ಸಾರಾಂಶ
ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು. ಎರಡು ದಿನಗಳ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ತಾಳತ್ತಮನೆಯ ಶ್ರೀ ದುರ್ಗಾ ಭಗವತಿ ಕ್ಷೇತ್ರದಲ್ಲಿ ಶ್ರೀ ದುರ್ಗಾ ಭಗವತಿ, ಮಹಾಗಣಪತಿ ಹಾಗೂ ನಾಗ ಪರಿವಾರ ದೇವತೆಗಳ ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಗಳ ನೇತೃತ್ವದಲ್ಲಿ ದೇವಾಲಯದಲ್ಲಿ ಎರಡು ದಿನಗಳ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿತು.
ಫೆ.11ರ ಸಂಜೆಯಿಂದಲೇ ಹಸಿರು ಹೊರೆಕಾಣಿಕೆ, ಉಗ್ರಾಣ ಪೂಜೆ ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು. ರಾತ್ರಿ ದೀಪಾರಾಧನೆ, ಮಹಾಪೂಜೆ ನಂತರ ನೆರೆದಿದ್ದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು.ಮರುದಿನ ಪುಣ್ಯಾಹವಾಚನ, ಗಣಪತಿ ಹೋಮ, ಕಲಶ ಪೂಜೆ, ನಾಗತಂಬಿಲ, ಗುಳಿಗ, ಚಾಮುಂಡಿ ತಂಬಿಲ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಸಂಜೆ ಮಡಿಕೇರಿ ವಿಜಯ ವಿನಾಯಕ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ರಂಗಪೂಜೆ, ದೇವರ ಬಲಿ ಉತ್ಸವ, ಮಹಾದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ನೆರವೇರಿತು. ಗ್ರಾಮದ ವಿವಿಧೆಡೆಯಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.