ತಾಯಿ, ಶಿಶು ಮರಣ ತಡೆಗೆ ಮುಂಜಾಗ್ರತೆ ವಹಿಸಿ

| Published : Aug 31 2025, 01:08 AM IST

ತಾಯಿ, ಶಿಶು ಮರಣ ತಡೆಗೆ ಮುಂಜಾಗ್ರತೆ ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಹೆರಿಗೆ ಸಂದರ್ಭದಲ್ಲಿ ತಾಯಿ, ಮಗು ಮರಣ ಪ್ರಕರಣಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಪಂ ಆಡಳಿತಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಹೆರಿಗೆ ಸಂದರ್ಭದಲ್ಲಿ ತಾಯಿ, ಮಗು ಮರಣ ಪ್ರಕರಣಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಜಿಪಂ ಆಡಳಿತಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಶನಿವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಇತ್ತೀಚೆಗೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಸಮಯದಲ್ಲಿ ಸಂಭವಿಸಿದ ತಾಯಿ, ಮಗು ಸಾವಿನ ವರದಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಆಸ್ಪತ್ರೆಗಳಿಗೆ ಮಹಿಳೆಯರು ಹೆರಿಗೆಗೆ ದಾಖಲಾದಾಗ ತಾಯಿ ಮತ್ತು ಮಗುವನ್ನು ಜೀವಂತ ಉಳಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು. ಯಾವುದೇ ಸಂದರ್ಭದಲ್ಲಿ ವೈದ್ಯರು, ಶುಶ್ರೂಷಕರು ನಿರ್ಲಕ್ಷ್ಯ ವಹಿಸಬಾರದು. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಮರುಕಳಿಸಿದರೆ ಗಂಭೀರವಾಗಿ ಪರಿಗಣಿಸಲಾಗುವುದೆಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಅಪೌಷ್ಠಿಕತೆ ಹಾಗೂ ರಕ್ತಹೀನತೆ ಹೆರಿಗೆ ಸಮಯದಲ್ಲಿ ತಾಯಿ, ಮಗುವಿನ ಮರಣಕ್ಕೆ ಪ್ರಮುಖ ಕಾರಣವಾಗುತ್ತಿದ್ದು, ವೈದ್ಯರು ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಸಂಭವಿಸಿರುವ ತಾಯಿ, ಶಿಶು ಮರಣ ವರದಿಗಳನ್ನು ಪರಿಶೀಲಿಸಬೇಕು. ಪ್ರಕರಣಗಳು ಸಂಭವಿಸದಂತೆ ತಡೆಯುವ ನಿಟ್ಟಿನಲ್ಲಿ ಅರಿವು ಉಂಟುಮಾಡಲು ಆಶಾ ಕಾರ್ಯಕರ್ತೆಯರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಹೆರಿಗೆಗೆ ದಾಖಲಾಗುವವರ ಆಧಾರ್ ಕಾರ್ಡ್‌ನಲ್ಲಿರುವ ಜನ್ಮದಿನಾಂಕವನ್ನು ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ರಕ್ತಹೀನತೆ ತಡೆಗಟ್ಟಲು ಜಿಲ್ಲೆಯಾದ್ಯಂತ ವ್ಯಾಪಕ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಂಗನವಾಡಿಗಳ ಮೂಲಕ ಗರ್ಭಿಣಿಯರಿಗೆ ಅವಶ್ಯ ಪೌಷ್ಠಿಕ ಆಹಾರ ಒದಗಿಸಲಾಗುತ್ತಿದೆ. ಸೆಪ್ಟೆಂಬರ್‌ನಿಂದ ಪ್ರಾಣಸಖಿ ಕಾರ್ಯಕ್ರಮದಡಿ ತಾಯಿಯಾಗುವ ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ವಹಿಸಬೇಕಾದ ಆರೋಗ್ಯ ಮಾಹಿತಿ ನೀಡಲಾಗುತ್ತದೆ. ಮಕ್ಕಳನ್ನು ಪಡೆಯುವ ಮೊದಲೇ ರಕ್ತಹೀನತೆ ಸಮಸ್ಯೆ ನಿವಾರಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿನಿಲಯಗಳಲ್ಲಿ ಆಹಾರ ದಾಸ್ತಾನು ವ್ಯವಸ್ಥಿತವಾಗಿ ನಿರ್ವಹಿಸಬೇಕು. ಮಕ್ಕಳ ಹಾಜರಾತಿ ಕ್ರಮಬದ್ಧವಾಗಿರಬೇಕು. ಗುಣಮಟ್ಟದ ಆಹಾರ ನೀಡಬೇಕು. ನಿಲಯ ಪಾಲಕರು ಮಕ್ಕಳ ಉಸ್ತುವಾರಿ ಬಗ್ಗೆ ಸಂಪೂರ್ಣ ನಿಗಾ ವಹಿಸಬೇಕು. ಯಾವುದೇ ಅವ್ಯವಸ್ಥೆಗೆ ಅಸ್ಪದವಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಕಾಡಂಚಿನ ಪ್ರದೇಶಗಳು ಹಾಗೂ ಅರಣ್ಯದಲ್ಲಿ ವಾಸಿಸುವ ಅದಿವಾಸಿಗಳಿಗೆ ಮದ್ಯಪಾನ, ಇತರೆ ದುಶ್ಚಟಗಳಿಗೆ ಒಳಗಾಗದಂತೆ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ನೀಡಲಾಗುತ್ತಿರುವ ಪೌಷ್ಠಿಕ ಆಹಾರ ಕಿಟ್‌ಗಳು ಸಮರ್ಪಕವಾಗಿ ತಲುಪಬೇಕು. ಅಂಗನವಾಡಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಅಧಿಕಾರಿಗಳು ಮುಂದಾಗಬೇಕು. ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಶಾಶ್ವತ ಕಟ್ಟಡ ನಿರ್ಮಾಣಕ್ಕಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿವೇಶನ ಒದಗಿಸಬೇಕು. ಆಯಾ ತಾಲೂಕು ತಹಶೀಲ್ದಾರ್‌ಗಳೊಂದಿಗೆ ಸಮನ್ವಯ ಸಾಧಿಸಿ ನಿವೇಶನ ಪಡೆದುಕೊಳ್ಳಬೇಕು ಎಂದು ಉಸ್ತುವಾರಿ ಕಾರ್ಯದರ್ಶಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದಡಿ ನೀಡಲಾಗುವ ಬಾಳೆಹಣ್ಣನ್ನು ನೇರವಾಗಿ ರೈತರಿಂದಲೇ ಖರೀದಿಸುವ ವ್ಯವಸ್ಥೆಯಾಗಬೇಕು. ಹೈನುಗಾರಿಕೆ ಉತ್ತೇಜಿಸಿ ಹಾಲು ಉತ್ಪಾದನೆ ಹೆಚ್ಚಳ ಮಾಡುವುದರಿಂದ ಹೈನುಗಾರಿಕೆ ಅವಲಂಬಿತರಿಗೆ ಹೆಚ್ಚಿನ ಆದಾಯ ಬರಲಿದೆ. ರೇಷ್ಮೆ ಬೆಳೆಗಾರರನ್ನು ಪ್ರೋತ್ಸಾಹಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಲಭಿಸಬೇಕು. ಗ್ರಾಮೀಣ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿರಬೇಕು. ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಿರುವವರಿಗೆ ತ್ವರಿತವಾಗಿ ಸಾಲ ನೀಡುವ ಪ್ರಕ್ರಿಯೆಗೆ ಕಾರ್ಯಕ್ರಮ ರೂಪಿಸಬೇಕು ಎಂದರು.

ಇನ್ನುಳಿದಂತೆ ಕೃಷಿ, ತೋಟಗಾರಿಕೆ, ಕುಡಿಯುವ ನೀರು, ನರೇಗಾ, ಅಲ್ಪಸಂಖ್ಯಾತರ ಕಲ್ಯಾಣ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು. ಸರ್ಕಾರ ಜಾರಿಗೊಳಿಸಿರುವ ವಿವಿಧ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳ ಗುರಿ ಸಾಧನೆ, ಅನುದಾನ ಖರ್ಚು ಮಾಡುವುದಷ್ಟೇ ಅಧಿಕಾರಿಗಳ ಜವಾಬ್ದಾರಿಯಲ್ಲ. ಜಿಲ್ಲೆಯಲ್ಲಿ ಹೊಸ ಕಾರ್ಯಕ್ರಮಗಳನ್ನು ರೂಪಿಸಿ ಜನರ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾಗಿರುವಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಉಪಕಾರ್ಯದರ್ಶಿ ಶೃತಿ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಎಲ್ಲಾ ತಾಲೂಕುಗಳ ತಹಶೀಲ್ದಾರರು ಸಭೆಯಲ್ಲಿ ಉಪಸ್ಥಿತರಿದ್ದರು.