ರಸಗೊಬ್ಬರ ವಿತರಣೆಯಲ್ಲಿ ರೈತರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಿ: ತಹಸೀಲ್ದಾರ್

| Published : May 15 2024, 01:39 AM IST

ರಸಗೊಬ್ಬರ ವಿತರಣೆಯಲ್ಲಿ ರೈತರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಿ: ತಹಸೀಲ್ದಾರ್
Share this Article
  • FB
  • TW
  • Linkdin
  • Email

ಸಾರಾಂಶ

ರೈತ ಮಹಿಳೆಗೆ ಬಿತ್ತನೆ ಬೀಜ ವಿತರಿಸಿದರು. ಬಳಿಕ ಪಟ್ಟಣದ ರಸಗೊಬ್ಬರ ದಾಸ್ತಾನು ಮಳಿಗೆ ಹಾಗೂ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು, ಪೂರ್ವ ಮುಂಗಾರಿನಲ್ಲಿ ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಸಮಸ್ಯೆಯಾಗದಂತೆ, ನಿಗಧಿಪಡಿಸಿದ ದರದಂತೆ ವಿತರಿಸಲು ಅಂಗಡಿ ಮಾಲೀಕರಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್

ತಾಲೂಕಿನ ಹುಲಿಯೂರುದುರ್ಗ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸುವ ಕಾರ್ಯಕ್ಕೆ ತಹಸೀಲ್ದಾರ್ ವಿಶ್ವನಾಥ್ ಚಾಲನೆ ನೀಡಿದರು.

ತಾಲೂಕಿನ ಹುಲಿಯೂರುದುರ್ಗ ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ತಹಸೀಲ್ದಾರ್ ವಿಶ್ವನಾಥ್ ಭೇಟಿ ನೀಡಿ, ಪೂರ್ವ ಮುಂಗಾರು ಪ್ರಾರಂಭವಾಗಿ ತಾಲೂಕಿನ ಹಲವೆಡೆ ಮಳೆಯಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿವೆ. ರೈತರಿಗೆ ಕೃಷಿ ಇಲಾಖೆಯಿಂದ ವಿತರಿಸಲು ದಾಸ್ತಾನು ಮಾಡಿರುವ ಬಿತ್ತನೆ ಬೀಜಗಳನ್ನು ಪರಿಶೀಲಿಸಿದರು.

ಬಿತ್ತನೆ ಬೀಜ ದಾಸ್ತಾನು ಮಾಡಿರುವ ಸಹಿ ಪರಿಶೀಲಿಸಿದ ತಾಲೂಕು ದಂಡಾಧಿಕಾರಿಗಳು ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ರೈತ ಮಹಿಳೆಗೆ ಬಿತ್ತನೆ ಬೀಜ ವಿತರಿಸಿದರು. ಬಳಿಕ ಪಟ್ಟಣದ ರಸಗೊಬ್ಬರ ದಾಸ್ತಾನು ಮಳಿಗೆ ಹಾಗೂ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು, ಪೂರ್ವ ಮುಂಗಾರಿನಲ್ಲಿ ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಸಮಸ್ಯೆಯಾಗದಂತೆ, ನಿಗಧಿಪಡಿಸಿದ ದರದಂತೆ ವಿತರಿಸಲು ಅಂಗಡಿ ಮಾಲೀಕರಿಗೆ ಸೂಚಿಸಿದರು.

ಹೋಬಳಿಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಉದ್ದು, ಅಲಸಂದೆ ಮತ್ತು ಹೆಸರು ಕಾಳುಗಳ ದಾಸ್ತಾನು ಲಭ್ಯವಿದ್ದು, ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲಾಗುತ್ತದೆ. ಅವಶ್ಯಕತೆ ಇರುವ ರೈತರು ತಮ್ಮ ಆಧಾರ್ ಅಥವಾ FID ಸಂಖ್ಯೆ ಯೊಂದಿಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬಿತ್ತನೆ ಬೀಜ ಪಡೆದುಕೊಳ್ಳಲು ಕೃಷಿ ಅಧಿಕಾರಿಗಳು ಸೂಚಿಸಿದ್ದಾರೆ. ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿ ಮುನಿಯಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಗನಾಥ್, ಹುಲಿಯೂರುದುರ್ಗ ಗ್ರಾಮ ಪಂಚಾಯಿತಿ ಪಿಡಿಒ ಶ್ರೀಧರ್ ಹಾಗೂ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಈ ವೇಳೆ ಉಪಸ್ಥಿತರಿದ್ದರು.