ಕುಡಿಯುವ ನೀರು ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ: ಶಾಂತನಗೌಡ ಸಲಹೆ

| Published : Mar 25 2024, 12:46 AM IST

ಕುಡಿಯುವ ನೀರು ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ: ಶಾಂತನಗೌಡ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ನೀರಿನ ಬರ ಆವರಿಸಿದ್ದು, ತಾಲೂಕಿನಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಹಿ, ಗ್ರಾಮಗಳಿಗೆ ಹಾಗೂ ಪಟ್ಟಣಕ್ಕೆ ನೀರು ಸರಬರಾಜು ಮಾಡಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ನ್ಯಾಮತಿಯಲ್ಲಿ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ, ನ್ಯಾಮತಿ

ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ನೀರಿನ ಬರ ಆವರಿಸಿದ್ದು, ತಾಲೂಕಿನಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಲು ಅಧಿಕಾರಿಗಳಿಗೆ ಶಾಸಕ ಡಿ.ಜಿ.ಶಾಂತನಗೌಡ ಸೂಚನೆ ನೀಡಿದರು.

ತಾಲೂಕಿನ ಗೋವಿನಕೋವಿ ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಪಟ್ಟಣಕ್ಕೆ ಪ್ರತ್ಯೇಕವಾಗಿ ನೀರು ಸರಬರಾಜು ಮಾಡುವ ₹40 ಕೋಟಿ ವೆಚ್ಚದ ಜಾಕ್‌ವೆಲ್‌ ಕಾಮಗಾರಿ ಸ್ಥಳ, ಅರೇಹಳ್ಳಿ ಗ್ರಾಮದ ನೀರಿನ ಶುದ್ಧೀಕರಣ ಘಟಕ ಹಾಗೂ ಪಂಪ್‌ಹೌಸ್‌ಗೆ ಭೇಟಿ ನೀಡಿ, ಪರಿಶೀಲನೆ ಬಳಿಕ ಮಾತನಾಡಿದರು.

ಈಗಾಗಲೇ ನ್ಯಾಮತಿ ಪಟ್ಟಣಕ್ಕೆ ಹಾಗೂ ಸುರಹೊನ್ನೆ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಸರಬರಾಜು ಆಗುತ್ತಿದೆ. ನದಿಯಲ್ಲಿ ನೀರಿನಮಟ್ಟ ಕಡಿಮೆಯಾಗುತ್ತಿದೆ. ಆದ್ದರಿಂದ ಕುಡಿಯುವ ನೀರಿಗೆ ಯಾವುದೇ ಕೊರತೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಿ, ಗ್ರಾಮಗಳಿಗೆ ಹಾಗೂ ಪಟ್ಟಣಕ್ಕೆ ನೀರು ಸರಬರಾಜು ಮಾಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೂ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಕಂಡುಬರಬಹುದಾದ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ, ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ನ್ಯಾಮತಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ದೃಷ್ಠಿಯಿಂದ ಪ್ರತ್ಯೇಕ ಪೈಪ್‌ಲೈನ್‌ ಕಾಮಗಾರಿಯು ಪ್ರಗತಿಯಲ್ಲಿದೆ. ನದಿಯಲ್ಲಿ ನೀರಿನ ಹರಿವು ಹಾಗೂ ಜಾಕ್‌ವೆಲ್‌ಗೆ ನೀರು ಸಿಗುವ ಹಾಗೆ ವ್ಯವಸ್ಥೆ ಮಾಡಲಾಗಿದೆ. ಇಂಟ್‌ಟ್ಯಾಂಕ್‌ವಾಲ್‌, ಪಂಪ್‌ಹೌಸ್‌ಗೆ 50 ಅಶ್ವಶಕ್ತಿಯ ಸಾಮರ್ಥ್ಯದ ಯಂತ್ರವನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ಸಹಾಯವಾಣಿ 08188 295542:

ನ್ಯಾಮತಿ ತಾಲೂಕಿನ ವ್ಯಾಪ್ತಿಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು 24*7 ಸಹಾಯವಾಣಿ ಕೇಂದ್ರವನ್ನು ನ್ಯಾಮತಿ ಪಟ್ಟಣದ ತಾಲೂಕು ಕಚೇರಿಯಲ್ಲಿ ತೆರೆಯಲಾಗಿದೆ. ತಾಲೂಕಿನ ಸಾರ್ವಜನಿಕರು ಸಹಾಯವಾಣಿ 08188- 295542 ಸಂಖ್ಯೆಗೆ ಕರೆ ಮಾಡಿ, ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು ಎಂದು ತಾಲೂಕು ಪಂಚಾಯಿತಿ ಇಒ ಡಿ.ಎಸ್‌.ಸುಮ ತಿಳಿಸಿದರು.

ನ್ಯಾಮತಿ ಪಟ್ಟಣದ ಕಾಂಗ್ರೆಸ್‌ ಅಧ್ಯಕ್ಷ ಗುಂಡೂರು ಲೋಕೇಶ್‌, ಮಧುಸೂದನ್‌ ಜೋಗದರ್‌, ವಾಲ್ಮೀಕಿ ಷಣ್ಮುಖಪ್ಪ, ರುದ್ರೇಶ್‌, ಕರಿಬಸಪ್ಪ, ಶಿವು ಮತ್ತಿತರರಿದ್ದರು.

- - - (-ಫೋಟೋ:)

ನ್ಯಾಮತಿ ತಾಲೂಕಿನಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಅವರು ಗೋವಿನಕೋವಿ ಬಳಿ ಜಾಕ್‌ವೆಲ್‌ ಕಾಮಗಾರಿ ಸ್ಥಳ, ಅರೇಹಳ್ಳಿ ನೀರಿನ ಶುದ್ಧೀಕರಣ ಘಟಕ, ಪಂಪ್‌ಹೌಸ್‌ಗೆ ಭೇಟಿ ನೀಡಿ, ಪರಿಶೀಲಿಸಿದರು.