ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಒದಗಿಸಲು ಕ್ರಮ ವಹಿಸಿ: ನಲಿನ್ ಅತುಲ್

| Published : May 22 2024, 12:45 AM IST

ಸಾರಾಂಶ

ಬಿತ್ತನೆಗಾಗಿ ರೈತರಿಗೆ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರ ಒದಗಿಸಬೇಕು.

ಜಿಲ್ಲಾ ಮಟ್ಟದ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಉಪ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಕಾರ್ಯಕ್ಕೆ ಸಿದ್ದತೆ ಆರಂಭಿಸಿದ್ದಾರೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದೊರೆಯುವಂತೆ ಅಗತ್ಯ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕೃಷಿ ಹಾಗೂ ಕೃಷಿ ಸಂಬoಧಿತ ಇಲಾಖೆಗಳ ಉಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಿತ್ತನೆಗಾಗಿ ರೈತರಿಗೆ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರ ಒದಗಿಸಬೇಕು. ಕಳಪೆ ಹಾಗೂ ಕಲಬೆರಕೆ ಬೀಜ, ಗೊಬ್ಬರ ಮಾರಾಟಗಾರರ ಬಗ್ಗೆ ಇಲಾಖೆಯ ಕೃಷಿ ವಿಚಕ್ಷಣ ದಳದ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಅಗತ್ಯ ದಾಸ್ತಾನು ಮಾಡಿಕೊಂಡು, ಯಾವುದೇ ಕೊರತೆ ಆಗದಂತೆ ರೈತರಿಗೆ ಅನುಕೂಲ ಕಲ್ಪಿಸಬೇಕು. ರೈತರಿಂದ ಬರುವ ದೂರುಗಳಿಗೆ ತುರ್ತಾಗಿ ಸ್ಪಂದಿಸಿ, ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

2023-24ನೇ ಸಾಲಿನ ಬರಗಾಲದಿಂದ ಉಂಟಾದ ಬೆಳೆ ಹಾನಿಗೆ ಸರ್ಕಾರದಿಂದ ನೇರವಾಗಿ ರೈತರ ಖಾತೆಗೆ ಬೆಳೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತಿದೆ. ಬೆಳೆ ಪರಿಹಾರ ಜಮೆ ಆಗದ ರೈತರ ಬ್ಯಾಂಕ್ ಖಾತೆ ಅಥವಾ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲು ಸಹಾಯವಾಣಿ ಕೂಡ ತೆರೆಯಲಾಗಿದೆ. ಜಿಲ್ಲೆಯ ರೈತರಲ್ಲಿ ಶೇ.85ರಷ್ಟು ರೈತರ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಲಾಗಿದೆ. ಬಾಕಿ ಉಳಿದ ರೈತರ ಬ್ಯಾಂಕ್ ಖಾತೆ, ಫ್ರೂಟ್ಸ್ ಐಡಿ, ಮುಂತಾದ ಸಮಸ್ಯೆಗಳಿಗೆ ಸಂಬoಧಿಸಿದ ಇಲಾಖೆ ಅಧಿಕಾರಿಗಳು ಸ್ಪಂದಿಸಿ ದೋಷ ಸರಿಪಡಿಸಬೇಕು. ಬ್ಯಾಂಕ್‌ಗಳು ರೈತರ ಬೆಳೆ ಹಾನಿ ಮೊತ್ತವನ್ನು ಅವರ ಸಾಲದ ಖಾತೆಗೆ ಜಮೆ ಮಾಡಬಾರದು ಎಂದು ಆದೇಶಿಸಲಾಗಿದೆ. ಆದೇಶವನ್ನು ಮೀರಿದ ಬ್ಯಾಂಕ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬ್ಯಾಂಕ್‌ನಲ್ಲಿ ಉಂಟಾಗುವ ಯಾವುದೇ ತೊಂದರೆಗಳಿಂದ ರೈತರಿಗೆ ಸಮಸ್ಯೆ ಉಂಟಾಗಬಾರದು. ಅಂತಹ ತಾಂತ್ರಿಕ ಸಮಸ್ಯೆಗಳನ್ನು ತುರ್ತಾಗಿ ಸರಿಪಡಿಸಿಕೊಂಡು ರೈತರಿಗೆ ಶೀಘ್ರ ಪರಿಹಾರ ದೊರಕಿಸಿಕೊಡುವುದು ಬ್ಯಾಂಕ್‌ಗಳ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ, ಕಳೆದ ಸಾಲಿಗಿಂತ ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿದ್ದು, ಈಗಾಗಲೇ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 2,32,573 ಹೆಕ್ಟೇರ್‌ ಏಕದಳ ಧಾನ್ಯ, 38086 ಹೆ. ದ್ವಿದಳ ಧಾನ್ಯಗಳು, 24388 ಹೆ. ಎಣ್ಣೆ ಕಾಳುಗಳು, 12953 ಹೆ. ವಾಣಿಜ್ಯ ಬೆಳೆಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 308000 ಹೆ. ಕ್ಷೇತ್ರವಿದೆ. ಮೇ ಮಾಹೆಯ ರಸಗೊಬ್ಬರ ಬೇಡಿಕೆ 16,149 ಟನ್‌ಗಳಷ್ಟಿದ್ದು, ಮೇ 20 ರಂತೆ 11,596 ಟನ್ ರಸಗೊಬ್ಬರ ಸರಬರಾಜು ಆಗಿದೆ. ಒಟ್ಟು ದಾಸ್ತಾನು 55,061 ಟನ್ ಇದ್ದು, 8,570 ಟನ್ ರಸಗೊಬ್ಬರ ಮಾರಾಟವಾಗಿ ಮೇ 20ಕ್ಕೆ 46,491 ಟನ್ ರಸಗೊಬ್ಬರ ದಾಸ್ತಾನು ಇದೆ. ಸದ್ಯಕ್ಕೆ ಯಾವುದೇ ರೀತಿಯ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ. ಬೆಳೆ ಪರಿಹಾರ ಕಾರ್ಯ ಚಾಲ್ತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ವೀರೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಬಾಕ್ಸ್‌

ಜಿಲ್ಲೆಯಲ್ಲಿ ಕೃಷಿ ಮೇಳ ಆಯೋಜಿಸಿ

ಕೃಷಿ ಸಂಬoಧಿತ ಇಲಾಖೆಗಳಾದ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶು ಸಂಗೋಪನಾ ಇಲಾಖೆಗಳ ಸಹಯೋಗದಲ್ಲಿ ಜಿಲ್ಲೆಯಲ್ಲಿ ಕೃಷಿ ಮೇಳ ಆಯೋಜಿಸಬೇಕು. ಮೇಳದಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ, ಆಧುನಿಕ ಕೃಷಿ ತಂತ್ರಜ್ಞಾನ, ಸರ್ಕಾರದ ಯೋಜನೆಗಳು, ಸಾಲ ಸೌಲಭ್ಯಗಳು, ಮಿಶ್ರ ಹಾಗೂ ಸಾವಯವ ಬೇಸಾಯ, ಋತುಮಾನಾಧಾರಿತ ತೋಟಗಾರಿಕೆ ಬೆಳೆಗಳು, ಮಾರುಕಟ್ಟೆ ಸೌಲಭ್ಯ, ಬೆಳೆಗಳ ಮೌಲ್ಯವರ್ಧನೆ ಮುಂತಾದವುಗಳ ಕುರಿತು ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಲು ಮಳಿಗೆ ಸ್ಥಾಪಿಸಬೇಕು. ಸಮಗ್ರ ಬೇಸಾಯದ ಬಗ್ಗೆ ತಜ್ಞರ ಮೂಲಕ, ಯಶಸ್ವಿ ರೈತರ ಮೂಲಕ ಮಾಹಿತಿ ಕೊಡಿಸಬೇಕು. ಈ ಬಗ್ಗೆ ಕೃಷಿ ಇಲಾಖೆ ಹಾಗೂ ಕೃಷಿ ಸಂಬoಧಿತ ಇಲಾಖೆಗಳು ಒಟ್ಟಾಗಿ ಪರಸ್ಪರ ಚರ್ಚಿಸಿ ಸೂಕ್ತ ಯೋಜನೆ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಿಳಿಸಿದರು.21ಕೆಪಿಎಲ್25 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಕೃಷಿ ಹಾಗೂ ಕೃಷಿ ಸಂಬoಧಿತ ಇಲಾಖೆಗಳ ಉಪ ಸಮಿತಿ ಸಭೆ ನಡೆಯಿತು.