ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ರಸ್ತೆ ಅಪಘಾತ ಸಂಭವಿಸಿರುವ ಅಂಕಿ ಅಂಶಗಳು ಹಾಗೂ ಇತರ ಸುರಕ್ಷತಾ ಅಂಶಗಳನ್ನು ಪರಿಗಣಿಸಿ ಜಿಲ್ಲೆಯಲ್ಲಿ ಒಟ್ಟು 29 ಬ್ಲಾಕ್ ಸ್ಪಾಟ್ ಗಳನ್ನು ಗರುತಿಸಲಾಗಿದ್ದು, ಅಂತಹ ಸ್ಥಳಗಳಿಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.ಗುರುವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಪಘಾತ ತಡೆಗೆ ಕ್ರಮ ಕೈಗೊಳ್ಳಿ2022 ರಿಂದ ಈವರೆಗೆ ರಸ್ತೆ ಅಪಘಾತ ಸಂಭವಿಸಿರುವ ಅಂಕಿ ಅಂಶಗಳು ಹಾಗೂ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಕೊರತೆಗಳುಳ್ಳ ಇತರ ಅಂಶಗಳನ್ನು ಪರಿಗಣಿಸಿ 29 ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಆ ಬ್ಲಾಕ್ ಸ್ಪಾಟ್ ಸ್ಥಳಗಳನ್ನು ಪರಿಶೀಲಿಸಿ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುವುದಕ್ಕೆ ಸೂಕ್ತ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ರಸ್ತೆಯ ಅಭಿವೃದ್ಧಿ ಕಾಮಗಾರಿಗಳಲ್ಲಿ ರಸ್ತೆ ಸುರಕ್ಷತಾ ಅಂಶಗಳಿಗೆ ಒತ್ತು ನೀಡಬೇಕು. ಹೆದ್ದಾರಿಗಳಲ್ಲಿ ಆಂಬ್ಯುಲೆನ್ಸ್ ಸೇವೆಗಳು ಮತ್ತು ಟ್ರಾಮಾ ಕೇಂದ್ರಗಳ ಜಾಲ ಸ್ಥಾಪನೆಯಾಗಬೇಕು ಎಂದು ಹೇಳಿದರು.
ಹೈವೇ ಪೆಟ್ರೋಲಿಂಗ್ ಕಾರ್ಯವು ಬ್ಲಾಕ್ ಸ್ಪಾಟ್ ಗಳಲ್ಲಿ ಹೆಚ್ಚಾಗಿ ಜರುಗಬೇಕು. ಹೆದ್ದಾರಿಗಳ ಅಂಡರ್ ಪಾಸ್ ನಲ್ಲಿ ಸರ್ವೀಸ್ ರಸ್ತೆ ಮುಂದೆ ಮುಖ್ಯ ರಸ್ತೆಗೆ ವಾಹನಗಳು ತೆರಳದಂತೆ ಕ್ರಾಷ್ ಬ್ಯಾರಿಯಲ್ ಅಳವಡಿಸಬೇಕು. ಹೆದ್ದಾರಿಗಳ ಪಕ್ಕದ ಸರ್ವೀಸ್ ರಸ್ತೆಗಳಲ್ಲಿನ ಗುಂಡಿಗಳನ್ನು ಸರಿ ಪಡಿಸಬೇಕು. ಮುಖ್ಯ ಜೆಂಕ್ಷನ್ ಗಳಲ್ಲಿ ಲೈಟ್ ಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.ಭಿತ್ತಿಪತ್ರ ಮತ್ತು ಕರಪತ್ರ ಬಿಡುಗಡೆ ಈ ವೇಳೆ ಜಿಲ್ಲಾಧಿಕಾರಿಗಳು “ಮಕ್ಕಳ ಬಗ್ಗೆ ನಿಗಾಯಿರಿಸಿ ವಾಹನ ಚಲಾಯಿಸಿ” ಎಂಬ ಸಂದೇಶ ಸಾರುವ ರಸ್ತೆ ಸುರಕ್ಷಾ ಜಾಗೃತಿಯ ಬಿತ್ತಿಪತ್ರ ಮತ್ತು ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ, ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.