ಪ್ರತಿಭೆ, ಪರಿಶ್ರಮದಿಂದ ಭವಿಷ್ಯದಲ್ಲಿ ದಾರಿಗಳು ಸುಲಭ: ಶ್ರೀನಿವಾಸ ಹೆಬ್ಬಾರ

| Published : Jul 13 2025, 01:19 AM IST

ಪ್ರತಿಭೆ, ಪರಿಶ್ರಮದಿಂದ ಭವಿಷ್ಯದಲ್ಲಿ ದಾರಿಗಳು ಸುಲಭ: ಶ್ರೀನಿವಾಸ ಹೆಬ್ಬಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಭೆ, ಪರಿಶ್ರಮವನ್ನು ನಮ್ಮಲ್ಲಿ ಬೆಳೆಸಿಕೊಂಡರೆ ಭವಿಷ್ಯದಲ್ಲಿ ದಾರಿಗಳು ಸುಲಭವಾಗಿ ಸಾಗುತ್ತವೆ.

ಶಿರಸಿ: ಪ್ರತಿಭೆ, ಪರಿಶ್ರಮವನ್ನು ನಮ್ಮಲ್ಲಿ ಬೆಳೆಸಿಕೊಂಡರೆ ಭವಿಷ್ಯದಲ್ಲಿ ದಾರಿಗಳು ಸುಲಭವಾಗಿ ಸಾಗುತ್ತವೆ. ಪ್ರತಿಭಾನ್ವಿತ ಅನೇಕ ವಿದ್ಯಾರ್ಥಿಗಳಿಗೆ ಸಮಾಜವೇ ಪ್ರೋತ್ಸಾಹಿಸುತ್ತದೆ ಎಂದು ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹೇಳಿದರು.

ಅವರು ಶನಿವಾರ ತಾಲೂಕಿನ ಗೋಳಿ ಸಿದ್ಧಿವಿನಾಯಕ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಓದಿನಿಂದಲೇ ಪ್ರತಿ ವ್ಯಕ್ತಿಯ ಜ್ಞಾನ ವೃದ್ಧಿಸುತ್ತದೆ. ಗ್ರಾಮೀಣ ಪ್ರದೇಶ ಅಥವಾ ಬಡತನ ಎಂಬುದು ಶಿಕ್ಷಣಕ್ಕೆ ಎಂದಿಗೂ ಅಡ್ಡಿಯಾಗುವುದಿಲ್ಲ. ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದಲ್ಲಿ ಕಲಿತು ವಿದೇಶಗಳಲ್ಲಿಯೂ ಉದ್ಯೋಗ ಮಾಡಿ, ಗೌರವದ ಸ್ಥಾನ ಪಡೆದ ಅನೇಕ ಉದಾಹರಣೆಗಳು ನಮ್ಮಲ್ಲಿವೆ. ಅನೇಕ ವಿದ್ಯಾರ್ಥಿಗಳಿಗೆ ನಾನೂ ಶಿಕ್ಷಣಕ್ಕೆ ಕೈ ಜೋಡಿಸಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಪ್ರಾಥಮಿಕ ಶಿಕ್ಷಣದ ವೇಳೆಯಲ್ಲಿಯೇ ಜ್ಞಾನ ಬೆಳೆಸಿಕೊಳ್ಳಿ ಎಂದರು.

ಐಎಎಸ್, ಕೆಎಎಸ್, ನೀಟ್, ಸಿಇಟಿ ಪರೀಕ್ಷೆಗಳನ್ನು ಯಾವ ರೀತಿ ನಡೆಸಲಾಗುತ್ತದೆ. ಇಲ್ಲಿಯ ಟಾಪರ್‌ಗಳು ಅನುಸರಿಸಿದ ವಿಧಾನಗಳೇನು ಎಂಬುದನ್ನೆಲ್ಲ ಸೂಕ್ಷಮವಾಗಿ ಗಮನಿಸುತ್ತ ಸಾಗಿ. ಮುಂದೆ ಸ್ಪರ್ಧಾತ್ಮ ಪರೀಕ್ಷೆಯನ್ನು ಸುಲಭವಾಗಿ ಎದುರಿಸುವ ಧೈರ್ಯ, ಕಲ್ಪನೆಗಳು ಈಗಿನಿಂದಲೇ ಸಾಕಾರಗೊಳಿಸಿಕೊಳ್ಳಬೇಕು ಎಂದರು.

ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಲು ಪಾಲಕರೇ ಹಿಂದೇಟು ಹಾಕುತ್ತಿರುವುದು ನೋವಿನ ಸಂಗತಿ. ಇಂಗ್ಲೀಷ್ ಶಾಲೆಯಲ್ಲಿ ಕಲಿತರಷ್ಟೇ ಮುಂದೆ ದೊಡ್ಡ ಉದ್ಯೋಗ ಪಡೆಯಲು ಸಾಧ್ಯ ಎಂಬ ಭ್ರಮೆಯಲ್ಲಿ ಪಾಲಕರಿದ್ದಾರೆ. ಆದರೆ, ವಿದ್ಯಾರ್ಥಿಯಲ್ಲಿನ ಪ್ರತಿಭೆ, ಜ್ಞಾನ ಕಲಿಯುವ ಭಾಷಾ ಮಾಧ್ಯಮವನ್ನು ಅನುಸರಿಸುವುದಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳೇ ಇಂದು ಎಸ್‌ಎಸ್‌ಎಲ್‌ಸಿಯಲ್ಲಿ ೬೨೫ ಅಂಕ ಪಡೆದು ರಾಜ್ಯಕ್ಕೇ ಮೊದಲ ಸ್ಥಾನ ಪಡೆದ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಸತತ ಪರಿಶ್ರಮ, ಸತತ ಜ್ಞಾನ ದಾಹವೇ ವಿದ್ಯಾರ್ಥಿಯನ್ನು ಪ್ರಜ್ವಲವಾಗಿ ಬೆಳಗುವಂತೆ ಮಾಡಲಿದೆ ಎಂದರು.

ಗ್ರಾಮದ ಪ್ರಮುಖ ವಿ.ಆರ್.ಭಟ್ಟ ತೊಣ್ಣೆಮನೆ ಮಾತನಾಡಿ, ಸಮಾಜದಲ್ಲಿ ದುಡಿದು ಹಣ ಗಳಿಸುವವರು ಅನೇಕರಿರುತ್ತಾರಾದರೂ ಸಾಮಾಜಿಕ ಕಾರ್ಯಕ್ಕೆ ಬಳಸುವವರ ಸಂಖ್ಯೆ ಕಡಿಮೆ. ಶ್ರೀನಿವಾಸ ಹೆಬ್ಬಾರ್ ಉದ್ಯಮಿಯಾಗಿ ತಮ್ಮ ಆದಾಯದ ಬಹುಪಾಲನ್ನೆ ಸಮಾಜಕ್ಕಾಗಿ ಕೊಡುಗೆ ನೀಡಿದ್ದಾರೆ ಎಂದರು.

ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ನಾರಾಯಣ ದೈಮನೆ ಮಾತನಾಡಿ, ಶ್ರೀನಿವಾಸ ಹೆಬ್ಬಾರರು ಶಿಸ್ತು ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿದವರು. ತಾಲೂಕಿನಲ್ಲಿ ೨೫ಕ್ಕಿಂತ ಹೆಚ್ಚಿನ ಕೆರೆಗಳ ಹೂಳೆತ್ತುವ ಮೂಲಕ ತಾಲೂಕಿನ ಜನತೆಗೆ ಜೀವ ಜಲ ನೀಡಿದ್ದಾರೆ. ಗ್ರಾಮಸ್ಥರ ಜೊತೆ ಬೆನ್ನೆಲುಬಾಗಿ ನಿಂತು ಅವರು ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರ ಆಗುವವರೆಗೂ ವಿರಮಿಸುವುದಿಲ್ಲ ಎಂದರು.

ಪ್ರೌಢ ಶಾಲೆ ಅಧ್ಯಕ್ಷ ಎಂ.ಎಲ್.ಹೆಗಡೆ ಹಲಸಿಗೆ ಮಾತನಾಡಿ, ಹಿಂದೆ ಪರೀಕ್ಷಾ ಸಿದ್ಧತೆಗೆ ವಿದ್ಯಾರ್ಥಿಗಳು ಬೇರೆಲ್ಲ ಕಡೆ ಮಾಹಿತಿ ಕಲೆಹಾಕಿ ಶ್ರಮಿಸಬೇಕಿತ್ತು. ಇಂದು ಮೊಬೈಲ್ ಮೂಲಕವೇ ಎಲ್ಲ ದಿನಪತ್ರಿಗೆಳು, ವಿದ್ಯಾರ್ಥಿಗಳಿಗೆ ಹಳೇ ಪ್ರಶ್ನೆಪತ್ರಿಕೆಗಳು, ಉತ್ತರಗಳು ಸಿಗುತ್ತಿವೆ. ವಿದ್ಯಾರ್ಥಿಗಳಿಂದ ಇನ್ನಷ್ಟು ಸಾಧನೆ ಹೊರಬರಲಿ ಎಂದರು.

ನೆಗ್ಗು ಗ್ರಾಪಂ ಸದಸ್ಯ ಚಂದ್ರಕಾಂತ ಹೆಗಡೆ ನೇರ್ಲದ್ದ, ಶಿಕ್ಷಕ ಗಣೇಶ ಹೆಗಡೆ, ವಿನಾಯಕ ನಾಡಿಗೇರ, ಅಶೋಕ್ ಇದ್ದರು.