ಸಾರಾಂಶ
ಬ್ಯಾಡಗಿ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶತದಿನದ ಕ್ಷಯ (ಟಿಬಿ) ಆಂದೋಲನದ ಕುರಿತು ಅರಿವು ಮತ್ತು ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬ್ಯಾಡಗಿ: ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಬ್ಯಾಡಗಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಶತದಿನದ ಕ್ಷಯ (ಟಿಬಿ) ಆಂದೋಲನದ ಕುರಿತು ಅರಿವು ಮತ್ತು ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಾಧೀಶ ಅಮೋಲ್ ಜೆ. ಹಿರಿಕುಡೆ ಮಾತನಾಡಿ, ಕ್ಷಯರೋಗ (ಟಿಬಿ) ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಗಂಭೀರ ಕಾಯಿಲೆಯಾಗಿದೆ. ಕ್ಷಯರೋಗ ಉಂಟು ಮಾಡುವ ಸೂಕ್ಷ್ಮಜೀವಿಗಳು ಒಂದು ತರಹದ ಬ್ಯಾಕ್ಟೀರಿಯಾ ಇರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಕ್ಷಯರೋಗ ಹರಡಬಹುದಾಗಿದೆ ಎಂದು ವೈದ್ಯಕೀಯ ವಲಯದಿಂದ ತಿಳಿದುಕೊಳ್ಳಬಹುದಾಗಿದೆ ಎಂದರು.ಸದಸ್ಯ ಕಾರ್ಯದರ್ಶಿ, ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ಸಿವಿಲ್ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಜನಸಂದಣಿಯಲ್ಲಿ ಅಥವಾ ಕಿಕ್ಕಿರಿದು ಜನರು ಸೇರುವ ಸ್ಥಳಗಳಲ್ಲಿ ಅಥವಾ ವಾಸಿಸುವ ಸ್ಥಳದಲ್ಲಿ ಜನದಟ್ಟಣೆ ಮದ್ಯದಲ್ಲಿ ಕ್ಷಯರೋಗ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಹೀಗಾಗಿ ವೈದ್ಯಕೀಯ ಸಲಹೆಗಳನ್ನು ಪಡೆದುಕೊಳ್ಳುವ ಮೂಲಕ ಈ ರೋಗದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದರು.
ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎನ್. ಬಾರ್ಕಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ ರಾಜಣ್ಣ ನ್ಯಾಮತಿ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಜಿ. ಹಿರೇಮಠ, ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ್ ಭಜಂತ್ರಿ, ಜಿಲ್ಲಾ ಕ್ಷಯರೋಗ ನಿಯಂತ್ರಣ ಘಟಕದ ಹಿರಿಯ ಮೇಲ್ವಿಚಾರಕ ಜೆ.ಪಿ. ವಿನಾಯಕ, ಹಿರಿಯ ಮೇಲ್ವಿಚಾರಕಿ ರೇಷ್ಮಾ, ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಸಂತೋಷ ಹಾಲುಂಡಿ, ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಶಿಕ್ಷಣಾಧಿಕಾರಿ ವಿ. ಮಮತಾ, ಹಿರಿಯ ವಕೀಲರಾದ ಪಿ.ಆರ್ .ಮಠದ, ಎಫ್.ಎಂ. ಮುಳಗುಂದ, ಎಂ.ಆರ್. ಹೊಮ್ಮರಡಿ, ಪ್ರಭು ಸೀಗಿಹಳ್ಳಿ, ಎಂ.ಜೆ. ಮುಲ್ಲಾ, ಭಾರತೀ ಕುಲಕರ್ಣಿ ಉಪಸ್ಥಿತರಿದ್ದರು. ನ್ಯಾಯಾಂಗ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.