ಜಿಲ್ಲೆಯಲ್ಲಿ ನಕಲಿ ಆಸ್ಪತ್ರೆ ನಡೆಸುತ್ತಿರುವ ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸುವ ಜತೆಗೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಆಗುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಪಾಂಡ್ವೆ ರಾಹುಕ್‌ ತುಕಾರಾಂ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯಲ್ಲಿ ನಕಲಿ ಆಸ್ಪತ್ರೆ ನಡೆಸುತ್ತಿರುವ ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸುವ ಜತೆಗೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಆಗುವಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಪಾಂಡ್ವೆ ರಾಹುಕ್‌ ತುಕಾರಾಂ ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಪಿಸಿ ಪಿಎನ್ ಡಿಟಿ, ಎಂ.ಟಿ.ಪಿ ಹಾಗೂ ಕೋಟ್ಪ, ತಂಬಾಕು ನಿಯಂತ್ರಣ ಕೋಶದ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಅನಧಿಕೃತ, ನೋಂದಾಯಿತವಲ್ಲದ, ನಿಗದಿತ ವಿದ್ಯಾರ್ಹತೆ ಇಲ್ಲದ ನಕಲಿ ವೈದ್ಯರಿಂದ ನಡೆಸಲ್ಪಡುವ ಆಸ್ಪತ್ರೆಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಕೆಪಿಎಮ್ಇ ಕಾಯ್ದೆಯಡಿ ಆಸ್ಪತ್ರೆಗಳು ಕಡ್ಡಾಯವಾಗಿ ನೋಂದಣಿಯಾಗಿರಬೇಕು. ಇದುವರೆಗೆ ನಕಲಿ ವೈದ್ಯರ ವಿರುದ್ಧ ಎಫ್ಐಆರ್ ಆಗಿದ್ದರೂ ಕಾನೂನು ಕ್ರಮ ಆಗದೇ ಇರುವವರ ವಿರುದ್ಧ ಸೂಕ್ತ ಕ್ರಮ ಆಗುವಂತೆ ನೋಡಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಆರೋಗ್ಯ ಇಲಾಖೆ ಕಾರ್ಯವೈಖರಿ ಮೇಲೆ ತೀವ್ರ ನಿಗಾ ಇಡಲಾಗುವುದು ಎಂದು ಎಚ್ಚರಿಸಿದರು.

ತಂಬಾಕು ಮಾರಾಟಗಾರರ ವಿರುದ್ಧ ಕ್ರಮ : ತಂಬಾಕು ಪದಾರ್ಥ ಮಾರಾಟಗಾರರ ವಿರುದ್ಧ ನಿಯಮಾನುಸಾರ ಕ್ರಮಕ್ಕೆ ಸೂಚನೆ ನೀಡಿ ಡಿಸಿ ಪಾಂಡ್ವೆ, ಜಿಲ್ಲೆ, ತಾಲೂಕು ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ತಂಬಾಕು ಮಾರಾಟ ಪರವಾನಿಗೆ ಪಡೆಯದ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ಶಾಲೆಗಳ ವ್ಯಾಪ್ತಿಯಲ್ಲಿ ನೂರು ಮೀಟರ್ ಒಳಗಡೆ ತಂಬಾಕು ಮಾರಾಟಗಾರರ ಪರವಾನಗಿ ರದ್ದತಿಗೆ ಕ್ರಮ ಕೈಗೊಳ್ಳಬೇಕು. 1241 ಶಾಲೆ ಹಾಗೂ 68 ಕಾಲೇಜುಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿ ಘೋಷಿಸಲಾಗಿದೆ ಎಂದು ಡಿಸಿ ಪಾಂಡ್ವೆ ಹೇಳಿದರು.

ಹೆಚ್ಚುವರಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರಣೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಶ ಬಿರಾದಾರ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಂ.ಎಸ್. ಪಾಟೀಲ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಜ್ಯೋತಿ ಕಟ್ಟಿಮನಿ, ಹಾಗೂ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪಿಸಿ, ಪಿಎನ್ಡಿಟಿ ಸಭೆ: ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆಯಡಿ ಅನಧಿಕೃತವಾಗಿ ಅಲ್ಟ್ರಾಸೋನೋಗ್ರಾಫಿ ಬಳಕೆಯಾಗದಂತೆ ತೀವ್ರ ನಿಗಾ ಇಡಬೇಕು. ಈ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ವೈದ್ಯರಿಗೆ ಈ ಪಿಸಿ ಪಿಎನ್ ಡಿಟಿ ಕಾಯ್ದೆ ಹಾಗೂ ತಿದ್ದುಪಡಿಗಳ ಬಗ್ಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಂಡು ಸೂಕ್ತ ಮಾಹಿತಿ ನೀಡಬೇಕು. ಜಿಲ್ಲೆಯ ಲಿಂಗಾನುಪಾತದಲ್ಲಿ ವ್ಯತ್ಯಾಸಕ್ಕೆ ಕಾರಣಗಳೇನು ಎಂಬುದನ್ನು ತಿಳಿಯುವ ಜತೆಗೆ ಯಾದಗಿರಿ, ವಡಗೇರಾ ಹಾಗೂ ಶೋರಾಪುರ ತಾಲೂಕುಗಳ ಬಗ್ಗೆ ಅವಶ್ಯಕ ನಿಗಾ ವಹಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ, ಕಾನೂನಿನ ವಿರುದ್ಧ ವೈದ್ಯಕೀಯ ಗರ್ಭಪಾತ ಮಾತ್ರೆಗಳ ಮಾರಾಟದ ಬಗ್ಗೆ ಔಷಧೀಯ ಅಂಗಡಿಗಳ ಮೇಲೆ ತೀವ್ರ ನಿಗಾ ಇಡಬೇಕು. ಈ ಕುರಿತು ಗಮನ ನೀಡುವಂತೆಯೂ ಜಿಲ್ಲಾಧಿಕಾರಿ ರಾಹುಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.