ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಹಟ್ಟಿ
ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡು ಸಮಸ್ಯೆಗಳನ್ನು ಹೊತ್ತು ತಂದಿರುವ ರೈತರು, ಸಾರ್ವಜನಿಕರ ಹಿತ ಕಾಯಬೇಕು. ವಿಳಂಬ ನೀತಿ, ಬೇಜವಾಬ್ದಾರಿ ತೋರಿದರೆ ನೀವೇ ಹೊಣೆಗಾರರಾಗುತ್ತಿರಿ ಎಂದು ಶಾಸಕ ಡಾ. ಚಂದ್ರು ಲಮಾಣಿ ಅಧಿಕಾರಿಗಳಿಗೆ ತಾಕೀತು ಮಾಡಿದರು.ಬುಧವಾರ ತಾಲೂಕು ಪಂಚಾಯತ್ ಸಾಮರ್ಥ್ಯ ಸೌಧದಲ್ಲಿ ಜರುಗಿದ ಜನಸ್ಪಂದನ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಪಾಲ್ಗೊಂಡಿರುವ ಎಲ್ಲ ಇಲಾಖೆ ಅಧಿಕಾರಿಗಳು ತಮಗೆ ಬಂದ ಅಹವಾಲುಗಳನ್ನು ನಿಷ್ಕಾಳಜಿ ತೋರದೇ ಶೀಘ್ರ, ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಹೇಳಿದರು.ರೈತರ ಹೊಲಗಳಿಗೆ ತೆರಳಲು ರಸ್ತೆಗಳಿಲ್ಲ. ಇದರಿಂದ ಮಳೆಗಾಲದಲ್ಲಿ ಹೊಲಕ್ಕೆ ಹೋಗಲು ಮತ್ತು ಹೊಲದಲ್ಲಿಯ ಫಸಲು ಸಾಗಾಟ ಮಾಡಲು ತೀವ್ರ ತೊಂದರೆ ಪಡುತ್ತಿದ್ದಾರೆ. ಅನೇಕ ರೈತರಿಂದ ಅರ್ಜಿಗಳು ಬಂದಿವೆ, ರೈತರ ಸಮಸ್ಯೆಗಳ ಪರಿಹಾರಕ್ಕೆ ಕಂದಾಯ, ಭೂಮಾಪನ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು ಎಂದು ತಿಳಿಸಿದರು.ಪಟ್ಟಣ ಪಂಚಾಯಿತಿಗೆ ಸಂಬಂಧಿಸಿದಂತೆ ಹೆಚ್ಚು ಅರ್ಜಿಗಳು ಬಂದಿದ್ದು, ಅಕ್ರಮ ಖಾತೆ ಬದಲಾವಣೆ, ಮೂಲಭೂತ ಸೌಲಭ್ಯ, ಕುಡಿಯುವ ನೀರು ಪೂರೈಕೆ, ಹೊಸ ಬಡಾವಣೆಗಳಲ್ಲಿ ಯಾವುದೇ ಸೌಕರ್ಯವಿಲ್ಲದಿದ್ದರೂ ಉತಾರ ನೀಡುತ್ತಿರುವುದು, ಕಾರ್ಯಾಲಯದಲ್ಲಿ ಸಿಬ್ಬಂದಿಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದು ಸೇರಿದಂತೆ ಅನೇಕ ಸಮಸ್ಯೆಗಳು ನಿಮ್ಮ ಇಲಾಖೆ ಮೇಲೆ ಬಂದಿವೆ. ಮುಖ್ಯಾಧಿಕಾರುಗಳು ಜವಾಬ್ದಾರಿ ಅರಿತು ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡುವಂತೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಮಾತನಾಡಿ, ಇವತ್ತು ಬಂದಿರುವ ೫೭ ಅರ್ಜಿಗಳಲ್ಲಿ ಕೆಲವೊಂದಕ್ಕೆ ಇಲ್ಲಿಯೇ ಪರಿಹಾರ ದೊರೆತಿದ್ದು, ಜಿಲ್ಲಾ ಹಂತ, ಸಚಿವರ ಹಂತದಲ್ಲಿಯ ಕೆಲವು ಸಮಸ್ಯೆಗಳಿದ್ದು, ಅವುಗಳನ್ನು ತಿಂಗಳೊಳಗಾಗಿ ಪರಿಹರಿಸಲಾಗುವುದು. ಜೊತೆಗೆ ಪ್ರತಿ ಸಲವೂ ಒಂದೇ ಸಮಸ್ಯೆಗಳಿಗೆ ಅರ್ಜಿಗಳು ಬರುತ್ತಿದ್ದು, ಈ ತರದ ಬೆಳವಣಿಗೆ ಮುಂದೆ ಆಗದಂತೆ ಅಧಿಕಾರಿಗಳು ಗಮನಿಸಬೇಕು ಎಂದು ಹೇಳಿದರು.ಒಂದೇ ಆಸ್ತಿ ೩ ಬಾರಿ ನೋಂದಣಿ
ಪಟ್ಟಣದ ಕಪ್ಪತ್ತನವರ ನಿವೇಶನಗಳಲ್ಲಿಯ ಪ್ಲಾಟ್‌ವೊಂದನ್ನು ಖರೀದಿ ಪ್ರಕಾರ ಖಾತೆ ಬದಲಾವಣೆ ಮಾಡದೇ ಪಟ್ಟಣ ಪಂಚಾಯತ್ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದು, ಒಂದೇ ಆಸ್ತಿ ನಂಬರಿನ ಉತಾರವನ್ನು ಮೂರು ಜನರಿಗೆ ನೀಡಿದ್ದು, ಉಪನೋಂದಣಿ ಇಲಾಖೆ ಅಧಿಕಾರಿಗಳು ಯಾವುದನ್ನು ಪರಿಶೀಲನೆ ಮಾಡದೇ ನೋಂದಣಿ ಮಾಡಿಕೊಟ್ಟಿದ್ದರಿಂದ ಆಸ್ತಿ ಖರೀದಿ ಹಿಡಿದ ಮಾಲೀಕರು ತಮ್ಮ ಪ್ಲಾಟ್ ಗುರುತಿಸಿಕೊಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಹೀಗಾದರೆ, ಇದಕ್ಕೆ ಯಾರು ಹೊಣೆಗಾರರು ಎಂದು ಫಕ್ಕಿರೇಶ ರಟ್ಟಿಹಳ್ಳಿ ಲಿಖಿತ ಅರ್ಜಿ ಸಲ್ಲಿಸಿ ಗಮನ ಸೆಳೆದರು.ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಉಪನೋಂದಣಿ ಇಲಾಖೆ ಅಧಿಕಾರಿಯನ್ನು ವಿಚಾರಿಸದಾಗ ನಾನು ಹೊಸದಾಗಿ ಬಂದಿದ್ದು, ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಂತೆ ಜಿಲ್ಲಾ ಉಪನೋಂದಣಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಪಪಂ ಕಾರ್ಯಾಲಯದ ಠರಾವ್ ಬುಕ್ ಕಳ್ಳತನ ಕ್ರಮ ಇಲ್ಲಕಳೆದ ೨೦೧೭ರಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿದ್ದ ಬುಡನಶ್ಯಾ ಮಕಾನದಾರ ಅವರು ಕಾಮಗಾರಿ ಮಾಡದೇ ಹಣ ದುರ್ಬಳಕೆ ಮಾಡಿಕೊಂಡಿದ್ದು ಕಂಡುಬಂದಿರುವ ಹಿನ್ನೆಲೆಯಲ್ಲಿ ಪಪಂ ಕಾರ್ಯಾಲಯದಲ್ಲಿಯ ಠರಾವ್ ಪುಸ್ತಕ ಕಳ್ಳತನ ಮಾಡಿದ್ದು , ತಹಸೀಲ್ದಾರ್ ನ್ಯಾಯಾಲಯದಲ್ಲಿ ರುಜುವಾತಾಗಿದ್ದು ಮಾಜಿ ಪಪಂ ಸದಸ್ಯರಾದ ಜೆ.ಆರ್. ಕುಲಕರ್ಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರ ನೀಡಿದ್ದರು. ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದು, ಅರ್ಜಿದಾರರು ಕೋರಿದಂತೆ ಈಗಾಗಲೇ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಮುಂದಾಗುವುದಾಗಿ ಎಸ್‌ಪಿ ಬಿ.ಎಸ್. ನೇಮಗೌಡ್ರ ತಿಳಿಸಿದರು.
ಕಂದಾಯ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಆದೇಶ ಪತ್ರ ನೀಡಲಾಯಿತು. ಜೊತೆಗೆ ಕಾರ್ಮಿಕ ಇಲಾಖೆ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಕಾರ್ಮಿಕರ ಮಕ್ಕಳಿಗೆ ಲ್ಯಾಪ್‌ಟಾಪ್ ಕೊಡಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್, ತಹಸೀಲ್ದಾರ್ ಅನೀಲ ಬಡಿಗೇರ, ಸಿಪಿಐ ನಾಗರಾಜ ಮಾಡಳ್ಳಿ ಸೇರಿ ಅನೇಕರು ಇದ್ದರು.