ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರೈತರಲ್ಲಿ ಹೊಸ ತಂತ್ರಜ್ಞಾನ ಹಾಗೂ ವಿವಿಧ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ರೈತರ ಆದಾಯ ಹೆಚ್ಚಿಸುವತ್ತ ಆಸಕ್ತಿ ತೋರಿಸಬೇಕು ಎಂದು ಜಿಲ್ಲಾಧಿಕಾರಿ ಸಂಗಪ್ಪ ಸಲಹೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕೃಷಿ ಮತ್ತು ಕೃಷಿ ಸಂಬಂಧಿತ ವಲಯಗಳಿಗೆ ಐದು ವರ್ಷಗಳ ಸಮಗ್ರ ಕ್ರಿಯಾಯೋಜನೆ ತಯಾರಿಕೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳು ಹರಿಯುವುದರಿಂದ ಮೀನುಗಾರಿಕೆ ಕೂಡ ಉತ್ತಮ ಆದಾಯ ನೀಡುವ ಕೃಷಿ ಚಟುವಟಿಕೆಯಾಗಿದೆ. ಸಮುದ್ರ ಮೀನಿಗೆ ಬೇಡಿಕೆ ಇರುವಂತೆ ಸಿಹಿ ನೀರಿನ ಮೀನಿಗೆ ಕೂಡ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಜಿಲ್ಲೆಯ ರೈತರಲ್ಲಿ ಮೀನುಗಾರಿಕೆ ಬಗ್ಗೆ ಜಾಗೃತಿ ಮೂಡಿಸಬೇಕೆಂದರು.
ಕುರಿ ಮೇಕೆ ಸಾಕುವುದರೊಂದಿಗೆ ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡಾಗ ಸಣ್ಣ ರೈತರಿಗೆ ಆರ್ಥಿಕ ಸಹಾಯ ದೊರೆಯುತ್ತದೆ. ಹೈನುಗಾರಿಕೆ ಒಂದು ಉದ್ಯಮವಾಗಿ ಬೆಳೆಯುತ್ತದೆ ಎಂಬುವುದನ್ನು ರೈತರಲ್ಲಿ ಅರಿವು ಮೂಡಿಸಿದಾಗ ಸಹಜವಾಗಿ ರೈತರ ಆದಾಯ ಹೆಚ್ಚುತ್ತದೆ. ಪ್ರತಿಬಾರಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವ ಬದಲು ತೋಟಗಾರಿಕೆ ಮತ್ತು ಇತರೆ ಹೆಚ್ಚಿನ ಮೌಲ್ಯದ ಬೆಳೆಗಳನ್ನು ಬೆಳೆಸಲು ಉತ್ತೇಜಿಸಬೇಕು. ಅವರು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಒದಗಿಸುವ ಕಾರ್ಯ ಮಾಡಬೇಕು ಎಂದು ಸೂಚಿಸಿದರು.ತಾಲೂಕುವಾರು ಸಾಗುವಳಿ ಭೂಮಿ, ನೀರಾವರಿ ಲಭ್ಯತೆ, ಪರಿವರ್ತನೆಗಿರುವ ಪ್ರದೇಶ, ಹಣಕಾಸಿನ ಅಗತ್ಯತೆ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಲಕ್ಷಣ ಕಳ್ಳೆನವರ, ಉಪನಿರ್ದೇಶಕ ಎಲ್.ಐ. ರೂಡಗಿ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಠಿ, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಎಸ್ ಎಚ್ ಕರಡಿಗುಡಿ ಸೇರಿದಂತೆ ಇತರರು ಇದ್ದರು.ಸಾಮಾಜಿಕ ಅರಣ್ಯ ಪ್ರದೇಶಗಳಲ್ಲಿ ಒಂದೇ ರೀತಿಯ ಸಸಿಗಳನ್ನು ನೆಡುವ ಬದಲು ವಿವಿಧ ಜಾತಿಯ ಹಣ್ಣು ಹಾಗೂ ಜನಸ್ನೇಹಿ ಗಿಡ ನೆಡುವುದರಿಂದ ಪ್ರಾಣಿ ಪಕ್ಷಿಗಳು ಮತ್ತು ಜನರಿಗೂ ಅನುಕೂಲವಾಗಲಿದೆ. ಪರಿಸರ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಅರಣ್ಯ ಪ್ರದೇಶದಲ್ಲಿ ಮಳೆ ನೀರು ಹರಿದು ಒಂದೆಡೆ ಸೇರುವ ಜಾಗಗಳಲ್ಲಿ ಸೂಕ್ತ ರೀತಿಯಲ್ಲಿ ಶೇಖರಿಸಿ ಬಳಸಲು ಚಿಕ್ಕ ಕಾಲುವೆ ರೀತಿಯ ಯೋಜನೆ ಹಾಕಿಕೊಳ್ಳಬೇಕು.
- ಸಂಗಪ್ಪ ಎಂ. ಜಿಲ್ಲಾಧಿಕಾರಿ