ಸ್ವಂತ ಉದ್ಯೋಗ ಕೈಗೊಂಡು ಬೇರೆಯವರಿಗೆ ಉದ್ಯೋಗ ಕೊಡಿ

| Published : May 14 2024, 01:11 AM IST

ಸಾರಾಂಶ

ಪದವಿ ನಂತರ ಮತ್ತೊಬ್ಬರ ಬಳಿ ಕೆಲಸ ಮಾಡುವುದಕ್ಕಿಂತ ಸ್ವಂತ ಉದ್ಯೋಗ ಕೈಗೊಂಡು ಬೇರೆಯವರಿಗೆ ಉದ್ಯೋಗ ಕೊಡುವಂತಾಗಬೇಕು ಎಂದು ಆರ್‌ಟಿಇಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸೀತಾ ಕೋಟಿ ಹೇಳಿದರು.

ರಾಣಿಬೆನ್ನೂರು: ಪದವಿ ನಂತರ ಮತ್ತೊಬ್ಬರ ಬಳಿ ಕೆಲಸ ಮಾಡುವುದಕ್ಕಿಂತ ಸ್ವಂತ ಉದ್ಯೋಗ ಕೈಗೊಂಡು ಬೇರೆಯವರಿಗೆ ಉದ್ಯೋಗ ಕೊಡುವಂತಾಗಬೇಕು ಎಂದು ಆರ್‌ಟಿಇಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸೀತಾ ಕೋಟಿ ಹೇಳಿದರು.

ನಗರದ ಆರ್‌ಟಿಇಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬ್ಯಾಂಕ್ ಆಫ್ ಬರೋಡಾ, ಹಾವೇರಿಯ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಸಹಯೋಗದಲ್ಲಿ 6 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಾಗಾರದ ಅಡಿಯಲ್ಲಿ ಏರ್ಪಡಿಸಲಾಗಿದ್ದ ಬ್ಯೂಟಿಪಾರ್ಲರ್ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬ್ಯಾಂಕ್ ಆಫ್ ಬರೋಡಾದ ರುಡ್‌ಸೆಟ್ ಸಂಸ್ಥೆ ನಿರ್ದೇಶಕ ಅಲ್ತಾಫ್, ಮಂಜುಳಾ ಜಯಪ್ಪ, ವಿದ್ಯಾರ್ಥಿಗಳಿಗೆ ಹೈನುಗಾರಿಕೆ, ಪಶು ಸಂಗೋಪನೆ ಟೇಲರಿಂಗ್, ಬ್ಯೂಟಿ ಪಾರ್ಲರ್ ವಿವಿಧ ತರಬೇತಿಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾ. ಸಿ. ಎ. ಹರಿಹರ ಮಾತನಾಡಿ, ವಿದ್ಯಾರ್ಥಿಗಳು ನಾಲ್ಕು ಗೋಡೆಯ ನಡುವೆ ನಿಗದಿತ ಪಾಠ ಪ್ರವಚನದ ಜತೆಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಬೇಕು. ಆ ಮೂಲಕ ಸಮಾಜದ ಜನರೊಂದಿಗೆ ಬೆರೆತು ಅವರ ನೋವು ನಲಿವುಗಳು, ಕಷ್ಟ ಸುಖ, ಕಷ್ಟ ಕಾರ್ಪಣ್ಯಗಳಲ್ಲಿ ಪಾಲ್ಗೊಂಡು ತನ್ಮೂಲಕ ವೈಯಕ್ತಿಕ ಸಾಮಾಜಿಕ ಬೆಳವಣಿಗೆಗೆ ಹಾಗೂ ರಾಷ್ಟ್ರಾಭಿವೃಧ್ದಿಗೆ ಕಾರಣರಾಗಬೇಕು ಎಂದರು. ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಡಾ. ಸರಸ್ವತಿ ಬಮ್ಮನಾಳ, ವಾಣಿಜ್ಯಶಾಸ್ತ್ರದ ಮುಖ್ಯಸ್ಥೆ ಡಾ. ಸ್ವಪ್ನಾ ಮುದಗಲ್ ಮಾತನಾಡಿದರು. ಲಕ್ಷ್ಮೀ ತರ್ಲಗಟ್ಟ ವಿದ್ಯಾರ್ಥಿನಿಯರಿಗೆ 6 ದಿನಗಳ ಕಾಲ ಬ್ಯೂಟಿ ಪಾರ್ಲರ್ ತರಬೇತಿ ನೀಡಿದರು. ಅನುಷಾ, ಡಾ.ಮಧುಕುಮಾರ ಆರ್., ಅನಿತಾ, ರಮೇಶ ಎನ್.ಜಿ., ಅಂಜನಾ ಪವಾರ, ಕವಿತಾ ಎನ್, ಭಾಗ್ಯಶ್ರೀ ಗುಂಡಗಟ್ಟಿ ಹಾಗೂ ಮಹಾವಿದ್ಯಾಲಯದ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.