ಸಾರಾಂಶ
ಕನ್ನಡಪ್ರಭ ವಾರ್ತೆ ಮಾಲೂರು
ಕ್ರೀಡೆಗಳಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದರಿಂದ ಮೊಬೈಲ್ ಗೀಳಿನಿಂದ ಸ್ವಲ್ಪ ಕಾಲವಾದರೂ ದೂರ ಇರಬಹುದಾಗಿದ್ದು, ಇದು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು.ಪಟ್ಟಣದ ಮಾರುತಿ ಬಡಾವಣೆಯ ತಿರುಮಲ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಜಿಲ್ಲಾ ಶಾಖೆ ಕೋಲಾರ ಹಾಗೂ ತಾಲೂಕು ಶಾಖೆ ಸಹಯೋಗದಲ್ಲಿ ಕೋಲಾರ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಶೈಕ್ಷಣಿಕ ಕಾರ್ಯಾರ್ಯಗಾರದ ಸಮಾರೋಪದಲ್ಲಿ ಮಾತನಾಡಿದರು.
ಆರೋಗ್ಯಕ್ಕೆ ಬಳುವಳಿ ಕ್ರೀಡೆದೈಹಿಕ ಶಿಕ್ಷಣ ಶಿಕ್ಷಕರು ಶಾಲೆಗಳಲ್ಲಿ ಶಿಸ್ತಿಗೆ ಆದ್ಯತೆ ನೀಡಿ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗುವಂತಹ ಯೋಗ ವ್ಯಾಯಾಮ ಕ್ರೀಡೆಗಳಲ್ಲಿ ಭಾಗವಹಿಸಲು ಮಾರ್ಗದರ್ಶನ ಮಾಡಬೇಕು. ಯೋಗ ವ್ಯಾಯಾಮ ಕ್ರೀಡೆಗಳು ವಿದ್ಯಾರ್ಥಿಗಳು ಹಾಗೂ ಯುವಕರ ದೈಹಿಕ ಆರೋಗ್ಯಕ್ಕಾಗಿ ಬಳುವಳಿಯಾಗಿದೆ, ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ವಿದ್ಯಾರ್ಥಿಗಳ ಶಿಸ್ತು ಹಾಗೂ ಕ್ರೀಡೆಗಳಿಗೆ ಆದ್ಯತೆ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದರು.
ಪ್ರತಿಭಾವಂತ ಕ್ರೀಡಾಪಟುಗಳನ್ನು ತಯಾರು ಮಾಡಿ ಶಾಲೆಗಳಿಗೆ ಕೀರ್ತಿ ತರುವಂತೆ ಮಾಡಬೇಕು, ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಂಡರೆ ವಿವಿಧ ದುಶ್ಚಟಗಳಿಂದ ದೂರವಿರಬಹುದಾಗಿದೆ. ವಿದ್ಯಾರ್ಥಿಗಳು ತಂದೆ ತಾಯಿ ಗುರು ಹಿರಿಯರನ್ನು ಗೌರವಿಸಬೇಕು, ಪ್ರೀತಿ ವಾತ್ಸಲ್ಯದಿಂದ ಕಾಣುವಂತೆ ಶಿಕ್ಷಕರು ಮಕ್ಕಳಲ್ಲಿ ಮಾರ್ಗದರ್ಶನ ಮಾಡಬೇಕು ಎಂದರು.ಉಡುಗೊರೆಗೆ ಮಾರುಹೋಗಬೇಡಿ
ರಾಜ್ಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘವು ಒಗ್ಗಟ್ಟಾಗಿರುವುದರಿಂದ ಒಂದೇ ಸಂಘವಿದೆ. ಶಿಕ್ಷಕರ ಸಂಘವು ಚುನಾವಣೆಗಳಲ್ಲಿ ಗುಂಪುಗಳಾಗದೆ ರಾಜಕಾರಣಿಗಳು ನೀಡುವ ಉಡುಗೊರೆಗಳಿಗೆ ಮಾರುಹೋಗದೆ ಒಗ್ಗಟ್ಟಾಗಿ ಇತರೆ ದೈಹಿಕ ಶಿಕ್ಷಕರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಸಹಕಾರ ನೀಡಬೇಕು, ದೈಹಿಕ ಶಿಕ್ಷಣ ಶಿಕ್ಷಕರು ಒಗ್ಗಟ್ಟಾಗಿ ಸಹಕಾರ ಸಂಘ ಮಾಡಿಕೊಂಡು ಶಿಕ್ಷಕರ ಸಮಸ್ಯೆಗಳಿಗೆ ಬಳಸಿಕೊಳ್ಳಬೇಕು, ಸರ್ಕಾರ ಶಿಕ್ಷಕರನೇ ಹೆಚ್ಚಾಗಿ ಹಲವು ರೀತಿಯ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳುತ್ತದೆ ಎಂದರು.ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಬೆರೆಯಬಾರದು ಯಾವ ರಾಜಕಾರಣಿ ನಿಮ್ಮ ಜೊತೆಯಲ್ಲಿದ್ದು ನಿಮ್ಮ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಸಹಕಾರ ನೀಡುತ್ತಾರೋ ಅಂತಹವರನ್ನು ಬೆಂಬಲಿಸಿ. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳು ಸ್ವಾರ್ಥಿಗಳಾಗಿದ್ದು, ಚುನಾವಣೆಗಳಲ್ಲಿ ಗೆದ್ದ ಮೇಲೆ ಹಿಂದಿನದನ್ನು ಮರೆಯುತ್ತಾರೆ. ಚುನಾವಣೆ ಸಮೀಪಿಸಿದಾಗ ಮತ್ತೆ ಜನಗಳ ಹತ್ತಿರವಾಗುತ್ತಾರೆ. ಜನರಿಂದ ದೂರವಿರುವ ರಾಜಕಾರಣಿಗಳನ್ನು ನಂಬಬಾರದು ಎಂದರು.ಕಾಂಗ್ರೆಸ್‌ನಿಂದ ಅಂಬೇಡ್ಕರ್ ಕಡೆಗಣನೆ
ದೇಶ, ಧರ್ಮ, ಬಂದರೆ ರಾಜಿ ಆಗೋ ಜಾಯಮಾನ ನನ್ನದಲ್ಲ ಎಂದ ಮುನಿಸ್ವಾಮಿ, ಅಧಿಕಾರ ಶಾಶ್ವತವಲ್ಲ, ಅಧಿಕಾರದಲ್ಲಿದ್ದಾಗ ನಾವು ಮಾಡಿದ ಕೆಲಸ ಕಾರ್ಯಗಳು ಶಾಶ್ವತವಾಗಿರುತ್ತವೆ. ಇತ್ತೀಚಿಗೆ ಕಾಂಗ್ರೆಸ್ ರಾಜ್ಯದಲ್ಲಿ ಪ್ರಚಾರ ಹಾಗೂ ಮತ ಬ್ಯಾಂಕಿಗಾಗಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬದುಕಿದ್ದಾಗ ಕಾಂಗ್ರೆಸ್ ಅವರಿಗೆ ಗೌರವ ನೀಡಲಿಲ್ಲ. ಈಗ ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಪಕ್ಷ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚೌಡಪ್ಪ, ಜಿಲ್ಲಾಧ್ಯಕ್ಷ ಮುರುಳಿ ಮೋಹನ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ್, ತಾಲೂಕುಗಳ ದೈಹಿಕ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.