ಗದಗ: ಜಿಲ್ಲೆಯಲ್ಲಿ ಮೇ 18ರಿಂದ 25ರ ವರೆಗೆ ಜರುಗಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಯನ್ನು ಅತ್ಯಂತ ವ್ಯವಸ್ಥಿತವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪರೀಕ್ಷೆಗಳಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಅವ್ಯವಹಾರಗಳು ನಡೆಯದಂತೆ ತಡೆಗಟ್ಟಲು ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಜಿಲ್ಲೆಯ ಒಟ್ಟು 7 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಆಯಾ ಕೇಂದ್ರಗಳಲ್ಲಿ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪರೀಕ್ಷಾ ಅವಧಿಯಲ್ಲಿ ಕೇಂದ್ರಗಳ ಸುತ್ತಮುತ್ತಲೂ ಕಡ್ಡಾಯವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದ್ದು, ಯಾವುದೇ ಹಂತದಲ್ಲೂ ಲೋಪದೋಷಗಳಾಗದಂತೆ ಪಾರದರ್ಶಕ ಹಾಗೂ ಸುಗಮ ಪರೀಕ್ಷೆಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಜಿಲ್ಲಾ ನೋಡಲ್ ಅಧಿಕಾರಿ ಎಚ್.ಬಿ. ರಡ್ಡೇರ್, ಡಿವೈಪಿಸಿ ಎಂ.ಎಸ್. ಕಂಬಳಿ ಹಾಗೂ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಉಪಸ್ಥಿತರಿದ್ದರು.
ಈ ಬಾರಿ ಜಿಲ್ಲೆಯ 7 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 1905 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಮೇ 18ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರ ವರೆಗೆ ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ ಹಾಗೂ ಸಂಸ್ಕೃತ ವಿಷಯಗಳ ಪರೀಕ್ಷೆ ನಡೆಯಲಿದೆ. ಮೇ 19ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರ ವರೆಗೆ ಕೋರ್ ಸಬ್ಜೆಕ್ಟ್ ವಿಷಯಗಳಾದ ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಪರೀಕ್ಷೆಗಳು ನಡೆಯಲಿವೆ. ಮೇ 20ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ದ್ವಿತೀಯ ಭಾಷೆ ಇಂಗ್ಲಿಷ್ ಮತ್ತು ಕನ್ನಡ ಪರೀಕ್ಷೆ ಜರುಗಲಿದೆ. ಮೇ 21ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಕೋರ್ ಸಬ್ಜೆಕ್ಟ್ ವಿಷಯಗಳಾದ ಗಣಿತ ಮತ್ತು ಸಮಾಜಶಾಸ್ತ್ರ ಪರೀಕ್ಷೆಗಳು ಇರಲಿವೆ.
ಮೇ 22ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ತೃತೀಯ ಭಾಷೆಗಳಾದ ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು, ಮರಾಠಿ ಪರೀಕ್ಷೆಗಳು ನಡೆಯಲಿದ್ದು, ಅದೇ ದಿನ ಬೆಳಗ್ಗೆ 10 ರಿಂದ ಮಧ್ಯಾಹ್ನ 12.15ರ ವರೆಗೆ ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೋಮೊಬೈಲ್, ಬ್ಯೂಟಿ ಆ್ಯಂಡ್ ವೆಲ್‌ನೆಸ್, ಅಪರೆಲ್ ಮೇಡ್ ಆಪ್ಸ್ ಸೇರಿದಂತೆ ಎನ್.ಎಸ್.ಕ್ಯೂ.ಎಫ್. ವಿಷಯಗಳ ಪರೀಕ್ಷೆ ನಡೆಯಲಿದೆ.
ಮೇ 23ರಂದು ಬೆಳಗ್ಗೆ 1 ರಿಂದ ಮಧ್ಯಾಹ್ನ 1.15ರ ವರೆಗೆ ಕೋರ್ ಸಬ್ಜೆಕ್ಟ್ ವಿಷಯವಾದ ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಕೊನೆಯ ದಿನವಾದ ಮೇ 25ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರ ವರೆಗೆ ಅರ್ಥಶಾಸ್ತ್ರ ಹಾಗೂ ಜೆ.ಟಿ.ಎಸ್. ವಿಷಯಗಳಾದ ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಹಾಗೂ ಪ್ರೋಗ್ರಾಮಿಂಗ್ ಇನ್ ಪರೀಕ್ಷೆಗಳು ಜರುಗಲಿವೆ ಎಂದು ತಿಳಿಸಿದ್ದಾರೆ.