ಸಾರಾಂಶ
ಕುಡಿಯುವ ನೀರಿನಲ್ಲಿ ಯಾವುದೇ ತರಹದ ಕಲಬೆರಕೆಯಾಗಬಾರದು. ನೀರಿನ ಟ್ಯಾಂಕರ್ ಶುಚಿಗೊಳಿಸಬೇಕು. ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ತ್ವರಿತವಾಗಿ ಜನರ ಸಮಸ್ಯೆಗೆ ಸ್ಪಂದಿಸಬೇಕು.
ಹುಬ್ಬಳ್ಳಿ:
ಮಾಹಿತಿ ಹಕ್ಕು ಹಾಗೂ ಸಕಾಲ ಯೋಜನೆಗಳ ಮೂಲಕ ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತು ಅರ್ಜಿ ಸಲ್ಲಿಸಬಹುದು. ಸಲ್ಲಿಸಿದ ಅರ್ಜಿಗಳನ್ನು ಶೀಘ್ರದಲ್ಲೇ ಅಧಿಕಾರಿಗಳು ವಿಲೇವಾರಿ ಮಾಡಬೇಕು ಎಂದು ಲೋಕಾಯುಕ್ತದ ಪೊಲೀಸ್ ಅಧೀಕ್ಷಕ ಶಂಕರ ರಾಗಿ ಹೇಳಿದರು.ಅವರು ಇಲ್ಲಿನ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಸಭಾಭವನದಲ್ಲಿ ಬುಧವಾರ ಕರ್ನಾಟಕ ಲೋಕಾಯುಕ್ತ ಧಾರವಾಡ, ಹುಬ್ಬಳ್ಳಿ ತಾಲೂಕು ಮಟ್ಟದ ಅಧಿಕಾರಿಗಳ ಸಮಕ್ಷಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕುಂದು-ಕೊರತೆ ಸಭೆಯಲ್ಲಿ ಮಾತನಾಡಿದರು.
ಕುಡಿಯುವ ನೀರಿನಲ್ಲಿ ಯಾವುದೇ ತರಹದ ಕಲಬೆರಕೆಯಾಗಬಾರದು. ನೀರಿನ ಟ್ಯಾಂಕರ್ ಶುಚಿಗೊಳಿಸಬೇಕು. ಅಧಿಕಾರಿಗಳು ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ತ್ವರಿತವಾಗಿ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಲೋಕಾಯುಕ್ತ ಉಪ ಪೊಲೀಸ್ ಅಧೀಕ್ಷಕ ವೆಂಕನಗೌಡ ಪಾಟೀಲ ಮಾತನಾಡಿ, ಸಸ್ಯ ಶ್ಯಾಮಲಾ ಯೋಜನೆ ಮೂಲಕ ಸಸಿ ನೆಡುವುದು ಅಷ್ಟೇ ಅಲ್ಲ, ಅವುಗಳ ಸಂರಕ್ಷಣೆ ಮಾಡಬೇಕು. ಜನರು ತಮ್ಮ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಅರ್ಜಿ ನೀಡಲು ಬಂದರೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಆ ಅರ್ಜಿಗಳಿಗೆ ಕಡ್ಡಾಯವಾಗಿ ಸ್ವೀಕೃತಿ ನೀಡಬೇಕು ಎಂದರು.ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ, ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ಅವುಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಮಳೆಗಾಲ ಶುರುವಾಗಿದ್ದು ಶಾಲೆಗಳ ಮೇಲ್ಪಾವಣಿ ದುರಸ್ತಿಗೊಳಿಸಬೇಕು. ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಗುಣಮಟ್ಟ ಪರೀಕ್ಷಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಾರ್ವಜನಿಕರಿಂದ ಒಟ್ಟಾರೆ 6 ಅರ್ಜಿಗಳು ಸ್ವೀಕೃತಗೊಂಡಿವೆ. ಅವುಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶೀಘ್ರವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು. ಸಭೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಾದ ಪ್ರಭುಲಿಂಗ ಹಿರೇಮಠ, ಕರುಣೇಶಗೌಡ ಜಿ, ಹುಬ್ಬಳ್ಳಿ ಶಹರ ತಹಸೀಲ್ದಾರ್ ಕಲಗೌಡ ಪಾಟೀಲ, ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒ ರಾಮಚಂದ್ರ ಹೊಸಮನಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಇದ್ದರು.