ಇ- ಸ್ವತ್ತು ನೀಡಲು ಕ್ರಮ ಕೈಗೊಳ್ಳಿ: ಶಾಸಕ ಶ್ರೀನಿವಾಸ ಮಾನೆ

| Published : Jul 19 2025, 02:00 AM IST

ಇ- ಸ್ವತ್ತು ನೀಡಲು ಕ್ರಮ ಕೈಗೊಳ್ಳಿ: ಶಾಸಕ ಶ್ರೀನಿವಾಸ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂದಿನ ಕೆಲ ತಿಂಗಳಲ್ಲಿ ಬಾಕಿ ಉಳಿದಿರುವ ಎಲ್ಲ 5 ಸಾವಿರ ಸ್ವತ್ತುಗಳಿಗೆ ಇ- ಸ್ವತ್ತು ಒದಗಿಸಬೇಕು. ಈ ವಿಷಯದಲ್ಲಿ ಅನಗತ್ಯ ವಿಳಂಬ, ನೆಪ ಹೇಳುವುದನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.

ಹಾನಗಲ್ಲ: ಪುರಸಭೆ ವ್ಯಾಪ್ತಿಗೆ ಒಳಪಡುವ ಎಲ್ಲ ಆಸ್ತಿಗಳಿಗೆ ಇ- ಸ್ವತ್ತು ಒದಗಿಸಲು ಕ್ರಮ ಕೈಗೊಳ್ಳಬೇಕು. ನಗರದ ಕರ್ನಾಟಕ ಒನ್ ಕೇಂದ್ರಗಳಿಂದ ಅರ್ಜಿ ಸಲ್ಲಿಸುವ ವ್ಯವಸ್ಥೆ ಕಲ್ಪಿಸಬೇಕು. ಅರ್ಜಿ ಶುಲ್ಕ ತಾವೇ ಭರಿಸುವುದಾಗಿ ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಪುರಸಭೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಾರ್ವಜನಿಕರಿಗೆ ಇ-ಸ್ವತ್ತು ಒದಗಿಸಲು ತಾಂತ್ರಿಕ ಕಾರಣಗಳ ನೆಪವೊಡ್ಡಲಾಗುತ್ತಿದೆ. ಈ ಬಗ್ಗೆ ದೂರುಗಳು ಹೆಚ್ಚಿವೆ. ಇನ್ನು ಮುಂದೆ ಅಗತ್ಯ ದಾಖಲೆಗಳೊಂದಿಗೆ ನಗರದ ಎಲ್ಲ ಕರ್ನಾಟಕ ಒನ್ ಕೇಂದ್ರಗಳಿಂದಲೇ ಅರ್ಜಿ ಸಲ್ಲಿಸುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಿ. ಕೇಂದ್ರಗಳಲ್ಲಿ ಅರ್ಜಿ ಶುಲ್ಕ ಸಾರ್ವಜನಿಕರಿಂದ ಪಡೆಯಬಾರದು. ಆ ಶುಲ್ಕ ನಾನೇ ಭರಿಸುವೆ. ಮುಂದಿನ ಕೆಲ ತಿಂಗಳಲ್ಲಿ ಬಾಕಿ ಉಳಿದಿರುವ ಎಲ್ಲ 5 ಸಾವಿರ ಸ್ವತ್ತುಗಳಿಗೆ ಇ- ಸ್ವತ್ತು ಒದಗಿಸಬೇಕು. ಈ ವಿಷಯದಲ್ಲಿ ಅನಗತ್ಯ ವಿಳಂಬ, ನೆಪ ಹೇಳುವುದನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಸೂಚಿಸಿದರು.ಇಂದಿರಾ ನಗರ, ವಿಜಯನಗರ, ರಾಜೀವ್ ನಗರ, ಮಕ್ಬೂಲಿಕಾ ನಗರದ ಗಟಾರ ನೀರು ಅಕ್ಕಪಕ್ಕದ ಹೊಲ, ಗದ್ದೆಗಳಿಗೆ ಹರಿಯುತ್ತಿರುವ ಬಗ್ಗೆ ರೈತರು ದೂರು ಸಲ್ಲಿಸುತ್ತಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ರೈತರಿಗೆ ಅನಾನುಕೂಲ ಉಂಟಾಗದಂತೆ ಗಮನ ಹರಿಸಿ ಎಂದರು.ನವನಗರದ ಮೌಲಾನಾ ಆಜಾದ್ ಶಾಲೆಯ ಸನಿಹದಲ್ಲಿ ತೆರೆದ ಬಾವಿ ಅಪಾಯ ಆಹ್ವಾನಿಸುತ್ತಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ ಶಾಸಕ ಮಾನೆ, ಪುರಸಭೆ ಜಾಗದಲ್ಲಿ ಸ್ಲಂ ಬೋರ್ಡ್‌ನಿಂದ ಮನೆ ಕಟ್ಟಿಕೊಂಡಿರುವ ಬಡ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅಡ್ಡಿಯಾಗದಂತೆ ವಾಸಯೋಗ್ಯ ಪ್ರಮಾಣಪತ್ರ ಪೂರೈಸುವಂತೆ ಸೂಚಿಸಿದ ಶ್ರೀನಿವಾಸ ಮಾನೆ, ಪುರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆ, ನಿರ್ವಹಣೆ, ನಿರಂತರ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಅಮೃತ 2.0 ಯೋಜನೆಯ ಕಾಮಗಾರಿಗಳ ಪ್ರಗತಿ ಕುರಿತು ಮಾಹಿತಿ ಪಡೆದರು.ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಮುಖ್ಯಾಧಿಕಾರಿ ಜಗದೀಶ ವೈ.ಕೆ., ಅಭಿಯಂತರ ನಾಗರಾಜ ಮಿರ್ಜಿ ಸೇರಿದಂತೆ ಇ- ಸ್ವತ್ತು ನಿರ್ವಾಹಕರು, ತೆರಿಗೆ ಸಂಗ್ರಹಕಾರರು, ಕರ್ನಾಟಕ ಒನ್ ಪ್ರತಿನಿಧಿಗಳು ಇದ್ದರು.