ಕಾವೇರಿ ನಾಡು ಕೊಡಗಿನ ಭೂಮಿ, ಸಂಸ್ಕೃತಿ ಹಾಗೂ ಸಮುದಾಯಗಳ ಸಂರಕ್ಷಣೆ ಮತ್ತು ಪುನರುಜ್ಜೀವನದ ಸಂಕಲ್ಪದೊಂದಿಗೆ ಕೊಡಗು ಶಕ್ತಿ ನಡಪು ಅ.3ರಂದು ನಡೆಯಲಿದೆ ಎಂದು ಪವಿತ್ರ ವಾರ್ಷಿಕ ಯಾತ್ರೆಯ ಆಯೋಜಕ ಬಲ್ಯಾಟಂಡ ಪೂಣಚ್ಚ ಮಾಚಯ್ಯ ತಿಳಿಸಿದ್ದಾರೆ.
ಮಡಿಕೇರಿ : ಕಾವೇರಿ ನಾಡು ಕೊಡಗಿನ ಭೂಮಿ, ಸಂಸ್ಕೃತಿ ಹಾಗೂ ಸಮುದಾಯಗಳ ಸಂರಕ್ಷಣೆ ಮತ್ತು ಪುನರುಜ್ಜೀವನದ ಸಂಕಲ್ಪದೊಂದಿಗೆ ಕೊಡಗು ಶಕ್ತಿ ನಡಪು ಅ.3ರಂದು ನಡೆಯಲಿದೆ ಎಂದು ಪವಿತ್ರ ವಾರ್ಷಿಕ ಯಾತ್ರೆಯ ಆಯೋಜಕ ಬಲ್ಯಾಟಂಡ ಪೂಣಚ್ಚ ಮಾಚಯ್ಯ ತಿಳಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾವೇರಿ ಮಾತೆಯ ಉಗಮಸ್ಥಳವಾದ ತಲಕಾವೇರಿಯಿಂದ ಬೆಳಿಗ್ಗೆ 6.30ಕ್ಕೆ ಆರಂಭವಾಗುವ ಈ ಪವಿತ್ರ ಯಾತ್ರೆಯು ಪೇರೂರು ಇಗ್ಗುತ್ತಪ್ಪ ಹಾಗೂ ನೆಲಜಿ ಇಗ್ಗುತ್ತಪ್ಪ ದೇವಾಲಯದ ಮೂಲಕ ಸಾಗಿಬಂದು, ಮಳೆ, ಬೆಳೆ ಹಾಗೂ ಸುಗ್ಗಿಯೊಂದಿಗೆ ಆಳವಾದ ಸಂಬಂಧ ಹೊಂದಿರುವ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಸಂಜೆ 6.30 ಗಂಟೆಗೆ ಅಂತ್ಯಗೊಳ್ಳಲಿದೆ. ಅಖಿಲ ಕೊಡವ ಸಮಾಜ, ಇಗ್ಗುತ್ತಪ್ಪ ದೇವಾಲಯ ಸಮಿತಿಗಳು, ಮಲ್ಮ ಬೆಟ್ಟ ಹೋರಾಟ ಸಮಿತಿಗಳು ಹಾಗೂ ಈ ಭಾಗದ ಗ್ರಾಮಸ್ಥರ ಸಹಕಾರದೊಂದಿಗೆ ಕೊಡಗು ಶಕ್ತಿ ನಡಪು ನಡೆಯಲಿದೆ ಎಂದರು.ಕೊಡಗಿನ ಪವಿತ್ರ ಯಾತ್ರಾ ಸ್ಥಳಗಳು ಪ್ರವಾಸಿತಾಣಗಳಾಗಿ ಮಾರ್ಪಟ್ಟಿವೆ. ಇದನ್ನು ತಪ್ಪಿಸಿ ಪಾವಿತ್ರ್ಯತೆಯನ್ನು ಕಾಪಾಡಬೇಕು, ಪಶ್ಚಿಮಘಟ್ಟ, ಕೊಡಗಿನ ಪಾರಂಪರಿಕ ಭೂಮಿಯನ್ನು ಉಳಿಸಬೇಕು, ಶ್ರೇಷ್ಠವಾದ ಕೊಡವ ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಜಾಗೃತಿ ಮೂಡಿಸಿ ವಿಶ್ವಮಟ್ಟದಲ್ಲಿ ಪ್ರತಿಬಿಂಬಿಸಬೇಕು ಎನ್ನುವ ಉದ್ದೇಶ ನಮ್ಮದು. ತಲಕಾವೇರಿಯಿಂದ ಆರಂಭಗೊಂಡು ಪಾಡಿ ಇಗ್ಗುತ್ತಪ್ಪ ದೇವಾಲಯದವರೆಗಿನ ಪ್ರದೇಶಗಳು ಅತ್ಯಂತ ಶ್ರೇಷ್ಠ ಮತ್ತು ಪವಿತ್ರ ಪ್ರದೇಶವಾಗಿದ್ದು, ಪ್ರತಿವರ್ಷ ಶ್ರದ್ಧಾಭಕ್ತಿಯಿಂದ ಯಾತ್ರೆ ಮಾಡುವುದರಿಂದ ಪ್ರಸ್ತುತ ಏರುಪೇರಾಗಿರುವ ಹವಾಗುಣ ಯಥಾಸ್ಥಿತಿಗೆ ಮರಳಲಿದೆ ಎಂದು ಅಭಿಪ್ರಾಯಪಟ್ಟರು.
ಕೊಡಗಿನಲ್ಲಿ 1214 ದೇವರಕಾಡು: ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ನ ಅಧ್ಯಕ್ಷ ಡಾ.ಸಿ.ಜಿ.ಕುಶಾಲಪ್ಪ ಅವರು ಮಾತನಾಡಿ ಪ್ರಕೃತಿ, ಸಂಸ್ಕೃತಿ ಮತ್ತು ಭವಿಷ್ಯ ಎಂಬ ಸಂದೇಶದೊಂದಿಗೆ ಯಾತ್ರೆ ನಡೆಯಲಿದೆ. ಪ್ರಕೃತಿ ಉಳಿದರೆ ಕೊಡಗಿನ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿ ಉಳಿದರೆ ಕೊಡಗು ಉಳಿಯುತ್ತದೆ. ಕೊಡಗಿನಲ್ಲಿ 1214 ದೇವರಕಾಡುಗಳಿದ್ದು, ವೈವಿಧ್ಯಮಯವಾದ ಈ ಪರಿಸರವನ್ನು ಉಳಿಸಬೇಕಾಗಿದೆ ಎಂದರು. ಪ್ರಸ್ತುತ ಜಿಲ್ಲೆಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಚರ್ಚೆ ನಡೆಯುತ್ತಿದೆ, ಕೇರಳ ಮಾಡಲ್ ಎಂದು ಪ್ರಸ್ತಾಪಿಸಲಾಗುತ್ತಿದೆ. ಆದರೆ ನಮಗೆ ಯಾವುದೇ ಮಾಡಲ್ ನ ಅಗತ್ಯವಿಲ್ಲ, ಕೊಡಗು ಮಾಡಲ್ ಸಾಕು, ಇಲ್ಲಿನ ಪ್ರಕೃತಿಯನ್ನು ಉಳಿಸಬೇಕು, ಕೊಡಗಿನ ಭೂಮಿ ಮಾರಾಟವಾಗುವುದನ್ನು ತಡೆಯಬೇಕು, ಯುವ ಸಮೂಹದಲ್ಲಿ ಜಾಗೃತಿ ಮೂಡಿಸಬೇಕು. ಈ ಉದ್ದೇಶದಿಂದ ಅ.3 ರಂದು ಕೊಡಗು ಶಕ್ತಿ ನಡಪು ನಡೆಯುತ್ತಿದ್ದು, ಒಂದೇ ದಿನ 40 ಕಿ.ಮೀ ಕ್ರಮಿಸುವುದಾಗಿ ಹೇಳಿದರು.ಮಲ್ಮ ಹಿತರಕ್ಷಣಾ ಸಮಿತಿಯ ಪ್ರಮುಖ ಮಣವಟ್ಟಿರ ಹರೀಶ್ ಕುಶಾಲಪ್ಪ ಮಾತನಾಡಿ ಕೊಡಗು ಬಂಡವಾಳಶಾಹಿಗಳ ದಬ್ಬಾಳಿಕೆಯಲ್ಲಿ ಸಿಲುಕಿಕೊಂಡಿದೆ. ಕೋಟಿಗಟ್ಟಲೆ ಹಣ ಸುರಿದು ಭೂಮಿಯನ್ನು ಖರೀದಿಸುತ್ತಿದ್ದಾರೆ, ಕೊಡಗು ಕೊಡಗಾಗಿ ಉಳಿಯಬೇಕಾಗಿದೆ. ಕೃಷಿ ಭೂಮಿ ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆಯಾಗದಂತೆ ತಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.ಪ್ರಮುಖರಾದ ಮೂಕಳೇರ ಕಾವ್ಯ ಅವರು ಮಾತನಾಡಿ ಕೊಡಗು ಉಳಿಯಬೇಕು, ಕೊಡವಾಮೆ ಬೆಳೆಯಬೇಕು. ಕೊಡಗು ಶಕ್ತಿ ನಡಪು ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ನೆಲಜಿ ಇಗ್ಗುತ್ತಪ್ಪ ದೇವಾಲಯದ ಪ್ರಮುಖ ಮಾಳೆಯಂಡ ವಿಜು ಅಚ್ಚಪ್ಪ ಉಪಸ್ಥಿತರಿದ್ದರು.