ ಮಲ್ಲಪ್ಪ, ದೇವರಾಜ, ಅಕ್ಷರ ದಾಸೋಹದ ಎಡಿ ಜಯರಾಜ, ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ, ಎಇಇ ನಾಗಪ್ಪ, ಡಾ. ಶಂಕರನಾಯ್ಕ, ಪಿಎಸ್ಐ ಎಸ್‌.ಸಿ. ಹಿರೇಮಠ, ನರೇಗಾ ಎಡಿ ಸೋಮಶೇಖರ ಇತರರು ಇದ್ದರು.ಚಿತ್ರ

21ಎಚ್‌ ಆರ್‌ ಪಿ 1