ಸಾರಾಂಶ
ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ರಕ್ತದಾನದಿಂದ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜೊತೆಗೆ ಆತ್ಮತೃಪ್ತಿ ಸಿಗುತ್ತದೆ ಎಂದು ವೈದ್ಯ ಡಾ. ಜಿ.ಎಂ. ಸೋಮೇಶ್ವರ ಹೇಳಿದರು.ಇಲ್ಲಿಗೆ ಸಮೀಪದ ಲೋಕಪ್ಪನಹೊಲ ಬಳಿಯ ಎಸ್‌ಎಲ್‌ಆರ್ ಮೆಟಾಲಿಕ್ಸ್ ಲಿಮಿಟೆಡ್ ಕಂಪನಿಯ ಆವರಣದಲ್ಲಿ ಎಸ್‌ಎಲ್‌ಆರ್ ಮೆಟಾಲಿಕ್ಸ್ ಲಿಮಿಟೆಡ್, ರೋಟರಿ ಕ್ಲಬ್, ವಿಮ್ಸ್ ಬಳ್ಳಾರಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯನಗರ ಸಹಯೋಗದಲ್ಲಿ ಉಚಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ, ಅಪಘಾತದಿಂದ ರಕ್ತಸ್ರಾವವಾಗಿ ರಕ್ತ ಕಡಿಮೆಯಾಗಿ ಅನೇಕ ಜನರು ಮೃತಪಟ್ಟಿರುವ ಘಟನಗಳು ನಡೆದಿದ್ದು, ಅಮೂಲ್ಯವಾದ ಮನುಷ್ಯನ ಜೀವ ಉಳಿಸಲು ರಕ್ತದಾನ ಮಾಡುವುದು ಅತಿ ಅಗತ್ಯವಾಗಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವುದರ ಮೂಲಕ ಇನ್ನೊಬ್ಬರ ಜೀವ ಉಳಿಸಲು ಮುಂದಾಗಿ ಎಂದು ಅವರು ಹೇಳಿದರು.ರೋಟರಿ ಕ್ಲಬ್ ಸಿಇಓ ವಿ.ಎಂ. ಹಿರೇಮಠ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಕ್ತದ ಬೇಡಿಕೆ ತುಂಬಾ ತುಂಬಾ ಹೆಚ್ಚಾಗಿದ್ದು, ಅನೇಕ ಅಪಘಾತಗಳು ಮತ್ತು ಶಸ್ತ್ರ ಚಿಕಿತ್ಸೆಗಳೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಎಸ್.ಎಲ್.ಆರ್. ಮೆಟಾಲಿಕ್ಸ್ ಕಂಪನಿಯ ಪ್ರತಿವರ್ಷ ರಕ್ತದಾನ ಮಾಡಿ ಆರೋಗ್ಯ ಇಲಾಖೆಗೆ ತುಂಬಾ ಸಹಾಯ ಮಾಡುತ್ತಿದೆ ಹಾಗೂ ಸ್ಥಳೀಯ ಸ್ವಯಂಪ್ರೇರಿತ ಸಂಘ-ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಯುವಕ ಸಂಘ ಸಂಸ್ಥೆಗಳು ಮತ್ತು ಸ್ಥಳೀಯ ಕಾರ್ಖಾನೆಗಳು ರಕ್ತದಾನದ ಶಿಬಿರಗಳನ್ನು ಏರ್ಪಡಿಸಿ ರಕ್ತದಾನ ಮಾಡುವುದರಿಂದ ಎಷ್ಟೋ ಜೀವಗಳನ್ನು ಕಾಪಾಡಿದಂತಾಗುತ್ತದೆ ಎಂದು ಅವರು ಹೇಳಿದರು.
ಮಗಿಮಾವಿನಹಳ್ಳಿ ವೈದ್ಯಾಧಿಕಾರಿ ಡಾ. ಅನುಷ ಮಾತನಾಡಿ, ರಕ್ತ ತೆಗೆದುಕೊಳ್ಳುವರಿಗಿಂತ ರಕ್ತದಾನ ಮಾಡುವವರಿಗೆ ಹೆಚ್ಚು ಲಾಭಗಳಿವೆ. ಎಸ್‌ಎಲ್‌ಆರ್ ಕಂಪನಿಯಿಂದ ಸ್ಥಳೀಯ ಆರೋಗ್ಯ ಇಲಾಖೆಗೆ ತುಂಬಾ ಸಹಾಯವಾಗಿದೆ ಮತ್ತು ಹಳ್ಳಿಯಲ್ಲಿ ಕಂಪನಿಯಿಂದ ಏರ್ಪಡಿಸುವ ಆರೋಗ್ಯ ಶಿಬಿರಗಳಿಂದ ಹಳ್ಳಿಗಳ ಸಮುದಾಯದ ಆರೋಗ್ಯ ಮಟ್ಟ ಸಹ ಚೇತರಿಕೆ ಕಂಡಿದೆ ಎಂದರು.ಎಸ್‌ಎಲ್‌ಆರ್ ಮೆಟಾಲಿಕ್ಸ್ ಲಿಮಿಟೆಡ್ ಕಂಪನಿಯ ಚೀಪ್ ಫೈನಾನ್ಸ್ ಆಫೀಸರ್ ರಜತ್ ಗೋಯೆಲ್, ಸಿ.ಓ.ಓ.ಗಳಾದ ಯೋಗೇಂದ್ರ ಚತುರ್ವೇದಿ, ಧನಂಜಯ್ ಹಾಗೂ ಕಂಪನಿಯ ಹಿರಿಯ ಅಧಿಕಾರಿಗಳು, ಓ.ಎಚ್.ಸಿ ಅಧಿಕಾರಿಗಳು, ಸಿಬ್ಬಂದಿ, ರೋಟರಿ ಬ್ಲಡ್ ಬ್ಯಾಂಕ್ ಅಧ್ಯಕ್ಷ ದೀಪಕ್ ಕಲಗಡ್ ಮತ್ತು ಸಿಬ್ಬಂದಿ ವರ್ಗ, ವಿಮ್ಸ್ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ. ಪೂಜಿತ ಮತ್ತು ಸಿಬ್ಬಂದಿ ವರ್ಗ ಹಾಗೂ ಎಸ್ಎಲ್ಆರ್ ಮೆಟಾಲಿಕ್ಸ್ ಕಂಪನಿಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಕ್ತದಾನ ಶಿಬಿರದಲ್ಲಿ ಒಟ್ಟು 130 ಬ್ಯಾಗ್ ರಕ್ತವನ್ನು ಶೇಖರಿಸಿ ಆರೋಗ್ಯ ಇಲಾಖೆಗೆ ನೀಡಲಾಗಿದೆ.