ಧರ್ಮಸ್ಥಳ ಪಾದಯಾತ್ರೆಗೆ ತಲಕಾವೇರಿ ಪುಣ್ಯತೀರ್ಥ ಸಂಗ್ರಹ

| Published : Mar 05 2024, 01:32 AM IST

ಸಾರಾಂಶ

ತಲಕಾವೇರಿಯಿಂದ ಸಂಗ್ರಹಿಸಿದ ಪುಣ್ಯತೀರ್ಥವನ್ನು ವಿಶೇಷ ಬೆಳ್ಳಿರಥದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಿಗೆ ಪಾದಯಾತ್ರೆಯೊಂದಿಗೆ ತೆರಳಿ ದೇವರಿಗೆ ಅರ್ಪಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಇಲ್ಲಿನ ಶ್ರೀ ಮಂಜುನಾಥ ಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ 26ನೇ ವರ್ಷದ ಪಾದಯಾತ್ರೆಯ ವಿಶೇಷವಾಗಿ ನಾಡಿನ ಲೋಕಕಲ್ಯಾಣಕ್ಕಾಗಿ ಅಭಿವೃದ್ಧಿಯ ಸಂಕಲ್ಪದೊಂದಿಗೆ ನಾಡಿನ ಜೀವನದಿ ತಲಕಾವೇರಿಯಿಂದ ಪುಣ್ಯತೀರ್ಥವನ್ನು ಪಾದಯಾತ್ರೆಯ ಸಮಿತಿಯ ಪದಾಧಿಕಾರಿಗಳು ಸಂಗ್ರಹಿಸಿದರು. ತೀರ್ಥವನ್ನು ಶನಿವಾರಸಂತೆಯ ಶ್ರೀ ಗಣಪತಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ತಂದು ಪೂಜೆ ಸಲ್ಲಿಸಿ ಇರಿಸಲಾಯಿತು.

ಮಂಗಳವಾರ ಬೆಳಗ್ಗೆ 9ಕ್ಕೆ ವಿಶೇಷ ಬೆಳ್ಳಿರಥದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಿಗೆ ಪಾದಯಾತ್ರೆಯೊಂದಿಗೆ ತೆರಳಿ ದೇವರಿಗೆ ಅರ್ಪಿಸಲಾಗುತ್ತದೆ. ಪಾದಯಾತ್ರೆಯ ಜೊತೆಯಲ್ಲಿ ಹಸಿರು ಬೆಳೆಸಿ ಜಲವನ್ನು ಉಳಿಸಿ ಎನ್ನುವ ಶೀರ್ಷಿಕೆಯೊಂದಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ.ಮಲೆನಾಡು ಪ್ರದೇಶದ ಬಿಸಿಲೆ ಘಾಟ್ ಮೂಲಕ ಪಾದಯಾತ್ರೆಗಳು ತೆರಳುವ ಜಾಗದಲ್ಲಿ ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತಲಕಾವೇರಿಯಿಂದ ತೀರ್ಥ ಸಂಗ್ರಹಕ್ಕೆ ಶ್ರೀ ಮಂಜುನಾಥ ಸ್ವಾಮಿಯ ಪಾದಯಾತ್ರೆಯ ಪದಾಧಿಕಾರಿಗಳಾದ ಶನಿವಾರ ಸಂತೆಯ ಎಸ್.ಆರ್‌. ರಾಜು, ಹಾಲ್ಕೆನೆ ಅಭಿಷೇಕ್, ಸುಮಂತ್ ಚಿಕ್ಕ ಕೊಳ್ತೂರು ಭಾಗವಹಿಸಿದ್ದರು.

------

8ರಂದು ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮ

ಕುಶಾಲನಗರ: ಕುಶಾಲನಗರ ಮುಳ್ಳುಸೋಗೆ ಗ್ರಾಮ ವ್ಯಾಪ್ತಿಯ ಬಸವೇಶ್ವರ ಬಡಾವಣೆ ಬಯಲು ಬಸವೇಶ್ವರ ದೇವಸ್ಥಾನ ಸಮಿತಿಯ 15ನೇ ವರ್ಷದ ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮ ಮತ್ತು 2023-24 ರ ಸಾಲಿನ ಮಹಾಸಭೆ 8ರಂದು ನಡೆಯಲಿದೆ. ಬಸವೇಶ್ವರ ಬಡಾವಣೆಯ ದೇವಾಲಯದ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಂದು ಬೆಳಗ್ಗೆ ಪೂಜಾ ಕಾರ್ಯಕ್ರಮ ನಡೆಯಲಿದೆ. ನಂತರ ಬಯಲು ಬಸವೇಶ್ವರ ಬಡಾವಣೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಟಿ.ಕೆ.ಸುದೀಪ್ ಕುಮಾರ್‌ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಮಡಿಕೇರಿ ಶಾಸಕ ಡಾ ಮಂತರ್ ಗೌಡ ಮತ್ತಿತರರು ಪಾಲ್ಗೊಳ್ಳುವರು. ಇದೇ ಸಂದರ್ಭ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಕುಶಾಲನಗರ ಪುರಸಭೆಯ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಅಧ್ಯಕ್ಷ ಟಿ.ಕೆ. ಸುದೀಪ್ ಕುಮಾರ್ ತಿಳಿಸಿದ್ದಾರೆ.ಕಾರ್ಯಕ್ರಮದ ಅಂಗವಾಗಿ ಬಡಾವಣೆಯ ಸಾರ್ವಜನಿಕ ಪುರುಷರಿಗೆ ಮಹಿಳೆಯರಿಗೆ ಹಿರಿಯ ನಾಗರಿಕರಿಗೆ ಆಟೋಟ ಸ್ಪರ್ಧೆ ಏರ್ಪಡಿಸಲಾಗಿದೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.