ಕೆಚ್ಚಲು ಕೊಯ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ

| Published : Jan 19 2025, 02:17 AM IST

ಸಾರಾಂಶ

ದಾವಣಗೆರೆ: ಬೆಂಗಳೂರಿನಲ್ಲಿ ಗೋವುಗಳ ಕೆಚ್ಚಲು ಕತ್ತರಿಸಿ, ಪೈಶಾಚಿಕ ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಗೋ ಸಂರಕ್ಷಣಾ ಸಂವರ್ಧನಾ ಸಮಿತಿ ನೇತೃತ್ವದಲ್ಲಿ ಸಂಘ ಪರಿವಾರ, ಬಿಜೆಪಿಯಿಂದ ಗೋವುಗಳ ಸಮೇತ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ದಾವಣಗೆರೆ: ಬೆಂಗಳೂರಿನಲ್ಲಿ ಗೋವುಗಳ ಕೆಚ್ಚಲು ಕತ್ತರಿಸಿ, ಪೈಶಾಚಿಕ ಕೃತ್ಯ ಎಸಗಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಗೋ ಸಂರಕ್ಷಣಾ ಸಂವರ್ಧನಾ ಸಮಿತಿ ನೇತೃತ್ವದಲ್ಲಿ ಸಂಘ ಪರಿವಾರ, ಬಿಜೆಪಿಯಿಂದ ಗೋವುಗಳ ಸಮೇತ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.ನಗರದ ಶ್ರೀ ಜಯದೇವ ವೃತ್ತದಲ್ಲಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮನೆ ಬಳಿ ಕಟ್ಟಿದ್ದ ಮೂರು ಹಸುಗಳ ಕೆಚ್ಚಲನ್ನು ಕೊಯ್ದ ದುಷ್ಕರ್ಮಿಗಳ ಕೃತ್ಯವು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿಯಾಗಿದ್ದು, ಕೃತ್ಯ ಎಸಗಿದ ದುಷ್ಕರ್ಮಿಗಳು, ಅದರ ಹಿಂದಿರುವ ಕಾಣದ ಕೈಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಅಶ್ವತ್ಥ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು.

ಈ ವೇಳೆ ಮಾತನಾಡಿದ ಸಂಘಟನೆ ಮುಖಂಡ ಸತೀಶ ಪೂಜಾರಿ, ಮುಕ್ಕೋಟಿ ದೇವತೆಗಳ ಆವಾಸ ಸ್ಥಾನವಾದ ಗೋಮಾತೆಯ ಕೆಚ್ಚಲನ್ನೇ ಕತ್ತರಿಸಿ, ವಿಕೃತಿ ಮೆರೆದಿರುವುದು ದೇಶದ ಕೋಟ್ಯಾಂತರ ಗೋ ಆರಾಧಕರು ಇಟ್ಟಿರುವ ಭಾವನೆಗಳಿಗೆ ಕೊಳ್ಳಿ ಇಟ್ಟಂತೆ ಆಗಿದೆ. ಕರಳು ಹಿಂಡುವ ಇಂತಹ ದುಷ್ಕೃತ್ಯಗಳು ಇನ್ನು ಮುಂದೆ ಮರುಕಳಿಸದಂತೆ ತಡೆಯಬೇಕು ಎಂದು ಆಗ್ರಹಿಸಿದರು.

ಹಸುಗಳ ಕೆಚ್ಚಲನ್ನು ಕೊಯ್ದ ದುಷ್ಕರ್ಮಿಯು ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದಾಗಿ, ಕುಡಿದ ಅಮಲಿನಲ್ಲಿ ಕೃತ್ಯ ಎಸಗಿದ್ದಾಗಿ ಸ್ವತಃ ಗೃಹ ಸಚಿವರಾದಿಯಾಗಿ ಅನೇಕರು ಬಿಂಬಿಸುತ್ತಿರುವುದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದರು.

ಗೋವಿನ ಕೆಚ್ಚಲನ್ನು ಕತ್ತರಿಸಿದ ಅಸಲಿ ದುಷ್ಕರ್ಮಿಗಳ ಬಂಧನ ಆಗಬೇಕು. ಗೋವಿನ ಮಾಲೀಕನಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು. ಗೋವುಗಳ ರಕ್ಷಣೆ ದೃಷ್ಟಿಯಿಂದ ರೈತರಿಗೆ ಬಂದೂಕು ಪರವಾನಿಗೆ ನೀಡಬೇಕು. ಗೋವನ್ನು ರಾಷ್ಟ್ರೀಯ ಸಂಪತ್ತು ಎಂಬುದಾಗಿ ಸರ್ಕಾರ ಘೋಷಣೆ ಮಾಡಬೇಕು. ಗೋಶಾಲೆಯ ಅನುದಾನ ನಿಲ್ಲಿಸಿರುವುದನ್ನು ತಕ್ಷಣ ಬಿಡುಗಡೆ ಮಾಡಬೇಕು. ರಾಜ್ಯ ವ್ಯಾಪಿ ಗೋಶಾಲೆಗಳನ್ನು ಪುನಾರಂಭಿಸಿ, ಗೋವುಗಳ ಸಂರಕ್ಷಣೆ ಮಾಡಬೇಕು. ರಾಜ್ಯದಲ್ಲಿ ಗೋಹತ್ಯೆ ತಡೆಗೆ ಹಿಂದೆ ಇದ್ದ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ತಾಕೀತು ಮಾಡಿದರು.

ಚಾಮರಾಜಪೇಟೆ ವಿನಾಯಕ ನಗರದ ಕರ್ಣ ಎಂಬುವರ ಜೀವನಕ್ಕೆ ಆಧಾರವಾಗಿದ್ದ ಮೂರು ಗೋವುಗಳ ಕೆಚ್ಚಲನ್ನು ದುಷ್ಕರ್ಮಿಗಳು ಕೊಯ್ದಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಮತ ಬ್ಯಾಂಕ್ ರಾಜಕಾರಣ, ತುಷ್ಟೀಕರಣದ ಫಲವಾಗಿ ಮತಾಂಧ ಶಕ್ತಿಗಳ ನೀಚ ಕೃತ್ಯವಾದ್ದು, ಇಂತಹ ಮತಾಂಧ ಶಕ್ತಿಗಳ ಕೃತ್ಯಗಳು ಒಂದಲ್ಲ ಒಂದು ರೀತಿ ರಾಜ್ಯದಲ್ಲೆಡೆ ಹೆಚ್ಚುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲೇ ಪಾಕಿಸ್ತಾನ ಪರ ಜಯಘೋಷ ಕೂಗಿದ್ದು, ಲವ್ ಜಿಹಾದ್, ಸ್ಫೋಟದಂತಹ ಪ್ರಕರಣ ಕಾಂಗ್ರೆಸ್ ಆಳ್ವಿಕೆಯಲ್ಲೇ ಆಗುತ್ತವೆ. ಹಿಂದುಗಳು, ಮಠ-ಮಂದಿರಗಳ ಆಸ್ತಿಯನ್ನು ವಕ್ಫ್ ಹೆಸರಿನಲ್ಲಿ ಕಬಳಿಸುವುದೂ ಇದೇ ಸರ್ಕಾರದಲ್ಲಿ ಆಗುತ್ತಿದೆ. ಈಗ ಹಿಂದುಗಳ ಆರಾಧ್ಯ ದೈವ, ಮೂರು ಕೋಟಿಗಳು ನೆಲೆಸಿರುವುದಾಗಿ ನಂಬಿ ಪೂಜಿಸುವಂತಹ ಗೋವುಗಳ ಕೆಚ್ಚಲನ್ನೇ ಕೊಯ್ಯುವ ಮನಸ್ಥಿತಿಗೆ ಮತಾಂಧರು ಬಂದಿದ್ದಾರೆ. ಚಾಮರಾಜಪೇಟೆ ಘಟನೆಯಲ್ಲಿ ಯಾರು ಮದ್ಯದ ಅಮಲಿಲ್ಲಿ, ಬುದ್ಧಿ ಸ್ಥಿಮಿತದಲ್ಲಿ ಇಲ್ಲದವನ ಕೃತ್ಯ ಎನ್ನುತ್ತಿರುವ ಸರ್ಕಾರ ಅಸಲಿ ದುಷ್ಕರ್ಮಿಗಳನ್ನು ಸೆರೆ ಹಿಡಿಯಲಿ ಎಂದರು.

ಕಾಂಗ್ರೆಸ್ ಸರ್ಕಾರವು ಅತಿಯಾದ ತುಷ್ಟೀಕರಣಕ್ಕೆ ಟೊಂಕ ಕಟ್ಟಿ ನಿಂತಿರುವುದರಿಂದಲೇ ಇಂತಹ ದುಷ್ಕೃತ್ಯಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲದಂತಾಗಿದೆ. ನಮ್ಮ ನಾಡು ಪುಂಡ ಪೋಕರಿಗಳು, ಮತಾಂಧರ ನೆಲೆವೀಡಾಗುತ್ತಿದೆ. ಈ ದುಷ್ಕೃತ್ಯ ಎಸಗಿದ ಕ್ರೂರಿಗಳಿಗೆ ಎಚ್ಚರಿಕೆ ಪಾಠವಾಗುವಂತಹ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಲಿ ಎಂದು ಒತ್ತಾಯಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮುಖಂಡರಾದ ಲೋಕಿಕೆರೆ ನಾಗರಾಜ, ವೈ.ಮಲ್ಲೇಶ, ಬಿ.ಎಂ.ಸತೀಶ ಕೊಳೇನಹಳ್ಳಿ, ಎನ್.ಎಂ.ಮುರುಗೇಶ, ಶ್ರೀನಿವಾಸ ಟಿ.ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ, ಶ್ಯಾಮ ಪೈಲ್ವಾನ್, ನನ್ನಯ್ಯ, ಎಚ್.ಪಿ.ವಿಶ್ವಾಸ, ಟಿಂಕರ್ ಮಂಜಣ್ಣ, ಕೆಟಿಜೆ ನಗರ ಬಿ.ಆನಂದ, ನಿಂಗರಾಜ ರೆಡ್ಡಿ, ಲೋಕೇಶ, ಮಲ್ಲಿಕಾರ್ಜುನ ಅಂಗಡಿ, ಪಿ.ಎನ್.ಜಗದೀಶಕುಮಾರ ಪಿಸೆ ಇತರರು ಇದ್ದರು.