ಸಾರಾಂಶ
ಪಶುಪಾಲಕರು ಜಾನುವಾರುಗಳಿಗೆ ಕಾಲು-ಬಾಯಿ ರೋಗ ಲಸಿಕೆ ಹಾಕಿ, ರೋಗಗಳಿಂದ ಜಾನುವಾರುಗಳನ್ನು ರಕ್ಷಿಸಬೇಕು. ಈ ನಿಟ್ಟಿನಲ್ಲಿ ರೈತರೂ ಕಾಳಜಿ ಮೆರೆಯಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದ್ದಾರೆ.
- ಕಾಲು-ಬಾಯಿ ರೋಗ ಲಸಿಕಾ ಅಭಿಯಾನದಲ್ಲಿ ಸಂಸದೆ ಡಾ.ಪ್ರಭಾ ಸೂಚನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಪಶುಪಾಲಕರು ಜಾನುವಾರುಗಳಿಗೆ ಕಾಲು-ಬಾಯಿ ರೋಗ ಲಸಿಕೆ ಹಾಕಿ, ರೋಗಗಳಿಂದ ಜಾನುವಾರುಗಳನ್ನು ರಕ್ಷಿಸಬೇಕು. ಈ ನಿಟ್ಟಿನಲ್ಲಿ ರೈತರೂ ಕಾಳಜಿ ಮೆರೆಯಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು.ನಗರದ ಗೃಹ ಕಚೇರಿಯಲ್ಲಿ ಶನಿವಾರ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಯೋಜನೆಯಡಿ 7ನೇ ಸುತ್ತಿನ ಕಾಲು-ಬಾಯಿ ಜ್ವರದ ಲಸಿಕೆ ಕಾರ್ಯಕ್ರಮಕ್ಕೆ ತಮ್ಮ ನಿವಾಸದಲ್ಲಿರುವ ಗೋವುಗಳಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಸಂಸದರು ಮಾತನಾಡಿ, ಕಾಲು-ಬಾಯಿ ರೋಗ ವೈರಾಣುವಿನಿಂದ ಹರಡುವ ಸಾಂಕ್ರಾಮಿಕ ರೋಗವಾಗಿದೆ. ರೈತರಿಗೆ ಆರ್ಥಿಕ ಸಂಕಷ್ಟಗಳನ್ನು ತಂದೊಡ್ಡುವ, ಕಾಲು-ಬಾಯಿ ರೋಗ ನಿಯಂತ್ರಿಸಿ ನಿರ್ಮೂಲನೆ ಮಾಡಲು ಪ್ರತಿ 6 ತಿಂಗಳಿಗೊಮ್ಮೆ ಈ ರೋಗದ ವಿರುದ್ಧ ಲಸಿಕೆ ಹಾಕಿಸುವುದು ಉತ್ತಮ ಎಂದರು.ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆಗೆ ಕಾಲು-ಬಾಯಿ ರೋಗ ಲಸಿಕೆಯು ಕೇಂದ್ರ ಸರ್ಕಾರದಿಂದ ಸರಬರಾಜಾಗಿದೆ. ಈ ರೋಗದ ವಿರುದ್ಧ ಎಲ್ಲ ದನ, ಎಮ್ಮೆ ಮತ್ತು ಕರುಗಳಿಗೆ ಉಚಿತವಾಗಿ ನೀಡುವ ಲಸಿಕಾ ಕಾರ್ಯಕ್ರಮವನ್ನು ಏ.26ರಿಂದ ಜೂನ್ 9ರವರೆಗೆ ಹಮ್ಮಿಕೊಳ್ಳಲಾಗಿದೆ. ರೈತ ಬಾಂಧವರು ಹಾಗೂ ಪಶುಪಾಲಕರು ತಪ್ಪದೇ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಹೊಣೆ ಹೊರಬೇಕು ಎಂದರು.
ಪ್ರತಿ ಜಾನುವಾರುವಿಗೆ ಪ್ರತ್ಯೇಕ ಸಿರಿಂಜ್ ಮತ್ತು ನೀಡಲ್‌ಗಳನ್ನು ಬಳಸಲಾಗುವುದು. ಲಸಿಕೆದಾರರು ನಿಮ್ಮ ಗ್ರಾಮಕ್ಕೆ, ನಿಮ್ಮ ಮನೆ ಬಾಗಿಲಿಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ಹಾಕಲಿದ್ದಾರೆ. ಕಾಲು-ಬಾಯಿ ರೋಗ ಲಸಿಕಾ ಅಭಿಯಾನದ ಮಾಹಿತಿ ಇಲಾಖಾ ವೆಬ್ ಸೈಟ್: ** WWW.ahvs.kar.in* ನಲ್ಲಿ ಲಭ್ಯವಿದೆ. ಲಸಿಕಾ ಅಭಿಯಾನದ ಹೆಚ್ಚಿನ ಮಾಹಿತಿಗೆ ಸಮೀಪದ ಪಶುಪಾಲನಾ ಇಲಾಖೆಯ ಪಶು ಆಸ್ಪತ್ರೆ ಅಥವಾ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸಂಪರ್ಕಿಸಬೇಕು. ರೈತರು ನಿಮ್ಮ ಗ್ರಾಮಕ್ಕೆ ಭೇಟಿ ನೀಡುವ ಲಸಿಕಾ ಸಿಬ್ಬಂದಿಯೊಂದಿಗೆ ಸಹಕರಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.- - -
-26ಕೆಡಿವಿಜಿ38, 39:ದಾವಣಗೆರೆಯಲ್ಲಿ 7ನೇ ಸುತ್ತಿನ ಜಾನುವಾರುಗಳಿಗೆ ಕಾಲು-ಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದರು.