ವನ್ಯಜೀವಿಗಳಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಿ

| Published : Jan 25 2024, 02:06 AM IST

ಸಾರಾಂಶ

ಗುಂಡ್ಲುಪೇಟೆಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲು ಬಂಡೀಪುರ ಅರಣ್ಯ ಇಲಾಖೆಗೆ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ಸೂಚಿಸಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಅರಣ್ಯ ಪ್ರದೇಶ ವೀಕ್ಷಿಸಿದ ನಂತರ ಮಾತನಾಡಿದ ಅವರು, ಅರಣ್ಯದಲ್ಲಿ ಪ್ರಾಣಿಗಳು ಹೆಚ್ಚಾಗಿ ಸಂಚರಿಸುವ ಪ್ರದೇಶಗಳಲ್ಲಿ ನೀರುಗುಂಡಿ (ವಾಟರ್ ಹೋಲ್) ಗಳಿಗೆ ಸೌರ ಪಂಪ್ ಸೆಟ್ ಗಳ ಮೂಲಕ ನೀರು ಹಾಯಿಸಿ ಎಂದರು.

ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಖಡಕ್ ಸೂಚನೆ । ಅರಣ್ಯದೊಳಗೆ ಕಳ್ಳಬೇಟೆ ತಡೆ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಬೇಸಿಗೆಯಲ್ಲಿ ವನ್ಯಜೀವಿಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲು ಬಂಡೀಪುರ ಅರಣ್ಯ ಇಲಾಖೆಗೆ ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ಸೂಚಿಸಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಅರಣ್ಯ ಪ್ರದೇಶ ವೀಕ್ಷಿಸಿದ ನಂತರ ಮಾತನಾಡಿದ ಅವರು, ಅರಣ್ಯದಲ್ಲಿ ಪ್ರಾಣಿಗಳು ಹೆಚ್ಚಾಗಿ ಸಂಚರಿಸುವ ಪ್ರದೇಶಗಳಲ್ಲಿ ನೀರುಗುಂಡಿ (ವಾಟರ್ ಹೋಲ್) ಗಳಿಗೆ ಸೌರ ಪಂಪ್ ಸೆಟ್ ಗಳ ಮೂಲಕ ನೀರು ಹಾಯಿಸಿ ಎಂದರು.

ಈ ಬಾರಿ ಮಳೆಯ ಕೊರತೆಯಿಂದಾಗಿ ಕಾಡಿನಲ್ಲಿರುವ ನೀರುಗುಂಡಿಗಳಲ್ಲಿ ಜಲ ಸಂಗ್ರಹ ಕಡಿಮೆಯಾಗಿದ್ದು, ಅಗತ್ಯವಿರುವ ಕಡೆ ಕೊಳವೆ ಬಾವಿ ಕೊರೆಸಿ, ಸೌರ ಪಂಪ್ ಸೆಟ್ ಮೂಲಕ ನೀರು ಹರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸೌರ ಫಲಕಗಳ ಸುತ್ತ ಆನೆಗಳು ದಾಳಿ ಮಾಡದ ರೀತಿ ರೈಲ್ವೆ ಬ್ಯಾರಿಕೇಡ್ ಹಾಕುವಂತೆ ಸೂಚಿಸಿದ ಸಚಿವರು, ನಿಯಮಿತವಾಗಿ ಜಲಗುಂಡಿಗಳ ಜಲ ಸಂಗ್ರಹದ ಸ್ಥಿತಿಯ ಬಗ್ಗೆ ನಿಗಾ ಇಡಲು ಸೂಚಿಸಿದ್ದಾರೆ. ಸಾಮಾನ್ಯವಾಗಿ ಜನವರಿ ಅಂತ್ಯದಿಂದ ಏಪ್ರಿಲ್ ಮಧ್ಯಭಾಗದವರೆಗೆ ಕಾಡ್ಗಿಚ್ಚಿನ ಭೀತಿಯಿದ್ದು, ಈ ಹಿನ್ನೆಲೆ ಕಾಡಿನಲ್ಲಿ ಕಟ್ಟೆಚ್ಚರ ವಹಿಸುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಡ್ಗಿಚ್ಚು ವೀಕ್ಷಕರನ್ನು ನಿಯೋಜಿಸಬೇಕು. ಕಾಡಿನಲ್ಲಿ ಸಣ್ಣ ಕಿಡಿ ಕಾಣಿಸಿಕೊಂಡರೂ ತಕ್ಷಣವೇ ಅದನ್ನು ನಂದಿಸಲು ಕ್ರಮ ವಹಿಸಲು ತಿಳಿಸಿದರು. ಆದಿವಾಸಿಗಳು ಸಾಂಪ್ರದಾಯಿಕವಾಗಿ ಕಾಡ್ಗಿಚ್ಚು ನಿಯಂತ್ರಿಸುವಲ್ಲಿ ಪರಿಣಿತರಾಗಿದ್ದು, ಅವರ ಸೇವೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಹಾಗೂ ಉದ್ದೇಶ ಪೂರ್ವಕವಾಗಿ ಕಾಡಿನಲ್ಲಿ ಬೆಂಕಿ ಹಚ್ಚುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದರು.ಫೈರ್‌ ಲೈನ್‌ ವೀಕ್ಷಣೆ:

ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಅರಣ್ಯದೊಳಗೆ ಇರುವ ರಾಜ್ಯ ಹೆದ್ದಾರಿಗಳಲ್ಲಿ ಆಕಸ್ಮಾತ್ ಬೆಂಕಿ ದುರಂತ ಸಂಭವಿಸಿದರೂ ಅದು ಕಾಡಿಗೆ ವ್ಯಾಪಿಸದಂತೆ ಇಲಾಖೆ ಮಾಡುತ್ತಿರುವ ಅಗ್ನಿ ನಿಯಂತ್ರಣ ರೇಖೆ (ಫೈರ್ ಲೈನ್) ಯನ್ನು ವೀಕ್ಷಿಸಿದರು. ಅರಣ್ಯದಲ್ಲಿನ ಬೆಲೆ ಬಾಳುವ ಮರಗಳ ಕಳವು ತಡೆಯಲು ಮತ್ತು ವನ್ಯಜೀವಿಗಳ ಕಳ್ಳಬೇಟೆ ತಡೆಯಲು ಅರಣ್ಯದೊಳಗೆ ನಿರ್ಮಿಸಲಾಗಿರುವ ಕಳ್ಳಬೇಟೆ ತಡೆ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಷ್ಟ, ಸುಖ ವಿಚಾರಣೆ:

ಕಾಡಿನಲ್ಲಿ ದಿನವಿಡೀ ಅರಣ್ಯ ಕಾವಲು ಕಾಯುವ ಸಿಬ್ಬಂದಿಯ ಕಷ್ಟ-ಸುಖ ವಿಚಾರಿಸಿದ ಸಚಿವರು, ಸಿಬ್ಬಂದಿಯ ಅಡುಗೆ ಕೋಣೆಗೂ ಭೇಟಿ ನೀಡಿ ಪರಿಶೀಲಿಸಿದರು. ಕಾಡಿನಲ್ಲಿ ಹುಲ್ಲು ಬೆಳೆಯದಂತೆ ವ್ಯಾಪಿಸುತ್ತಿರುವ ಲಾಂಟನಾ ಕಳೆಯ ಸಮಸ್ಯೆಯನ್ನು ನಿವಾರಿಸಿ ಅರಣ್ಯ ಉಳಿಸಲು ಆದಿವಾಸಿ ಸ್ಥಳೀಯರ ನೆರವು ಪಡೆದು, ಮಹಾತ್ಮಾಗಾಂಧೀ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ನೆರವು ಪಡೆದು ಸಮಸ್ಯೆಗೆ ಪರಿಹಾರ ಒದಗಿಸಲು ಸೂಚಿಸಿದರು.

ಸಚಿವರೊಂದಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆಯ ಮುಖ್ಯಸ್ಥ ಬಿ.ಕೆ. ದಿಕ್ಷೀತ್‌, ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯವನ್ಯ ಜೀವಿ ಪರಿಪಾಲಕ ಸುಭಾಷ್‌ ಮಾಲ್ಕಡೆ, ಸಚಿವರ ಕಾರ್ಯದರ್ಶಿ ಎ.ಆರ್.ರವಿ ಇದ್ದರು.