ಸಾರಾಂಶ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆ । ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಏಡ್ಸ್ ಗೆ ತುತ್ತಾದ ರೋಗಿಗಳ ಆರೈಕೆ ಮಾಡುವುದು ನಾಗರಿಕರ ಸಮಾಜದ ಕರ್ತವ್ಯವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಎಲ್ ಶೆಟ್ಟಿ ಹೇಳಿದರು.
ಬುಧವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಸಾರ್ವಜನಿಕ ಆಸ್ಪತ್ರೆ, ಆಂತರಿಕ ಗುಣಮಟ್ಟ ಭರವಸೆ ಕೋಶ, ಭಾರತೀಯ ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕದ ಆಶ್ರಯದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ, ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಹಿಂದೆ ಅಪನಂಬಿಕೆಯಿಂದ, ಅರಿವಿನ ಕೊರತೆಯಿಂದ ಏಡ್ಸ್ ರೋಗಿಗಳನ್ನು ಸಮಾಜದಿಂದ ದೂರವಿಡುವ ಕೆಲಸ ಮಾಡಲಾಗಿತ್ತು. ಸರ್ಕಾರ ಮತ್ತು ವಿವಿಧ ಸಂಘ ಸಂಸ್ಥೆಗಳ ಜಾಗೃತಿ ಮೂಡಿಸಿದ ಪರಿಣಾಮ ಏಡ್ಸ್ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಕಾಲೇಜು ವಿದ್ಯಾರ್ಥಿಗಳು ಏಡ್ಸ್ ರೋಗದ ಬಗ್ಗೆ ಶಿಕ್ಷಣದಿಂದ ವಂಚಿತರಾದವರಿಗೆ, ಅರಿವಿಲ್ಲದವರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಕೋವಿಡ್ –19 ಸೋಂಕನ್ನು ನಿಯಂತ್ರಿಸಿದ ರೀತಿಯಲ್ಲಿ ಏಡ್ಸ್ ರೋಗ ಸಂಪೂರ್ಣ ನಿರ್ಮೂಲನೆಗೆ ಪ್ರತಿಯೊಬ್ಬರು ಶ್ರಮಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳ ಬೇಕು. ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸಲು ಸಾಧ್ಯ ಎಂಬುದನ್ನು ಅರಿತು ಕೊಳ್ಳಬೇಕು ಎಂದರು.
ಚಿಕ್ಕಮಗಳೂರು ರಕ್ತನಿಧಿ ಕೇಂದ್ರದ ಡಾ.ಮುರುಳೀಧರ್ ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿ, ಒಬ್ಬರ ರಕ್ತ ತೆಗೆದು ಇನ್ನೊಬ್ಬರಿಗೆ ಕೊಡುವುದು ಕಷ್ಟದ ಕೆಲಸ. ಸ್ವಯಂ ಪ್ರೇರಿತ ರಕ್ತದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸಿದ ತೃಪ್ತಿ ಇರುತ್ತದೆ. ದೇಹದಲ್ಲಿನ ಕೊಬ್ಬಿನಾಂಶ ಕಡಿಮೆಯಾಗುತ್ತದೆ. ಹೃದಯಾಘಾತ ಕಡಿಮೆಯಾಗುತ್ತದೆ. ಒಬ್ಬರು ನೀಡುವ ರಕ್ತ ದಿಂದ 3 ಜನರ ಜೀವ ಉಳಿಸಲು ಸಾಧ್ಯ ವಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪುರುಷರು ಪ್ರತಿ 3 ತಿಂಗಳಿಗೊಮ್ಮೆ, ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡ ಬಹುದು. ರಕ್ತದೊತ್ತಡ, ಮಧುಮೇಹ ಕಾಯಿಲೆ, ಹಿಮೋಗ್ಲೋಬಿನ್ ಅಂಶಕಡಿಮೆ ಇರುವವರಿಂದ ರಕ್ತ ಸ್ವೀಕರಿಸುವುದಿಲ್ಲ. ದಾನಿಗಳಾಗುವ ಮೂಲಕ ಬ್ರಾತೃತ್ವ ಬೆಳೆಸಿಕೊಳ್ಳಬೇಕು. ಇನ್ನೊಬ್ಬರ ಹೃದಯಕ್ಕೆ ಮಿಡಿಯಬೇಕು ಎಂದು ಕರೆ ನೀಡಿದರು.ಸರ್ಕಾರಿ ಆಸ್ಪತ್ರೆ ಅರವಳಿಕೆ ತಜ್ಞ ಡಾ.ವೀರಪ್ರಸಾದ್ ಏಡ್ಸ್ ಮತ್ತು ಎಚ್ ಐವಿ ಕಾಯಿಲೆ ಬಗ್ಗೆ ಮಾಹಿತಿ ನೀಡಿ, ಅಸುರಕ್ಷಿತ ಲೈಂಗಿಕ ಕ್ರಿಯೆ ಯಿಂದ, ಸಂಸ್ಕರಿಸಲಾಗದ ಸೂಜಿ, ಪರೀಕ್ಷೆ ನಡೆಸದೆ ರಕ್ತ ಪಡೆಯುವುದರಿಂದ, ಎಚ್ ಐವಿ ಪೀಡಿತ ಗರ್ಭಿಣಿಯಿಂದ ಮಗುವಿಗೆ ಏಡ್ಸ್ ಕಾಯಿಲೆ ಬರುತ್ತದೆ. ತಾಲೂಕಿನಲ್ಲಿ 104 ಜನ ಎಚ್ ಐವಿ ಪೀಡಿತರಿದ್ದಾರೆ. ಸರಿಯಾದ ಮಾರ್ಗ ಆಯ್ಕೆ ಮಾಡಿಕೊಳ್ಳಿ. ನನ್ನ ಆರೋಗ್ಯ ನನ್ನ ಹಕ್ಕು ಎಂಬುದು ಈ ವರ್ಷದ ಏಡ್ಸ್ ದಿನಾಚರಣೆ ಘೋಷಣೆಯಾಗಿದೆ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಧನಂಜಯ ಮಾತಾನಾಡಿದರು. ಸಭೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ನೆಲಗದ್ದೆ ಕಿರಣ್, ಬಿ.ಎಸ್.ಸುಬ್ರಹ್ಮಣ್ಯ, ಜುಬೇದಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಭರತ್ ಕುಮಾರ್, ಡಾ.ಆಕರ್ಷ, ಉಪನ್ಯಾಸಕರಾದ ಅಶೋಕ್, ಪ್ರಕಾಶ್ ಮತ್ತಿತರರಿದ್ದರು.33 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.