ಯುವ ಸಮೂಹ ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಮತ್ತು ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಅವರು ಕರೆ ನೀಡಿದ್ದಾರೆ.
ಮಡಿಕೇರಿ : ಯುವ ಸಮೂಹ ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಮತ್ತು ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಅವರು ಕರೆ ನೀಡಿದ್ದಾರೆ.
ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ಮಡಿಕೇರಿಯ ಕೊಡಗು ಗೌಡ ಸಮಾಜದಲ್ಲಿ ನಡೆದ 2026ನೇ ಸಾಲಿನ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅರೆಭಾಷೆ ಸಮುದಾಯದ ಯುವ ಸಮೂಹಕ್ಕೆ ವಿದ್ಯೆ ಮತ್ತು ಸಂಸ್ಕೃತಿ ಎರಡೂ ಅತಿ ಮುಖ್ಯವಾಗಿದೆ. ವಿದ್ಯೆ ಎಂದರೆ ಕೇವಲ ಪದವಿ ಪಡೆದರೆ ಸಾಲದು ಐಎಎಸ್, ಐಪಿಎಸ್ ಗಳಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಈ ನಿಟ್ಟಿನಲ್ಲಿ ಕೊಡಗು ಗೌಡ ವಿದ್ಯಾ ಸಂಘ ಗಮನ ಹರಿಸಬೇಕು. ವಿದ್ಯಾ ಸಂಘವು ಜನಾಂಗದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಾಪನೆಯಾದ ಸಂಸ್ಥೆಯಾಗಿದೆ. ವಿದ್ಯಾಸಂಘ ನೀಡುವ ಪ್ರತಿಭಾ ಪುರಸ್ಕಾರದಿಂದ ಅನೇಕ ವಿದ್ಯಾರ್ಥಿಗಳು ಪ್ರೇರಣೆ ಪಡೆದು ಯಶಸ್ಸು ಸಾಧಿಸಿದ್ದಾರೆ ಎಂದರು.
ಉನ್ನತ ಹುದ್ದೆ ಹೊಂದುವ ಗುರಿ ಇಟ್ಟು ಶ್ರಮ ವಹಿಸಬೇಕು:ಅರೆಭಾಷೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದರೂ ಉನ್ನತ ಮಟ್ಟದ ಸರ್ಕಾರಿ ಹುದ್ದೆಗಳನ್ನು ಅಲಂಕರಿಸುವಲ್ಲಿ ಇನ್ನಷ್ಟು ಪ್ರಗತಿ ಸಾಧಿಸಬೇಕಿದೆ. ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗಳನ್ನು ಹೊಂದುವ ಗುರಿ ಇಟ್ಟುಕೊಂಡು ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು.ಮುಂದಿನ ಪೀಳಿಗೆಗೆ ಅರೆಭಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂದಿನ ಯುವ ಜನಾಂಗ ಸಂಸ್ಕೃತಿಯ ರಾಯಭಾರಿಗಳಾಗಿ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ತಾವು ಕಲಿಯುವ ಶಾಲಾ-ಕಾಲೇಜುಗಳ ಸಭೆ-ಸಮಾರಂಭಗಳಲ್ಲಿ ತಮ್ಮ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ-ತೊಡುಗೆ ಹಾಗೂ ಆಚಾರ-ವಿಚಾರಗಳನ್ನು ಪರಿಚಯಿಸಬೇಕು. ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ಆನಂದ ಕರಂದ್ಲಾಜೆ ಕರೆ ನೀಡಿದರು.ಕೊಡಗು ಗೌಡ ವಿದ್ಯಾ ಸಂಘದ ನೂತನ ಕಟ್ಟಡ ನಿರ್ಮಾಣದಲ್ಲಿ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಅವರು ತೋರುತ್ತಿರುವ ಆಸಕ್ತಿಯ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ವಿದ್ಯಾನಿಧಿ ದಾನಿಗಳು ಹಾಗೂ ಉದ್ಯಮಿ ಮುಕ್ಕಾಟಿ ಎ.ಮನೋಜ್ ಕುಮಾರ್ ಅವರು, ಗೌಡ ವಿದ್ಯಾಸಂಘವು ಹಲವು ಏಳುಬೀಳುಗಳನ್ನು ಎದುರಿಸಿ ಇಂದು ಉತ್ತಮ ಮಟ್ಟಕ್ಕೆ ಬೆಳೆದು ಬಂದಿದೆ. ಇದು ಸ್ಪರ್ಧಾತ್ಮಕ ಯುಗವಾಗಿದ್ದು, ವಿದ್ಯಾರ್ಥಿಗಳು ಬದಲಾಗುತ್ತಿರುವ ಸಮಾಜಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸಮುದಾಯದ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲೂ ಉತ್ಸಾಹದಿಂದ ಗುರುತಿಸಿಕೊಳ್ಳುವಂತಾಗಲು ಈ ರೀತಿಯ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬುವುದನ್ನು ಅರಿಯಲು ಪೋಷಕರು ಮಾರ್ಗದರ್ಶನ ನೀಡಬೇಕು. ಅದೇ ಸಮಯದಲ್ಲಿ ಮಕ್ಕಳ ಆಸಕ್ತಿ ಮತ್ತು ಅಭಿರುಚಿಗೆ ತಕ್ಕಂತೆ ಮುಂದುವರಿಯಲು ಅವಕಾಶ ಕಲ್ಪಿಸಿದರೆ ಅವರು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅರೆಭಾಷೆ ವಿದ್ಯಾರ್ಥಿಗಳು ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಹೆಚ್ಚು ಆಸಕ್ತಿ ತೋರಬೇಕು ಎಂದು ಕಿವಿಮಾತು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ಕುಶಾಲಪ್ಪ ಅವರು ಮಾತನಾಡಿ, ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಪ್ರೋತ್ಸಾಹ ನೀಡುವ ಹಾಗೂ ಅವರಲ್ಲಿ ಸಾಧನೆಯ ಉತ್ಸಾಹ ತುಂಬುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಮುದಾಯದ ಪ್ರತಿಭಾವಂತರನ್ನು ಗುರುತಿಸಿ, ಸನ್ಮಾನಿಸಿ ಗೌರವಿಸುವ ಉದ್ದೇಶದಿಂದ ಬಹಳ ಹಿಂದಿನಿಂದಲೂ ಈ ಸಮಾರಂಭವನ್ನು ನಡೆಸಿಕೊಂಡು ಬರಲಾಗುತ್ತಿದೆ. ಕಾರ್ಯಕ್ರಮಕ್ಕೆ ಹಲವು ದಾನಿಗಳು ಸಹಕಾರ ನೀಡುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸಮುದಾಯದ ಬಂಧುಗಳ ಸಹಕಾರವನ್ನು ನಿರೀಕ್ಷಿಸುವುದಾಗಿ ತಿಳಿಸಿದರು. 1908ರಲ್ಲಿ ಸ್ಥಾಪನೆಯಾದ ಕೊಡಗು ಗೌಡ ವಿದ್ಯಾ ಸಂಘವು ಗೌಡ ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವುದರೊಂದಿಗೆ ಸಂಘದ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯಲು ಉದಾರ ಮನಸ್ಸಿನ ದಾನಿಗಳ ಕೊಡುಗೆ ಪ್ರಮುಖವಾಗಿದೆ. ಪ್ರಸ್ತುತ ಕೊಡಗು ಗೌಡ ವಿದ್ಯಾ ಸಂಘದ ನೂತನ ಕಟ್ಟಡದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಈಗಾಗಲೇ 4 ಕೋಟಿ ರು. ಖರ್ಚು ಮಾಡಲಾಗಿದೆ. ಮತ್ತಷ್ಟು ಹಣದ ಅಗತ್ಯವಿದ್ದು, ಸಮಾಜದ ಬಂಧುಗಳು ಆರ್ಥಿಕ ಸಹಕಾರ ನೀಡಬೇಕು ಎಂದು ನವೀನ್ ಕುಶಾಲಪ್ಪ ಮನವಿ ಮಾಡಿದರು. ವಿದ್ಯಾನಿಧಿಯ ದಾನಿಗಳಾದ ನಿಕಟಪೂರ್ವ ಅಧ್ಯಕ್ಷರು ಹಾಗೂ ಉದ್ಯಮಿಗಳಾದ ಹೊಸೂರು ರಮೇಶ್ ಜೋಯಪ್ಪ, ನಿವೃತ್ತ ಪ್ರಾಂಶುಪಾಲರಾದ ತೆಕ್ಕಡೆ ಗುಲಾಬಿ ಜನಾರ್ಧನ ಹಾಗೂ ಚೇರಂಬಾಣೆ ಬಿ.ಬಾಡಗದ ಕಾಫಿ ಬೆಳೆಗಾರ ತೊತ್ತಿಯನ ಕೀರ್ತಿಕುಮಾರಿ ಮೋಹನ್ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಕೊಕ್ಕಲೆ ವಿ.ಸುಮಂತ್, ನಡುವಟ್ಟಿರ ಎಂ.ಬಿಪಿನ್ ಅಚ್ಚಪ್ಪ, ಕೆ.ಬಿ.ರೀಮಾ ಜಯಪ್ರಕಾಶ್, ಅಡಿಕೇರಿ ಎಸ್.ದಾಮಿನಿ, ಮೊಟ್ಟೆರ ಜೆ.ಯಾಶಿಕಾ ಹಾಗೂ ಸಿರಕಜೆ ಎಸ್.ಮೌಲ್ಯ ಶ್ರೀಧರ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 38, ಪಿಯುಸಿಯಲ್ಲಿ 42, ಪದವಿ 11 ಹಾಗೂ ಸಿಇಟಿಯ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಲ್ಲದೆ ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು.