ಶಿಕ್ಷಣ ಸಂಸ್ಥೆಗಳ ಮೇಲೆ ಅಭಿಮಾನವಿರಲಿ: ಪ್ರಕಾಶ್‌ ಕುಮಾರ್‌

ಮೂಲ್ಕಿ: ವಿದ್ಯಾರ್ಥಿಗಳ ಸಾಧನೆಯಲ್ಲಿ ಗುರು ಹಿರಿಯರ ಮಾರ್ಗದರ್ಶನ ಕಾರಣವಾಗಿದ್ದು, ಸಂಸ್ಕೃತಿ ಸಂಸ್ಕಾರ ಕಲಿಸಿ, ಬದುಕು ರೂಪಿಸುವ ಶಿಕ್ಷಣ ಸಂಸ್ಥೆಗಳ ಮೇಲೆ ಅಭಿಮಾನವಿರಬೇಕು ಎಂದು ಬಾಳ ಎಚ್ ಪಿಸಿಎಲ್ ಸಂಸ್ಥೆಯ ಜನರಲ್ ಮ್ಯಾನೇಜರ್ ಪ್ರಕಾಶ್ ಕುಮಾರ್ ಪಟ್ನಾಯಕ್ ಹೇಳಿದರು.

ಮಧ್ಯ ಸರ್ಕಾರಿ ಪ್ರೌಢಶಾಲೆಗೆ ಎಚ್ ಪಿಸಿಎಲ್ ಸಂಸ್ಥೆ ವತಿಯಿಂದ ಸುಮಾರು 6 ಲಕ್ಷ ರು. ವೆಚ್ಚದಲ್ಲಿ 5 ಸ್ಮಾರ್ಟ್ ಟಿವಿ, 30 ಬೆಂಚು 30 ಡೆಸ್ಕ್ ಗಳನ್ನು ಶಾಲೆಗೆ ಹಸ್ತಾಂತರಿಸಿ ಮಾತನಾಡಿದ ಅವರು, ಮುಂದೆಯೂ ನಮ್ಮ ಸಂಸ್ಥೆ ವತಿಯಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅನಿಲ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಎಚ್ ಪಿಸಿಎಲ್ ಸಂಸ್ಥೆಯ ಆಪರೇಶನ್ ವಿಭಾಗದ ಸೀನಿಯರ್ ಮ್ಯಾನೇಜರ್ ವೆಂಕಟೇಶ್ ಚಿಂತಾಕಿಂಡಿ, ಮ್ಯಾನೇಜರ್ ಸೃಷ್ಟಿ, ಎಚ್ ಆರ್ ವಿಭಾಗದ ಅಸಿಸ್ಟೆಂಟ್ ವಾಸು ನಾಯಕ್, ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಷರಾಜ್ ಶೆಟ್ಟಿ, ಸದಸ್ಯೆ ವಜ್ರಾಕ್ಷಿ ಪಿ. ಶೆಟ್ಟಿ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಶಶಿಕಲಾ, ಸದಸ್ಯರಾದ ಹರೀಶ್ ಭಂಡಾರಿ, ಲೀಲಾಧರ ಶೆಟ್ಟಿ, ದಿನೇಶ್ ಕುಲ್ಲಂಗಾಲು, ನಿಶ್ಮಿತಾ, ಪ್ರಕಾಶ್ ಶೆಟ್ಟಿ, ರಿತೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಶೈಲಾ ಸ್ವಾಗತಿಸಿದರು.